ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ರಚಿಸಲಾದ ವಿಡಿಯೋ ಕಣ್ಗಾವಲು ಮತ್ತು ವಿಡಿಯೋ ವೀಕ್ಷಣೆ ತಂಡಗಳಿಗೆ ಶನಿವಾರ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿ, ಅವರು ವಿವಿಧ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ನಡೆಸುವ ಬಹಿರಂಗ ಸಭೆ, ಸಮಾರಂಭಗಳ ಘಟನಾವಳಿಗಳನ್ನು ಚಿತ್ರೀಕರಣ ಮಾಡುವುದರಿಂದ ಸತ್ಯ, ವಾಸ್ತವಿಕ, ವಿಶ್ವಾಸಾರ್ಹ ನಿರ್ಧಾರ ತೆಗೆದುಕೊಳ್ಳಲು, ನೀತಿ ಸಂಹಿತೆ ಹಾಗೂ ಕಾನೂನು ಉಲ್ಲಂಘನೆಗಳನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ ಎಂದರು.
ಚುನಾವಣಾ ವೆಚ್ಚ ಮತ್ತು ಕಾನೂನು ಉಲ್ಲಂಘನೆಯ ಪ್ರಕರಣಗಳ ಬಗ್ಗೆ ವಿಡಿಯೋ ದಾಖಲಾತಿ ಮುಖ್ಯವಾಗಿದೆ. ತಾವು ಚಿತ್ರೀಕರಣ ಮಾಡಿದ ವಿಡಿಯೋವನ್ನು ಮತ್ತೊಬ್ಬರಿಗೆ ಕಳುಹಿಸುವುದಾಗಲಿ, ಇಲ್ಲವೇ ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡುವುದು, ಗುರುತಿಸಿಕೊಂಡಿರಬಾರದು. ಅಂತ ಮಾಹಿತಿ ದೊರೆತಲ್ಲಿ ಕಾನೂನಿನಡಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ವಿಡಿಯೋ ಗ್ರಾಫರ್‌ಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದರು. ತಾವು ಸಹ ಚುನಾವಣಾ ಆಯೋಗದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಾಗಿ ಕೆಲಸ ಮಾಡಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ನೇಮಕವಾದ ವಿಡಿಯೋ ಗ್ರಾಫರ್‌ಗಳು ಅಪರಾಧ ಹಿನ್ನೆಲೆ ಉಳ್ಳವರು ಇರಬಾರದು. ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಬಾರದು. ಪಕ್ಷದ ಪರವಾಗಿ ಸಹಾನುಭೂತಿ ಹೊಂದಿರಬಾರದು. ಉಲ್ಲಂಘನೆ ಪ್ರಕರಣಗಳು ಮೊದಲು ತಮಗೆ ತಿಳಿಯಬೇಕು. ಉಲ್ಲಂಘನೆ ಪ್ರಕರಣದ ಬಗ್ಗೆ ಸಂಪೂರ್ಣ ಚಿತ್ರೀಕರಣ ಆಗಬೇಕು. ಆಗ ಮಾತ್ರ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಯುಕೆಪಿ ಮಹಾ ವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಚುನಾವಣಾ ವೆಚ್ಚಗಳ ನೋಡಲ್ ಅಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಚುನಾವಣಾ ತಹಶೀಲ್ದಾರ ಪಂಪಯ್ಯ ಸೇರಿದಂತೆ ವಿಡಿಯೋ ಗ್ರಾಫರ್ಗಳು ಪಾಲ್ಗೊಂಡಿದ್ದರು.