ಬೆಂಗಳೂರು: ಜುಲೈ 29ರಿಂದ ತುಮಕೂರು ರಸ್ತೆ ಪೀಣ್ಯ ಮೇಲ್ಸೇತುವೆಯಲ್ಲಿ ಭಾರಿ ವಾಹನ ಸಂಚಾರಕ್ಕೆ ಅವಕಾಶ

KannadaprabhaNewsNetwork |  
Published : Jul 26, 2024, 01:37 AM ISTUpdated : Jul 26, 2024, 08:51 AM IST
Flyover

ಸಾರಾಂಶ

ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಜು.29ರಂದು ಸೋಮವಾರ ಹಸಿರು ನಿಶಾನೆ ನೀಡಲಾಗಿದೆ.

 ಬೆಂಗಳೂರು : ಮೂರೂವರೆ ವರ್ಷಗಳ ಬಳಿಕ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿರುವ ಸಂಚಾರ ವಿಭಾಗದ ಪೊಲೀಸರು, ಜು.29ರಂದು ಸೋಮವಾರ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.

ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇಲ್ಸೇತುವೆಗೆ ದುರಸ್ತಿ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಆರಂಭಿಸಿತ್ತು. ಈ ದುರಸ್ತಿ ಕಾರಣಕ್ಕೆ 2021ರ ಡಿಸೆಂಬರ್‌ನಲ್ಲೇ ಮೇಲ್ಸೇತುವೆಯಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿದ್ದ ಪೊಲೀಸರು, ಕಾಮಗಾರಿ ಒಂದು ಹಂತ ಮುಗಿದ ಬಳಿಕ 2022ರ ಫೆ.27 ರಂದು ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ ಆದೇಶಿಸಿದ್ದರು. ಈಗ ಕಾಮಗಾರಿ ಭಾಗಶಃ ಮುಕ್ತಾಯವಾದ ಹಿನ್ನೆಲೆಯಲ್ಲಿ ಎಲ್ಲ ವಾಹನಗಳ ಓಡಾಟಕ್ಕೆ ಅವಕಾಶ ಸಿಕ್ಕಿದೆ.

ಮೇಲ್ಸೇತುವೆಯಲ್ಲಿ ಬಸ್‌ಗಳು ಸೇರಿದಂತೆ ಭಾರಿ ವಾಹನಗಳ ಓಡಾಟಕ್ಕೂ ಅವಕಾಶ ನೀಡುವಂತೆ ಎನ್‌ಎಚ್‌ಎ ಹಾಗೂ ಪೊಲೀಸರಿಗೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಮನವಿಗಳು ಸಲ್ಲಿಕೆಯಾಗಿದ್ದವು. ಈ ಮನವಿಗೆ ಕೊನೆಗೂ ಸ್ಪಂದಿಸಿದ ಪೊಲೀಸರು, ಜು.29ರ ಸೋಮವಾರ ಬೆಳಗ್ಗೆಯಿಂದ ಮೇಲ್ಸೇತುವೆಯಲ್ಲಿ ಎಲ್ಲ ವಾಹನಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ವೇಗ ಮಿತಿ 40 ಕಿ.ಮೀ.

ಮೇಲ್ಸೇತುವೆಯಲ್ಲಿ ಭಾರಿ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮುನ್ನ ಎರಡು ಷರತ್ತುಗಳನ್ನು ಪೊಲೀಸರು ವಿಧಿಸಿದ್ದಾರೆ. ಮೇಲ್ಸೇತುವೆಯ ಎಡ ಪಥದಲ್ಲೇ ಭಾರಿ ವಾಹನಗಳು ಸಂಚರಿಸಬೇಕು ಹಾಗೂ ಪ್ರತಿ ಗಂಟೆಗೆ ವೇಗ ಮಿತಿ 40 ಕಿ.ಮೀ. ದಾಟಬಾರದು ಎಂದು ನಿಯಮ ರೂಪಿಸಿದ್ದಾರೆ.

ಶುಕ್ರವಾರ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ

ಮೇಲ್ಸೇತುವೆಯಲ್ಲಿ ಭಾರಿ ವಾಹನಗಳಿಗೆ ವಾರದಲ್ಲಿ ಒಂದು ದಿನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಿಶೇಷ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಪ್ರತಿ ಶುಕ್ರವಾರ ಬೆಳಗ್ಗೆ 6ರಿಂದ ಶನಿವಾರ ಬೆಳಗ್ಗೆ 6ರವರೆಗೆ ಮೇಲ್ಸೇತುವೆ ಮೇಲೆ ಭಾರಿ ವಾಹನಗಳಿಗೆ ಸಂಚಾರ ನಿರ್ಬಂಧ ವಿಧಿಸಲಾಗಿದೆ ಎಂದು ಜಂಟಿ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್‌ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ