ಕೃಷಿಗಾಗಿ ಹೈಟೆಕ್‌ ಹಬ್‌ ಸ್ಥಾಪನೆ: ಚೆಲುವರಾಯ ಸ್ವಾಮಿ

KannadaprabhaNewsNetwork | Published : Oct 15, 2023 12:46 AM

ಸಾರಾಂಶ

ರೈತರ ಕಲ್ಯಾಣಕ್ಕಾಗಿ ಕೃಷಿಭಾಗ್ಯದ ಮೂಲಕ ಸರ್ಕಾರದ ವತಿಯಿಂದ 100 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಹಬ್ ಯೋಜನೆ ಸದ್ಯದಲ್ಲೇ ಪ್ರಾರಂಭಿಸಲಿದ್ದು, ರೈತರ ಮನೆ ಬಾಗಿಲಿಗೆ ಕೃಷಿ ಯಂತ್ರೋಪಕರಣಗಳ ಸೇವಾ ಸೌಲಭ್ಯ ಒದಗಿಸಲಾಗುವುದು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಕೃಷಿ ಕ್ಷೇತ್ರದ ಬೆಳವಣಿಗೆಗೆ ರಾಜ್ಯ ಸರ್ಕಾರವು 100 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಹಬ್ ಆಯೋಜಿಸಲು ಚಿಂತನೆ ನಡೆಸಿದೆ ಎಂದು ರಾಜ್ಯದ ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 2023-24ನೇ ಸಾಲಿನ ಕೃಷಿ ವಿಸ್ತರಣಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ರೈತರ ಕಲ್ಯಾಣಕ್ಕಾಗಿ ಕೃಷಿಭಾಗ್ಯದ ಮೂಲಕ ಸರ್ಕಾರದ ವತಿಯಿಂದ 100 ಕೋಟಿ ರು. ವೆಚ್ಚದಲ್ಲಿ ಹೈಟೆಕ್ ಹಬ್ ಯೋಜನೆ ಸದ್ಯದಲ್ಲೇ ಪ್ರಾರಂಭಿಸಲಿದ್ದು, ರೈತರ ಮನೆ ಬಾಗಿಲಿಗೆ ಕೃಷಿ ಯಂತ್ರೋಪಕರಣಗಳ ಸೇವಾ ಸೌಲಭ್ಯ ಒದಗಿಸಲಾಗುವುದು. ಕೃಷಿ ಯೋಜನೆಗಳ ಯಶಸ್ವಿಗೆ ಧರ್ಮಸ್ಥಳ ಕ್ಷೇತ್ರದಿಂದ ಬರುವ ಸಲಹೆಗಳ ಪಾಲನೆಗೆ ರಾಜ್ಯ ಸರ್ಕಾರ ಬದ್ಧ. ಯಂತ್ರೋಪಕರಣಗಳ ಸಹಾಯದಿಂದ ಕೃಷಿ ಉದ್ದಿಮೆಯನ್ನು ನಡೆಸಿಕೊಂಡು ಬಂದರೆ ಕೃಷಿ ಎಂಬುದು ಸಮಸ್ಯೆ ಆಗಲಾರದು. ಕೃಷಿ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲೆಯ ಎಲ್ಲ ಸಿ.ಇ.ಒ.ಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗುವುದು. ಇದರಿಂದ ರೈತರು ಸಮಸ್ಯೆಗಳ ಪರಿಹಾರಕ್ಕೆ ಬೆಂಗಳೂರಿಗೆ ಬರುವುದು ತಪ್ಪುತ್ತದೆ ಎಂದರು. ರಾಜ್ಯದಲ್ಲಿ 650 ಕೃಷಿ ಯಂತ್ರಧಾರಾ ಕೇಂದ್ರಗಳಿವೆ. ಅದರಲ್ಲಿ ಶ್ರೀ ಕ್ಷೇತ್ರದಿಂದ ನಿರ್ವಹಿಸುತ್ತಿರುವ 164 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಸರ್ಕಾರದ ಸಬ್ಸಿಡಿಯ ಸಹಾಯದಿಂದ ರೈತರಿಗೆ ಸುಲಭವಾಗಿ ಮತ್ತು ನೇರವಾಗಿ ಅನುಕೂಲವನ್ನು ಕ್ಷೇತ್ರದ ಯೋಜನೆಯು ಮಾಡುತ್ತಿರುವುದನ್ನು ಸಚಿವರು ಶ್ಲಾಘಿಸಿದರು. ತಂತ್ರಜ್ಞಾನವು ಕೃಷಿ ಕ್ಷೇತ್ರವನ್ನೂ ಪ್ರವೇಶಿಸಿರುವುದರಿಂದ ಈಗ ಕೃಷಿ ಕಾರ್ಯಗಳು ಸುಲಭವಾಗಿವೆ. ಹೀಗಾಗಿ ಕೃಷಿಯಿಂದ ಸಮೃದ್ಧ ಬದುಕು ಸಾಧ್ಯ ಎಂಬುದು ಸಾಬೀತಾಗುತ್ತಿದೆ. ತನ್ನ ಜೀವನ ನಿರ್ವಹಣೆಯೊಂದಿಗೆ ಅನೇಕರಿಗೆ ಕೆಲಸ ಕೊಡಲು ಸಾಧ್ಯವೆಂಬುದು ರೈತರಿಗೆ ಮನವರಿಕೆಯಾಗುತ್ತಿದೆ. ಇದನ್ನು ಅರ್ಥಮಾಡಿಕೊಂಡಿರುವ ಡಾ. ಹೆಗ್ಗಡೆಯವರು ಕೃಷಿಗೆ ಹೆಚ್ಚಿನ ಪ್ರಾಧಾನ್ಯ ಕೊಡುತ್ತಿರುವುದು ಗಮನೀಯ ಎಂದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಕೃಷಿಕ ಲಾಭ ನಷ್ಟವನ್ನು ಯೋಚಿಸದೆ ಸಮೃದ್ಧಿಯನ್ನು ತರುತ್ತಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಹವಾಮಾನ ವೈಪರೀತ್ಯ ಮತ್ತು ಅವಶ್ಯಕತೆಗಳನ್ನು ಗಮನಿಸಿ ಸರ್ಕಾರದ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಬೇಕು. ಕೇರಳದಲ್ಲಿ ಭತ್ತದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಕರ್ನಾಟಕದಲ್ಲಿಯೂ ಕೃಷಿಗೆ ಬೆಂಬಲ ಬೆಲೆ ನೀಡಬೇಕೆಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಕೃಷಿಯಲ್ಲಿ ಆದಾಯಕ್ಕಿಂತ ವೆಚ್ಚ ಜಾಸ್ತಿ ಆಗುವುದರಿಂದ ರೈತರು ಭತ್ತದ ಕೃಷಿಯಿಂದ ವಿಮುಖರಾಗಿ ತೆಂಗು, ಅಡಕೆ, ರಬ್ಬರ್ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಸುತ್ತಾರೆ. ಆದರೆ ಈಗ ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ಕೃಷಿಯೂ ಲಾಭದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತವೆ. ಸರ್ಕಾರದ ಎಲ್ಲಾ ಭಾಗ್ಯಗಳ ಜೊತೆಗೆ ರೈತರಿಗೆ ‘ಕೃಷಿ ಭಾಗ್ಯ’ವೂ ದೊರಕಿ ರೈತರ ಭಾಗ್ಯದ ಬಾಗಿಲು ತೆರೆಯುವಂತಾಗಲಿ ಎಂದು ಹಾರೈಸಿದರು. ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಡಾ.ಹೇಮಾವತಿ ಹೆಗ್ಗಡೆ, ಕೃಷಿ‌ ಕಾರ್ಯಕ್ರಮಗಳ ವಾರ್ಷಿಕ‌ ವರದಿ ಬಿಡುಗಡೆ ಮಾಡಿದರು. ಡಿ.ಹರ್ಷೇಂದ್ರ ಕುಮಾರ್, ಕೃಷಿ‌ ವಿಸ್ತರಣಾ ಕಾರ್ಯಕ್ರಮಗಳ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ವಾರ್ಷಿಕ ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ವಿಮಲ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಎಚ್.ಕೆಂಪೇಗೌಡ, ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್‌ಕುಮಾರ್, ಟ್ರಸ್ಟಿ ಸಂಪತ್ ಸಾಮ್ರಾಜ್ಯ, ಧನಲಕ್ಷ್ಮೀ ಚೆಲುವರಾಯಸ್ವಾಮಿ, ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಕೃಷಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್ ಇದ್ದರು. ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ವಂದಿಸಿದರು. ಕೃಷಿ ಅಧಿಕಾರಿ ರಾಮ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸರ್ಕಾರ-ಖಾಸಗಿ ಸಹಭಾಗಿತ್ವ 100 ಕೋಟಿ ರು. ವೆಚ್ಚದ ಹೈಟೆಕ್ ಹಬ್ ಯೋಜನೆಯಲ್ಲಿ ಶೇ.೭೦ರಷ್ಟು ಹಣ ಸರ್ಕಾರ ಭರಿಸುತ್ತದೆ. ಉಳಿದ ಶೇ.೩೦ ಹಣವನ್ನು ಖಾಸಗಿ ಸಂಸ್ಥೆಗಳು ಭರಿಸಬೇಕಾಗುತ್ತದೆ. ಖಾಸಗಿ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಯೋಜನೆ ಶೀಘ್ರ ಅನುಷ್ಠಾನಗೊಂಡು ರೈತರ ಭಾಗ್ಯದ ಬಾಗಿಲು ತೆರೆಯಲಿದೆ. ಈ ಬಗ್ಗೆ ಸರ್ಕಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸಕ್ರಿಯ ಸಹಕಾರವನ್ನು ಸಚಿವ ಚೆಲುವರಾಯ ಸ್ವಾಮಿ ಕೋರಿದರು. ಮಹಿಳೆಯರಿಗೆ ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ಐದು ಲಕ್ಷ ರು. ಸಾಲ ನೀಡಲಾಗುತ್ತದೆ. ಸಾಲ ಮಂಜೂರಾತಿಯಲ್ಲಿ ಕೆಲವು ಸಮಸ್ಯೆಗಳಿದ್ದು, ಈ ಬಗ್ಗೆ ಈಗಾಗಲೇ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು. ಕೃಷಿ ಇಲಾಖೆಯಲ್ಲಿ ಖಾಲಿ ಇರುವ ೩೫೦ ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಸದ್ಯದಲ್ಲೆ ಇನ್ನೂ ೨೦೦೦ ಸಿಬ್ಬಂದಿ ನೇಮಕಾತಿ ಮಾಡಲಾಗುವುದು ಎಂದರು. ರೈತರಿಗೆ ಡಿಸೇಲ್‌ ಸಬ್ಸಿಡಿ ನೀಡಿ ಕೃಷಿ ಯಂತ್ರ ಧಾರಾ ಯೋಜನೆಯಲ್ಲಿ ರೈತರಿಗೆ ಯಂತ್ರಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಡಿಸೇಲ್ ದರ ಹೆಚ್ಚಿರುವುದರಿಂದ ಬಾಡಿಗೆ ಹೆಚ್ಚು ಮಾಡಬೇಕಾಗುತ್ತದೆ. ಇದನ್ನು ರೈತರು ಒಪ್ಪುವುದಿಲ್ಲ. ಹೀಗಾಗಿ ಮೀನುಗಾರರಿಗೆ ಅನೇಕ ವರ್ಷಗಳಿಂದ ನೀಡುತ್ತಿರುವ ಸಬ್ಸಿಡಿ ಡಿಸೇಲ್‌ನಂತೆ ರೈತರಿಗೂ ಸಬ್ಸಿಡಿಯಲ್ಲಿ ಡಿಸೇಲ್ ನೀಡಬೇಕು ಎಂದು ಸಚಿವರಲ್ಲಿ ಡಾ.ಎಲ್. ಎಚ್. ಮಂಜುನಾಥ ಬೇಡಿಕೆಯಿಟ್ಟರು.

Share this article