49 ಪಶು ಆಸ್ಪತ್ರೆಗಳಿಗೆ ಇರುವುದು ಕೇವಲ 7 ವೈದ್ಯರು

KannadaprabhaNewsNetwork | Published : Dec 17, 2023 1:46 AM

ಸಾರಾಂಶ

ಚನ್ನರಾಯಪಟ್ಟಣ ತಾಲೂಕಿನಲ್ಲಿ ೪೯ ಪಶು ಆಸ್ಪತ್ರೆ ಇದ್ದರೆ ಕೇವಲ ೭ ಮಂದಿ ವೈದ್ಯರು ಮಾತ್ರ ಇದ್ದಾರೆ, ಇದಲ್ಲದೆ ಪಶು ಪರಿವೀಕ್ಷಕರು, ಜಾನುವಾರು ಅಭಿವೃದ್ಧಿ ಅಧಿಕಾರಿ, ಆಸ್ಪತ್ರೆ ಮೈಲ್ವಿಚಾರಕರು, ಡಿಗ್ರೂಪ್ ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳು ದಶಕಗಳಿಂದ ಖಾಲಿ ಇದ್ದರು ನೇಮಕಾತಿ ಮಾಡಲು ಸರ್ಕಾರಗಳು ಮುಂದಾಗುತ್ತಿಲ್ಲ. ಇದರಿಂದಾಗಿ ಹೈನುಗಾರಿಕೆ ಮಾಡುವ ರೈತರಿಗೆ ಹಾಗೂ ರಾಸುಗಳನ್ನು ಹೊಂದಿರುವವರಿಗೆ ಸಮರ್ಪಕ ಸೇವೆ ದೊರೆಯದೆ ಬಹಳ ತೊಂದರೆ ಅನುವಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಶುಗಳಿಗೆ ಚಿಕಿತ್ಸೆ ನೀಡಬೇಕಾದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಕಾಡುತ್ತಿದ್ದು ತಾಲೂಕಿನ ಜಾನುವಾರುಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ.

ತಾಲೂಕಿನಲ್ಲಿ ೪೯ ಪಶು ಆಸ್ಪತ್ರೆ ಇದ್ದರೆ ಕೇವಲ ೭ ಮಂದಿ ವೈದ್ಯರು ಮಾತ್ರ ಇದ್ದಾರೆ, ಇದಲ್ಲದೆ ಪಶು ಪರಿವೀಕ್ಷಕರು, ಜಾನುವಾರು ಅಭಿವೃದ್ಧಿ ಅಧಿಕಾರಿ, ಆಸ್ಪತ್ರೆ ಮೈಲ್ವಿಚಾರಕರು, ಡಿಗ್ರೂಪ್ ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳು ದಶಕಗಳಿಂದ ಖಾಲಿ ಇದ್ದರು ನೇಮಕಾತಿ ಮಾಡಲು ಸರ್ಕಾರಗಳು ಮುಂದಾಗುತ್ತಿಲ್ಲ. ಇದರಿಂದಾಗಿ ಹೈನುಗಾರಿಕೆ ಮಾಡುವ ರೈತರಿಗೆ ಹಾಗೂ ರಾಸುಗಳನ್ನು ಹೊಂದಿರುವವರಿಗೆ ಸಮರ್ಪಕ ಸೇವೆ ದೊರೆಯದೆ ಬಹಳ ತೊಂದರೆ ಅನುವಿಸುತ್ತಿದ್ದಾರೆ.

ಐದು ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಚನ್ನರಾಯಪಟ್ಟಣವ ಹೊರತುಪಡಿಸಿದರೆ, ನುಗ್ಗೇಹಳ್ಳಿ, ಹಿರೀಸಾವೆ, ಶ್ರವಣಬೆಳಗೊಳ, ಬಾಗೂರು ಈ ನಾಲ್ಕು ಪಶು ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರಿಲ್ಲ, ೨೧ ಪಶು ಚಿಕಿತ್ಸಾಲಯ ಹಾಗೂ ೨೩ ಪ್ರಾಥಮಿಕ ಪಶು ಚಿಕಿತ್ಸಾಲಯಕ್ಕೆ ಕೇಲವ ಆರು ಮಂದಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ, ಇನ್ನು ಆಸ್ಪತ್ರೆಯ ವಿವಿ ಹುದ್ದೆಗಳು ಖಾಲಿ ಇದೆ.

ಎಷ್ಟು ಮಂದಿ ಸೇವೆ: ತಾಲೂಕಿನಲ್ಲಿ ೨೮ ವೈದ್ಯಾಧಿಕಾರಿ ಹುದ್ದೆ ಇದ್ದು ಏಳು ಮಂದಿ ಸೇವೆ ಸಲ್ಲಿಸುತ್ತಿದ್ದಾರೆ, ಜಾನುವಾರು ಅಭಿವೃದ್ಧಿ ಅಧಿಕಾರಿ ಒಬ್ಬರಿದ್ದಾರೆ, ಹಿರಿಯ ಪಶುವೈದ್ಯ ಪರೀಕ್ಷಕರು ಹುದ್ದೆ ೨೯ ಇದ್ದು ೧೩ ಮಂದಿ ಇದ್ದಾರೆ, ಪಶುವೈದ್ಯ ಪರೀಕ್ಷರ ೧೬ ಹುದ್ದೆಗೆ ೧೬ ಮಂದಿ ಇದ್ದಾರೆ, ಕಿರಿಯ ಪಶುವೈದ್ಯ ಪರೀಕ್ಷಕರು ೩೦ ಹುದ್ದೆ ಇದ್ದು ಕೇಲವ ೬ ಮಂದಿ ಸೇವೆ ಮಾಡುತ್ತಿದ್ದಾರೆ, ಜಾನುವಾರು ಅಧಿಕಾರಿ ೪ ಸ್ಥಾನ ಇದ್ದು ೩ ಮಂದಿ ಸೇವೆ ಸಲ್ಲಿಸುತ್ತಿದ್ದಾರೆ, ಡಿಗ್ರೂಪ್ ನೌಕರರು ೭೦ ಹುದ್ದೆ ಇದ್ದು ೧೨ ಮಂದಿ ಮಾತ್ರ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವೈದ್ಯರಿರುವ ಆಸ್ಪತ್ರೆ: ತಾಲೂಕಿನ ಮಟ್ಟನವಿಲೆ, ಉದಯಪುರ, ದಂಡಿಗನಹಳ್ಳಿ, ಕುಂಬೇನಹಳ್ಳಿ ಬೋರೆ, ಜುಟ್ಟನಹಳ್ಳಿ ಅತ್ತಿಹಳ್ಳಿ ಪಶು ಚಿಕಿತ್ಸಾಲಯಗಳಲ್ಲಿ ಮಾತ್ರ ವೈದ್ಯರಿದ್ದು ಅವರು ತಮ್ಮ ಆಸ್ಪತ್ರೆ ಜೊತೆಯಲ್ಲಿ ಅಕ್ಕಪಕ್ಕದ ನಾಲ್ಕೈದು ಆಸ್ಪತ್ರೆಗೂ ತೆರಳಿ ಅಲ್ಲಿನ ಪಶುಗಳ ಆರೋಗ್ಯ ತಪಾಸಣೆ ಮಾಡಬೇಕಾಗಿದೆ. ಓರ್ವ ವೈದ್ಯನಿಗೆ ಎಷ್ಟು ಆಸ್ಪತ್ರೆ: ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಶೇಖರ್, ಚನ್ನರಾಯಪಟ್ಟಣದ ತಾಲೂಕು ಕೇಂದ್ರದಲ್ಲಿನ ಕಚೇರಿಯಲ್ಲಿ ಸೇವೆ ಸಲ್ಲಿಸಬೇಕು. ಆದರೆ ಇವರು ಪಟ್ಟಣ ಅಕ್ಕಪಕ್ಕದಲ್ಲಿ ೮ ಆಸ್ಪತ್ರೆಗಳಿಗೆ ತೆರಳಿ ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ, ಡಾ.ಸುಬ್ರಹ್ಮಣ್ಯ ಹಾಗೂ ಡಾ.ಶ್ರೀಧರ್ ತಲಾ ೯ ಪಶು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಡಾ.ಪ್ರಮೋದ್ ೧೧ ಆಸ್ಪತ್ರೆ, ಡಾ.ಪ್ರವೀಣ್, ಡಾ.ಮಂಜುನಾಥ್ ತಲಾ ೫ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದರೆ ನೂತನವಾಗಿ ತಾಲೂಕಿಗೆ ಆಗಮಿಸಿರುವ ಡಾ.ಕಾವ್ಯ ಎರಡು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಯಿಲೆ ನಿಯಂತ್ರಣ ಕಷ್ಟ: ಬೇಸಿಗೆ ಸಮೀಪಿಸಿದೆ, ಈ ವೇಳೆಯಲ್ಲಿ ರಾಸುಗಳಿಗೆ ರೈತರು ಒಣ ಮೇವು ಹಾಕುತ್ತಾರೆ, ಇನ್ನು ಬಿಸಿಲ ತಾಪಕ್ಕೆ ಚಪ್ಪೆರೋಗ, ಕುಂದುರೋಗ, ಗಂಟಲುಬೇನೆ, ಕಾಲುಬೇನೆ, ಕರಳುಬೇನೆ, ಕೆಚ್ಚಲು ಬಾವು, ಕಾಲು ಬಾಯಿರೋಗ ಬರುವುದಲ್ಲದೆ ಹಲವು ರಾಸುಗಳು ಸೇವನೆ ಮಾಡುವ ಆಹಾರ ವಿಷವಾಗುತ್ತದೆ. ಇಂತಹ ವೇಳೆಯಲ್ಲಿ ಚಿಕತ್ಸೆ ಕೊಡಿಸಲು ರೈತರು ಹರಸಾಹಸ ಪಡುವಂತಾಗಿದೆ, ಇದಲ್ಲದೆ ಕುರಿ, ಕೋಳಿ, ಮೇಕೆ, ಕೋಳಿ, ನಾಯಿ, ಬೆಕ್ಕುಗಳಿಗೆ ರೋಗ ಬಂದರೂ ವೈದ್ಯರನ್ನು ಸಂಪರ್ಕಿಸುವುದು ಕಷ್ಟವಾಗುತ್ತಿದೆ. ಹೆಚ್ಚು ಒತ್ತಡ: ತಾಲೂಕಿನಲ್ಲಿ ಇರುವ ಬೆರಳೆಣಿಕೆಯಷ್ಟು ವೈದ್ಯರು ಜಾನುವಾರುಗಳ ತಪಾಸಣೆಯನ್ನು ಮಾತ್ರ ಮಾಡುತ್ತಿಲ್ಲ, ಚಿರತೆ ದಾಳಿಗೆ ತುತ್ತಾದವುಗಳ ತಪಾಸಣೆ ಮಾಡುವುದು, ಒಂದು ವೇಳೆ ರಾಸುಗಳು ರೋಗಕ್ಕೆ ತತ್ತಾಗಿ ಮೃತಪಟ್ಟರೆ ಮಹಜರ್ ಮಾಡಿ ವರದಿ ನೀಡುವುದು, ವಿಮೆ ದೃಢೀಕರಣ ಕೆಲಸವನ್ನು ಇರವು ವೈದ್ಯರೇ ಮಾಡಬೇಕಾಗಿದೆ, ಇನ್ನು ಲಸಿಕಾ ಅಭಿಯಾನದಲ್ಲಿ ಪಾಲ್ಗೊಳಬೇಕು, ರೈತರಿಗೆ ಶಿಬಿರ ಏರ್ಪಡಿಸಿ ರಾಸುಗಳನ್ನು ಯಾವ ರೀತಿಯಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಇವರೇ ನೀಡಬೇಕಾಗಿದ್ದು ಒತ್ತಡದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಧಿಕಾರಿಯೂ ಆಸ್ಪತ್ರೆಗೆ ತೆರಳುತ್ತಿದ್ದಾರೆ: ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಶೇಖರ್ ತಾಲೂಕಿನ ಎಲ್ಲಾ ಪಶು ಆಸ್ಪತ್ರೆಗಳನ್ನು ನೋಡಿಕೊಳ್ಳುವುದಲ್ಲದೆ ಎಲ್ಲಿ ವೈದ್ಯರು ಸರಿಯಾಗಿ ಸೇವೆ ಮಾಡುತ್ತಿದ್ದಾರೆ ಎನ್ನುವುದನ್ನು ಗಮನ ಹರಿಸಬೇಕು. ಇದರೊಂದಿಗೆ ಸರ್ಕಾರದ ಯೋಜನೆಯನ್ನು ಜನತೆಗೆ ತಲುಪಿಸುವ ಕೆಲಸ, ತಾಲೂಕು ಪಂಚಾಯತಿ ಸಾಮಾನ್ಯ ಸಭೆ, ಕೆಡಿಪಿ ಸಭೆ, ಶಾಸಕರ ಸಭೆ ಸೇರಿದಂತೆ ವಿವಿಧ ಸಭೆಗೆ ಹಾಜರಾಗಬೇಕಿದ್ದರೂ ಪಟ್ಟಣದ ಪಶು ಆಸ್ಪತ್ರೆಗೆ ಆಗಮಿಸುವ ರಾಸುಗಳ ಚಿಕಿತ್ಸೆ ನೀಡುವುದಲ್ಲದೆ ಹೆಚ್ಚುವರಿಯಾಗಿ ಎಂಟು ಆಸ್ಪತ್ರೆಗೆ ತೆರಳಬೇಕಾಗಿದೆ.

* ಬಾಕ್ಸ್‌ನ್ಯೂಸ್‌: ರಾಸುಗಳ ವಿವರ:

೨೦೨೦ನೇ ಸಾಲಿನ ಗಣತಿ ಪ್ರಕಾರ ತಾಲೂಕಿನಲ್ಲಿ ೪೭೯೬೭ ಎಮ್ಮೆಗಳು, ೭೭೯೦೬ ಹಸುಗಳು, ೩೬೨೦೮ ಮೇಕೆ, ೫೦೮ ಹಂದಿ, ೩೬೫೨೩ ಕುರಿಗಳಿವೆ. ಇವುಗಳ ಜೊತೆಯಲ್ಲಿ ಕೋಳಿ, ಕುದುರೆ, ಕತ್ತೆ, ನಾಯಿ, ಬೆಕ್ಕು, ಮೊಲ ಹೀಗೆ ಇತರರ ಸಾಕುಪ್ರಾಣಿಗಳು ತಾಲೂಕಿನಲ್ಲಿ ೧೯೩೬೨೭ ಇವೆ. ಇವುಗಳು ರೋಗ ತಪ್ಪಿದರು ಇರುವ ವೈದ್ಯರೇ ಗ್ರಾಮಗಳಿಗೆ ತೆರಳಿ ನೋಡಿಕೊಳ್ಳಬೇಕಾಗಿದೆ.

* ಹೇಳಿಕೆ-1ಪಶುವೈದ್ಯರ ಕೊರತೆ ಇರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿರುವುದಲ್ಲದೆ, ಶಾಸಕರು, ಕೆಡಿಪಿ ಸಭೆ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ, ಇರುವ ವೈದ್ಯರಲ್ಲಿಯೇ ಎಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ಮಾಡಿಸಲಾಗುತ್ತಿದೆ.

-ಡಾ.ಸೋಮಶೇಖರ್, ಸಹಾಯಕ ನಿರ್ದೇಶಕರು, ಪಶುಪಾಲನಾ ಇಲಾಖೆ

Share this article