ಕನ್ನಡಪ್ರಭ ವಾರ್ತೆ ಮಂಗಳೂರು
ಸಮಾಜದ ಸರ್ವರನ್ನೂ ಜೋಡಿಸಿಕೊಂಡು ಸಾಮಾಜಿಕ ಕಾರ್ಯಗಳನ್ನು ಪ್ರೀತಿಯಿಂದ ನಿರ್ವಹಿಸಿದ ವಿಶ್ವೇಶತೀರ್ಥ ಸ್ವಾಮೀಜಿ ಅವರು ತನ್ನ ಬಗೆಗಿನ ಹೊಗಳಿಕೆಯನ್ನು ಎಲ್ಲರಿಗೂ ಹಂಚಿದವರು. ಗುರುಗಳ ಗುಣಗಳನ್ನು ನೆನಪಿಸಿಕೊಳ್ಳುವುದು ಶ್ರೇಷ್ಠ ಕಾರ್ಯ. ಅವರ ಹೆಸರಿನಲ್ಲಿ ನಾವೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಗುರುವಂದನಾ ಸಂಸ್ಮರಣೆ ಮಾಡಿದ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಜೀವನ ಸಮಾಜಕ್ಕೆ ಮಾತ್ರವಲ್ಲದೆ ಯತಿಗಳಿಗೂ ಮಾರ್ಗದರ್ಶಕವಾಗಿದೆ. ಅವರ ಜೀವನವೇ ನಮಗೆಲ್ಲರಿಗೂ ಪಾಠ. ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಅವರು ಜನಸೇವೆಯಲ್ಲಿ ಭಗವಂತನನ್ನು ಕಂಡವರು. ಸಮಾಜದ ಬಡವರ, ದುರ್ಬಲರ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು ಎಂದರು.ಗುರುವಂದನಾ ಸಂಸ್ಮರಣೆ ಮಾಡಿದ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ದೇವರನ್ನು ಗುರುಗಳು ತೋರಿಸುತ್ತಾರೆ. ಆದ್ದರಿಂದ ಗುರುಗಳ ಮೂಲಕ ಪರಮಾತ್ಮನನ್ನು ಆರಾಧನೆ ಮಾಡಬೇಕು. ಪೇಜಾವರ ಶ್ರೀ ವಿಶ್ವೇಶತೀರ್ಥರ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ವಿವಿಧ ಕ್ಷೇತ್ರದ ಸಾಧಕರಿಗೆ ‘ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿಶ್ವೇಶತೀರ್ಥರ ಚಿತ್ರ ರಚನಾ ಸ್ಪರ್ಧೆ ಹಾಗೂ ಅವರ ಕುರಿತಾದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಕೃಷ್ಣ ಗೀತ ಗಾಯನ ಕಾರ್ಯಕ್ರಮ ನಡೆಯಿತು.