ಹೊಳೆನರಸೀಪುರದ ತೇರಿಗೆ ಹಳೆಯ ಬಟ್ಟೆಗಳ ಅಲಂಕಾರ

KannadaprabhaNewsNetwork | Published : Mar 13, 2025 12:47 AM

ಸಾರಾಂಶ

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಮಾರ್ಚ್ ೧೩ರ ಗುರುವಾರ ನಡೆಯಲಿದೆ. ಜಾತ್ರೋತ್ಸವಕ್ಕೆ ನವವಧುವಿನಂತೆ ಶೃಂಗಾರಗೊಂಡು ವೈಭವದಿಂದ ಕಂಗೊಳಿಸಬೇಕಿದ್ದ ಶ್ರೀ ಸ್ವಾಮಿಯ ಬ್ರಹ್ಮರಥಕ್ಕೆ ಹರಿದ ಹಾಗೂ ಮಾಸಿದ ಬಟ್ಟೆಗಳನ್ನು ತೊಡಿಸುವ ಮೂಲಕ ಶ್ರೀ ಸ್ವಾಮಿಯ ಭಕ್ತರಿಗೆ ಅವಮಾನ ಮಾಡಿರುವ ಜತೆಗೆ ರಥಕ್ಕೆ ಒಳ್ಳೆಯ ಬಟ್ಟೆ ಹಾಕಲೂ ಮುಜರಾಯಿ ಇಲಾಖೆಯಲ್ಲಿ ಹಣವಿಲ್ಲವೆಂದು ಫೆ.೧೭ರಂದು ಶಾಸಕ ಎಚ್.ಡಿ.ರೇವಣ್ಣ ಅವರು ಮಾಡಿರುವ ಆರೋಪಕ್ಕೆ ಕೈಗನ್ನಡಿಯಂತಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಮಾರ್ಚ್ ೧೩ರ ಗುರುವಾರ ನಡೆಯಲಿದೆ. ಜಾತ್ರೋತ್ಸವಕ್ಕೆ ನವವಧುವಿನಂತೆ ಶೃಂಗಾರಗೊಂಡು ವೈಭವದಿಂದ ಕಂಗೊಳಿಸಬೇಕಿದ್ದ ಶ್ರೀ ಸ್ವಾಮಿಯ ಬ್ರಹ್ಮರಥಕ್ಕೆ ಹರಿದ ಹಾಗೂ ಮಾಸಿದ ಬಟ್ಟೆಗಳನ್ನು ತೊಡಿಸುವ ಮೂಲಕ ಶ್ರೀ ಸ್ವಾಮಿಯ ಭಕ್ತರಿಗೆ ಅವಮಾನ ಮಾಡಿರುವ ಜತೆಗೆ ರಥಕ್ಕೆ ಒಳ್ಳೆಯ ಬಟ್ಟೆ ಹಾಕಲೂ ಮುಜರಾಯಿ ಇಲಾಖೆಯಲ್ಲಿ ಹಣವಿಲ್ಲವೆಂದು ಫೆ.೧೭ರಂದು ಶಾಸಕ ಎಚ್.ಡಿ.ರೇವಣ್ಣ ಅವರು ಮಾಡಿರುವ ಆರೋಪಕ್ಕೆ ಕೈಗನ್ನಡಿಯಂತಿದೆ.

ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ನೂರಾರು ವರ್ಷಗಳ ರಥವು ಬಳಕೆಗೆ ಯೋಗ್ಯವಾಗಿಲ್ಲವೆಂದು ತಜ್ಞರು ತಿಳಿಸಿದ ನಂತರ ಶಾಸಕ ಎಚ್.ಡಿ.ರೇವಣ್ಣ ತೋರಿದ ವಿಶೇಷ ಕಾಳಜಿಯಿಂದಾಗಿ ಕೋಟಿ ರುಪಾಯಿಗೂ ಹೆಚ್ಚು ಖರ್ಚು ಮಾಡಿ ನುರಿತ ಶಿಲ್ಪಿಗಳ ಕೆತ್ತನೆಯೊಂದಿಗೆ ಆಕರ್ಷಕವಾಗಿ ರಥ ನಿರ್ಮಿಸಲಾಗಿತ್ತು. ಜತೆಗೆ ಹನ್ನೆರಡು ವರ್ಷಗಳಿಂದ ಆ ರಥದಲ್ಲಿ ಶ್ರೀ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಜರುಗುತ್ತಿತ್ತು. ಆದರೆ ರಥೋತ್ಸವ ನಡೆದ ನಂತರ ತಿಂಗಳುಗಳು ಕಳೆದರೂ ಬಿಸಿಲು ಮಳೆಯಿಂದ ರಕ್ಷಣೆಗಾಗಿ ಶೆಲ್ಟರ್ ನಿರ್ಮಿಸದೇ ಹಾಗೇ ಬಿಡಲಾಗುತ್ತಿತ್ತು. ಮಳೆಯಲ್ಲಿ ನೆಂದು ಬಿಸಿಲಲ್ಲಿ ಒಣಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ರಥವೆಂದು ಪ್ರತಿವರ್ಷ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡು, ಹಲವಾರು ದಿನಗಳು ಕಳೆದ ನಂತರ ಶೆಲ್ಟರ್ ನಿರ್ಮಿಸುತ್ತಿದ್ದ ಕಾರಣ ರಥವನ್ನು ಸಿಂಗರಿಸುವ ಬಟ್ಟೆಗಳು ಹಾಗೂ ಮರದ ಅಟ್ಟಣಿಗೆಗಳು ತನ್ನ ಅಸ್ತಿತ್ವ ಕಳೆದುಕೊಂಡಿದೆ.

ಪಟ್ಟಣದ ಪ್ರಮುಖ ವೃತ್ತಗಳು, ರಸ್ತೆಗಳು ಹಾಗೂ ಜನ ಓಡಾಟ ಕಡಿಮೆ ಇರುವ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿ, ಅದರ ಬೆಳಕಿನಲ್ಲಿ ಪಟ್ಟಣವು ಪ್ರಜ್ವಲಿಸುವಂತೆ ಮಾಡಲಾಗಿದೆ. ಈ ಸಂಭ್ರಮಾಚರಣೆಗೆ ಕಾರಣಕರ್ತವಾದ ಶ್ರೀ ಬಹ್ಮರಥೋತ್ಸವದ ರಥವನ್ನು ಹರಿದ ಹಾಗೂ ಮಾಸಿದ ಬಟ್ಟೆಯಿಂದ ಸಿಂಗರಿಸಿರುವುದು ವ್ಯವಸ್ಥೆಯನ್ನು ಅಣಕಿಸುವಂತಿದೆ.

Share this article