ಬೆಳ್ಳೂರು ವ್ಯಾಪ್ತಿ ಹುಲಿ ಸೆರೆ ಕಾರ್ಯಾಚರಣೆಗೆ ಮಳೆ ಅಡ್ಡಿ

KannadaprabhaNewsNetwork | Published : Dec 3, 2024 12:32 AM

ಸಾರಾಂಶ

ಎರಡನೇ ದಿನದ ಕಾರ್ಯಾಚರಣೆಯಲ್ಲಿ ಹುಲಿ ಸುಳಿಯು ಪತ್ತೆಯಾಗಿಲ್ಲ. ಹುಲಿ ಪತ್ತೆಯಾಗುವವರೆಗೆ ಕಾರ್ಯಾಚರಣೆ ಮುಂದುವರಿಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಹಸುವನ್ನು ಬಲಿ ಪಡೆದ ಹುಲಿಯನ್ನು ಸೆರೆ ಹಿಡಿಯಲು ನಡೆಸುತ್ತಿರುವ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಹುಲಿಯ ಸುಳಿವು ಪತ್ತೆಯಾಗಿಲ್ಲ. ಹುಲಿಯು ಪತ್ತೆಯಾಗುವವರೆಗೆ ಕಾರ್ಯಾಚರಣೆ ಮುಂದುವರೆಯಲಿದೆ. ಸ್ಥಳದಲ್ಲಿ ಗ್ರಾಮಸ್ಥರ ಸಲಹೆಯಂತೆ ಹೆಚ್ಚುವರಿ ಕ್ಯಾಮರಗಳನ್ನು ಅಳವಡಿಸಲಾಗುವುದು ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಸೋಮವಾರ ಕಾರ್ಯಾಚರಣೆಯ ಪ್ರಗತಿಯ ಬಗ್ಗೆ ಸ್ಥಳದಲ್ಲಿ ಮಾಹಿತಿ ನೀಡಿದ ಅವರು ಈ ವ್ಯಾಪ್ತಿಯಲ್ಲಿ ಮಳೆ ಸುರಿಯುವುದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಮಳೆ ನಿಂತ ನಂತರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ವಿವರಿಸಿದರು. ಭಾನುವಾರ ಅಳವಡಿಸಿದ್ದ ಎರಡು ಬೋನುಗಳನ್ನು ಸಂಕೇತ್ ಪೂವಯ್ಯ ಪರಿಶೀಲನೆ ನಡೆಸಿದರು.

ಭಾನುವಾರ ಸಂಜೆವರೆಗೆ ಅರಣ್ಯ ಇಲಾಖೆಯ 40 ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡಗಳಿಂದ ಈ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗ್ರಾಮಸ್ಥರ ಸಲಹೆಯಂತೆ ಕಾಫಿ ತೋಟಕ್ಕೆ ಸಾಕಾನೆ ಬಳಸಿಕೊಂಡು ಕಾರ್ಯಾಚರಣೆ ಮಾಡುವುದರಿಂದ ಕಾಫಿ ಫಸಲಿಗೆ ನಷ್ಟ ಉಂಟಾಗಲಿದೆ, ಗ್ರಾಮಸ್ಥರ ಅಭಿಪ್ರಾಯದಂತೆ ಸಾಕಾನೆಗಳನ್ನು ಕಾರ್ಯಾಚರಣೆಯಿಂದ ಕೈ ಬಿಡಲಾಗಿದೆ. ಈ ಬಗ್ಗೆ ಶಾಸಕ ಎ. ಎಸ್. ಪೊನ್ನಣ್ಣ ಅವರು ಗ್ರಾಮಸ್ಥರ ಸಲಹೆಯಂತೆ ಕಾರ್ಯಾಚರಣೆ ನಡೆಸಲು ಸೂಚಿಸಿರುವುದಾಗಿ ಸಂಕೇತ್ ಪೂವಯ್ಯ ಅವರು ವಿವರಿಸಿದರು.

ಗ್ರಾಮಸ್ಥರ ಸಲಹೆಯಂತೆ ಮಂಗಳವಾರ ಮತ್ತೆ ಕೆಲವು ಕಡೆಗಳಿಗೆ ಹೆಚ್ಚುವರಿ ಕ್ಯಾಮರಾ ಗಳನ್ನು ಅಳವಡಿಸಿ ಹುಲಿಯ ಚಲನವಲನವನ್ನು ಕಂಡುಹಿಡಿಯಲು ಪ್ರಯತ್ನ ನಡೆಯಲಿದೆ. ಹುಲಿ ಸುಳಿವು ಪತ್ತೆಯಾದರೆ ನಾಲ್ಕು ಬದಿಯಿಂದ ಸುತ್ತುವರೆದು ಅಗತ್ಯವಾದರೆ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ (ಆರ್.ಆರ್. ಟಿ) ಹಾಗೂ ಕಾಡಾನೆ ಕಾರ್ಯಾಚರಣೆ ತಂಡ (ಇ.ಟಿ.ಎಫ್) ಗಳನ್ನು ಬಳಸಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಶಾಸಕ ಎ.ಎಸ್. ಪೊನ್ನಣ್ಣನವರು ಹುಲಿ ಹಾಗೂ ಕಾಡಾನೆಗಳ ಹಾವಳಿಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ವಿಧಾನಸಭೆಗೆ ಆಯ್ಕೆಯಾಗಿ ಮೊದಲ ಬಾರಿಗೆ ಅವರು ವನ್ಯಪ್ರಾಣಿಗಳ ಹಾವಳಿ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಇದು ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ವನ್ಯಪ್ರಾಣಿಗಳ ಸಮಸ್ಯೆ ಗೆ ತುತ್ತಾಗಿರುವ ಪ್ರದೇಶಗಳಿಗೆ ಅರಣ್ಯ ಸಚಿವರನ್ನು ಖುದ್ದಾಗಿ ಬರುವಂತೆ ಮಾಡಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿದ್ದಾರೆ. ಹಾಗೆಯೇ ಬ್ಯಾರಿಕೇಡ್ ಗಳ ಹೆಚ್ಚು ಮಂಜೂರಾತಿಗೂ ಪ್ರಯತ್ನ ಮಾಡಿದ್ದಾರೆ. ಮುಂದಿನ ವರ್ಷಗಳಲ್ಲಿ ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ದೊರೆಯುವ ವಿಶ್ವಾಸವನ್ನು ಸಂಕೇತ್ ಪೂವಯ್ಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಈಗಾಗಲೇ ಸರ್ಕಾರ ನೀಡುತ್ತಿರುವ ಜಾನುವಾರು ಪರಿಹಾರ ಸಾಕಾಗುವುದಿಲ್ಲ. ಇದನ್ನು ಪರಿಷ್ಕರಣೆ ಮಾಡಬೇಕು ಎಂದು ಮನವಿ ಮಾಡಿದರು. ಶಾಸಕರ ಮೂಲಕ ಸರ್ಕಾರದ ಗಮನಕ್ಕೆ ತರುವ ಭರವಸೆಯನ್ನು ಸಂಕೇತ್ ಪೂವಯ್ಯ ಅವರು ವ್ಯಕ್ತಪಡಿಸಿದರು.

ಈ ಸಂದರ್ಭ ಕಾರ್ಯಾಚರಣೆ ನೇತೃತ್ವ ವಹಿಸಿರುವ ತಿತಿಮತಿ ಎ.ಸಿ.ಎಫ್ ಗೋಪಾಲ್, ಪೊನ್ನಂಪೇಟೆ ಆರ್. ಎಫ್. ಓ. ಶಂಕರ್, ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚಂಗುಲಂಡ ಸೂರಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

Share this article