ಕನ್ನಡಪ್ರಭ ವಾರ್ತೆ ಅರಸೀಕೆರೆ
ಸುಕ್ಷೇತ್ರ ಆದಿಹಳ್ಳಿ ಆದಿಲಕ್ಷ್ಮಿ ಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ಆದಿಚುಂಚನಗಿರಿ ಮಠದ ವತಿಯಿಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆದಿಲಕ್ಷ್ಮಿ ಅಮ್ಮನವರ ದೇವಾಲಯ ಮತ್ತು ಹೆಬ್ಬಾಗಿಲು ಮಂಟಪದ ಲೋಕಾರ್ಪಣೆಯು ಏಪ್ರಿಲ್ 11, 12 ಮತ್ತು 13ರಂದು ಶ್ರೀ ಮಠದ ಸಂಪ್ರದಾಯದಂತೆ ನಡೆಯಲಿದೆ ಎಂದು ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಭೈರವೈಕ್ಯ ಡಾ ಬಾಲಗಂಗಾಧರನಾಥ ಶ್ರೀಗಳ ಕೃಪಾಶೀರ್ವಾದದೊಂದಿಗೆ ಚುಂಚನಗಿರಿ ಪೀಠದ ಪ್ರಸ್ತುತ ಜಗದ್ಗುರುಗಳಾದ ಡಾ. ನಿರ್ಮಲಾನಂದನಾಥ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ 127ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಪವಿತ್ರ ಹುಣ್ಣಿಮೆ ಕಾರ್ಯಕ್ರಮ ಸೇರಿದಂತೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗಲಿದೆ ಎಂದು ವಿವರಿಸಿದರು.ಏಪ್ರಿಲ್ 11ರಂದು ಮುಂಜಾನೆ ಪುಣ್ಯಹ ರುದ್ರಾಭಿಷೇಕ, ಚೋಡೋಪಚಾರ, ಏಪ್ರಿಲ್ 12ರಂದು ಮುಂಜಾನೆ ದೇವಾಲಯ ಆವರಣದಲ್ಲಿ ಕೆಂಡೋತ್ಸವ ನಂತರ ಎಡೆ ಸೇವೆ ನಡೆದರೆ, ಸಂಜೆ ಡಾ. ನಿರ್ಮಲಾನಂದನಾಥ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ 127ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಗಳು ಹಾಗೂ ಗಣ್ಯರು ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ ಎಂದರು.
ಶನಿವಾರ ಸಂಜೆ ರಥೋತ್ಸವ ರಥೋತ್ಸವ ಜರುಗಿದರೆ ಭಾನುವಾರ ಬೆಳಗ್ಗೆ ಮಹಾ ರಥೋತ್ಸವವು ನಡೆಯಲಿದೆ. ಈ ಸಂದರ್ಭದಲ್ಲಿ ಆದಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತ ವೃಂದಕ್ಕೆ ಶ್ರೀಮಠದ ವತಿಯಿಂದ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿದೆ.ಭಾನುವಾರ ರಾತ್ರಿ 10 ಗಂಟೆಗೆ ಗ್ರಾಮಸ್ಥರೇ ಶ್ರೀದೇವಿ ಮಹಾತ್ಮೆ ಪೌರಾಣಿಕ ನಾಟಕ ಪ್ರಸ್ತುತಪಡಿಸುತ್ತಿದ್ದು, ಇದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.