ರೋಣ ಪಟ್ಟಣದ 1ನೇ ವಾರ್ಡಿನ ಸುಭಾಸ ನಗರ ಬಡಾವಣೆಗೆ 15 ದಿನಗಳಾದ್ರೂ ನೀರು ಪೂರೈಕೆ ಮಾಡಿಲ್ಲ, ಇದರಿಂದ ಅಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದ್ದು, ಗಮನ ಹರಿಸದೇ ಗಾಢನಿದ್ರೆಗೆ ಜಾರಿದ ಪುರಸಭೆ ಅಧಿಕಾರಿಗಳ ವರ್ತನೆಗೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ರೋಣ: ಪಟ್ಟಣದ 1ನೇ ವಾರ್ಡಿನ ಸುಭಾಸ ನಗರ ಬಡಾವಣೆಗೆ 15 ದಿನಗಳಾದ್ರೂ ನೀರು ಪೂರೈಕೆ ಮಾಡಿಲ್ಲ, ಇದರಿಂದ ಅಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದ್ದು, ಗಮನ ಹರಿಸದೇ ಗಾಢನಿದ್ರೆಗೆ ಜಾರಿದ ಪುರಸಭೆ ಅಧಿಕಾರಿಗಳ ವರ್ತನೆಗೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ನೀರು ಇಲ್ಲಂದ್ರೆ ಬಾಳ್ ಕಷ್ಟರೀ: 3 ದಿವಸಕ್ಕೊಮ್ಮೆ ನೀರು ಕೊಡುತ್ತೇವೆ ಎನ್ನುವ ಪುರಸಭೆ 15 ದಿನವಾದರೂ ನೀರು ಪೂರೈಕೆ ಮಾಡಿಲ್ಲ. ನೀರು ಇಲ್ಲಂದ್ರ ಜೀವನ ಸಾಗಿಸೋದು ಬಾಳ್ ಕಷ್ಟ ಐತ್ರಿ. ಬಟ್ಟೆ ಬರೆ ತೊಳೆಯಾಕ, ಜನ, ಜಾನುವಾರುಗಳಿಗೆ ಕುಡಿಯಾಕ ಇಲ್ಲಂದ್ರ ಏನ್ ಮಾಡಬೇಕ್ರಿ. ಹಬ್ಬದಾಗ ನೀರಿಲ್ಲ ಅಂದ್ರ ಹೆಂಗ್ರಿ ?. ಇವತ್ ಬರ್ತಾವು, ನಾಳೆ ಬರ್ತಾವು ಅಂತ ದಿನವಿಡೀ ಉದ್ಯೋಗ ಬಿಟ್ಟು ನೀರಿಗೆ ಕಾಯೊದೇ ಕೆಲಸವಾಗಿದೆ. ಎಲ್ಲೆಂದರಲ್ಲಿ ತರಾಕ ಹೋಗಬೇಕಾದ ಪರಿಸ್ಥಿತಿ ಬಂದೈತ್ರಿ. ನೀರು ಪೂರೈಸುವಂತೆ ಪುರಸಭೆ ಅಧಿಕಾರಿಗಳಿಗೆ ಮತ್ತು ನೀರು ಸರಬರಾಜು ಸಿಬ್ಬಂದಿಗೆ ವಿನಂತಿಸಿದರೂ ಸ್ಪಂದಿಸುತ್ತಿಲ್ಲ ಎಂದು ಬಡಾವಣೆ ನಿವಾಸಿಗಳಾದ ಬೀಬಿಜಾನ್ ಹುಲ್ಲೂರ, ನಿಂಬಣ್ಣ ಬ್ಯಾಳಿ, ಮಾಬುಸಾಬ ತಾಜಾಖಾನ, ಕಾವೇರಿ, ಮಹಬೂಬಿ ಮುಲ್ಲಾ ಅಳಲು ತೋಡಿಕೊಂಡರು.ಸದಸ್ಯನಿಂದಲೇ ನೀರಿನ ವ್ಯವಸ್ಥೆ: 15 ದಿನಗಳಿಂದ ನೀರು ಪೂರೈಕೆಯಾಗದಿರುವುದಕ್ಕೆ ಬೇಸತ್ ಸುಭಾಸ ನಗರ ಬಡಾವಣೆ ನಿವಾಸಿಗಳು 1ನೇ ವಾರ್ಡ್ ಸದಸ್ಯ ಮಲ್ಲಯ್ಯ ಮಹಾಪುರುಷಮಠ ಅವರ ಮನೆಗೆ ತೆರಳಿ ಸಮಸ್ಯೆ ಹೇಳಿಕೊಂಡಿದ್ದಾರೆ. ಆಗ ಸದಸ್ಯ ಮಲ್ಲಯ್ಯ ಅವರು ಪುರಸಭೆ ಮುಖ್ಯಾಧಿಕಾರಿ ರಮೇಶ ಗೊಂದಕರ ಅವರಲ್ಲಿ ಜನತೆ ಎದುರಿಸುವ ಸಮಸ್ಯೆ ಹೇಳಿ, ನೀರು ಪೂರೈಸುವಂತೆ ವಿನಂತಿಸಿದರು. ಇದಕ್ಕೆ ಸ್ಪಂದಿಸದ ಮುಖ್ಯಾಧಿಕಾರಿ ಧೋರಣೆಗೆ ಬೇಸತ್ತ ಸದಸ್ಯ ಮಲ್ಲಯ್ಯ ಮಹಾಪುರುಷಮಠ ಅವರೇ, ತಮ್ಮ ಸ್ವಂತ ಖರ್ಚಿನಿಂದ ಬಡಾವಣೆ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಿದ್ದಾರೆ. ಅಧಿಕಾರಿಗಳ ಧೋರಣೆಗೆ ಸದಸ್ಯ ಬೇಸರ: ಸುಭಾಸ ನಗರ ಬಡಾವಣೆಗೆ ಕಳೆದ 15 ದಿನಗಳಿಂದ ನೀರು ಪೂರೈಕೆ ಮಾಡಿಲ್ಲ.ಇದರಿಂದ ಇಲ್ಲಿನ ಜನತೆಗೆ ತೀವ್ರ ಸಮಸ್ಯೆಯಾಗುತ್ತಿದ್ದು, ಈ ಕುರಿತು ನೀರು ಸರಬರಾಜು ವಿಭಾಗ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮತ್ತು ಮುಖ್ಯಾಧಿಕಾರಿ ರಮೇಶ ಗೊಂದಕರ ಅವರಿಗೆ ಸಾಕಷ್ಟು ಬಾರಿ ನೀರು ಬಿಡುವಂತೆ ವಿನಂತಿಸಿದರೂ ಸ್ಪಂದಿಸುತ್ತಿಲ್ಲ. ಹೀಗಾದಲ್ಲಿ ವಾರ್ಡ್ ಜನತೆ ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಅವರಿಗೆ ಮೂಲ ಸೌಕರ್ಯ ಕಲ್ಪಿಸಲು ಆಗುತ್ತಿಲ್ಲ ಎಂಬ ನೋವು ಕಾಡುತ್ತಿದೆ. ಪುರಸಭೆ ಅಧಿಕಾರಿ ಬೇಜಾವಾಬ್ದಾರಿ, ಉದ್ದೇಶಪೂರ್ವಕ ನಿರ್ಲಕ್ಷ್ಯದಿಂದ 1ನೇ ವಾರ್ಡಿನ ಸುಭಾಸ ನಗರ ಬಡಾವಣೆ ಜನತೆ ನೀರು, ರಸ್ತೆ, ಚರಂಡಿ ಸಮಸ್ಯೆ ಎದುರಿಸುತ್ತಿದ್ದಾರೆ. ನೀರು ಪೂರೈಕೆಗೆ ಮೋಟಾರ್ ಕೆಟ್ಟಿದೆ, ಪೈಪ್‌ಲೈನ್ ದುರಸ್ತಿಯಿದೆ ಎಂದು ಅನಗತ್ಯ ನೆಪ ಮುಂದಿಟ್ಟು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ 1 ನೇ ವಾರ್ಡ್ ಸದಸ್ಯ ಮಲ್ಲಯ್ಯ ಮಹಾಪುರುಷಮಠ ಅವರು, ನೀರಿಲ್ಲದೇ ಸುಭಾಸ ನಗರ ಬಡಾವಣೆ ಜನತೆ ಪಡುತ್ತಿರುವ ಪಡಿಪಾಟಲು ನೋಡಲಾಗದೇ ನಾನೇ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇನೆ. ಈಗಲೇ ಹೀಗಾದರೇ ಮುಂದೆ ಬೇಸಿಗೆಯಲ್ಲಿ ಇನ್ನೆಷ್ಟು ತೊಂದರೆಯಾಗಬಹುದು ಎಂಬ ಪ್ರಶ್ನೆ ಕಾಡುತ್ತಿದೆ. ಕೂಡಲೇ ಅಧಿಕಾರಿಗಳು , ಶಾಸಕರು ಎಚ್ಚೆತ್ತುಕೊಂಡು ಸುಭಾಸ ನಗರ ಸೇರಿದಂತೆ ಪ್ರತಿಯೊಂದು ವಾರ್ಡಿಗೂ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಎಚ್ಚರಿಕೆ: ಕೂಡಲೇ ಸುಭಾಸ ನಗರ ಬಡಾವಣೆಗೆ ನೀರು ಪೂರೈಕೆ ಮಾಡದಿದ್ದಲ್ಲಿ ಸೋಮವಾರ ಪುರಸಭೆಗೆ ಮುತ್ತಿಗೆ ಹಾಕಿ ಕಾರ್ಯಾಲಯಕ್ಕೆ ಬೀಗ ಜಡಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜೊತೆಗೆ ಉದ್ದೇಶಪೂರ್ವಕವಾಗಿ ನೀರು ಪೂರೈಕೆಯಲ್ಲಿ ವಿಳಂಬ ಮಾಡುತ್ತಿರುವ ನೀರು ಸರಬರಾಜು ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮಜರುಗಿಸುವಂತೆ ಒತ್ತಾಯಿಸಲಾಗುವುದು ಎಂದು ನಿವಾಸಿಗಳಾದ ಅಶೋಕ ಚಲವಾದಿ, ಶಾಂತಪ್ಪ ಶೆಟ್ಟರ, ರಾಜಪ್ಪ ಪತ್ತಾರ, ನಿಂಬಣ್ಣ ಬ್ಯಾಳಿ, ನಜೀಮಾಬೇಗಂ ಕೆರೂರ, ನಫಿಸಾ ಲಾಲಮಿ, ಅನ್ನಪೂರ್ಣ ಮುದೇನಗುಡಿ, ಆಸ್ಮಾ ತಹಶೀಲ್ದಾರ, ಮಾಬುಸಾಬ ರಾಜಾಖಾನ ಎಚ್ಚರಿಕೆಯಿಂದ ಎಚ್ಚರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.