ಕನ್ನಡಪ್ರಭ ವಾರ್ತೆ ಕಾರ್ಕಳ ಕಾರ್ಕಳದ ಬೈಲೂರಿನ ವಿವಾದಿತ ಪರಶುರಾಮ ಮೂರ್ತಿಯ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಉಮ್ಮಿಕಲ್ ಬೆಟ್ಟಕ್ಕೆ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಭೇಟಿ ಶನಿವಾರ ಭೇಟಿ ನೀಡಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಅವರು, ಪರಶುರಾಮನ ಕಂಚಿನ ಮೂರ್ತಿಯ ಕಾಲಿನ ಭಾಗ ಮಾತ್ರವಿದ್ದು, ದೇಹದ ಉಳಿದ ಭಾಗಗಳನ್ನು ತೆರವುಗೊಳಿಸಲಾಗಿದೆ. ಆದರೆ ನಿರ್ಮಿತಿ ಕೇಂದ್ರದ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಇದರ ಪರಿಶೀಲನೆಗಾಗಿ ಎನ್‌ಐಟಿಕೆ ಹಾಗೂ ಎಂಐಟಿ ತಂತ್ರಜ್ಞರ ತಂಡ ಅಗಮಿಸಿ ಮೂರ್ತಿಯ ಅಡಿಪಾಯ ಪರಿಶೀಲನೆ ನಡೆಸಬೇಕು. ಬೈಲೂರು ಪರಶುರಾಮ ಥೀಮ್ ಪಾರ್ಕ್‌ಗೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಬರಬೇಕು. ಪ್ರವಾಸೋದ್ಯಮ ಬೆಳೆಯಬೇಕು. ಆದರೆ ಜನರ ದಿಕ್ಕು ತಪ್ಪಿಸಿ ಕಾಮಗಾರಿ ನಡೆಸುವುದು ತಪ್ಪು ಎಂದರು. ತೆರವುಗೊಳಿಸಿದ ಪರಶುರಾಮ ಮೂರ್ತಿಯ ಡ್ರೋನ್ ಚಿತ್ರ ಸೆರೆಹಿಡಿಯಲಾಗಿದೆ. ಆ ಮೂಲಕ ಪರಶುರಾಮ ಥೀಮ್ ಪಾರ್ಕ್‌ನ ಪರಶುರಾಮ ಮೂರ್ತಿಯ ಕಾಲಿನ ಭಾಗ ಬಿಟ್ಟು ಉಳಿದ ಫೈಬರ್‌ನಿಂದ ನಿರ್ಮಿಸಲಾದ ಭಾಗವನ್ನು ತೆರವುಗೊಳಿಸಲಾಗಿದೆ. ಇದೇ ಸಂದರ್ಭ ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್, ಸುಭಿತ್ ಕುಮಾರ್ ಎನ್., ಸುನೀಲ್ ಭಂಡಾರಿ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.