ರಾಯಚೂರು ಜನತೆಯ ಮಹಾನಗರ ಪಾಲಿಕೆ ಕನಸು ಈಡೇರಿಕೆ

KannadaprabhaNewsNetwork |  
Published : Oct 18, 2024, 12:11 AM IST
17ಕೆಪಿಆರ್‌ಸಿಆರ್‌ 01 | Kannada Prabha

ಸಾರಾಂಶ

ರಾಯಚೂರು ನಗರಸಭೆಯನ್ನು ಮೇಲ್ದರ್ಜೇಗೇರಿಸಿ ಮಹಾನಗರ ಪಾಲಿಕೆಯನ್ನಾಗಿಸಿ ಸರ್ಕಾರ ಹೊರಡಿಸಿರುವ ರಾಜ್ಯಪತ್ರ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಬೆಳೆಯುತ್ತಿರುವ ಜನಸಂಖ್ಯೆ, ಅದಕ್ಕೆ ತಕ್ಕಂತೆ ಮೂಲಭೂತ ಸವಲತ್ತುಗಳನ್ನು ಒದಗಿಸಿಕೊಡುವ ಜವಾಬ್ದಾರಿಯಿಂದ ಅಭಿವೃದ್ಧಿಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ರಾಯಚೂರು ನಗರ ಸಭೆಯನ್ನು ಮೇಲ್ದರ್ಜೇಗೇರಿಸಿ ಮಹಾನಗರ ಪಾಲಿಕೆಯನ್ನಾಗಿಸಬೇಕು ಎನ್ನುವ ಬಹು ದಿನಗಳ ಬೇಡಿಕೆ ಈಡೇರಿದ್ದು, ಮಹಾನಗರ ಪಾಲಿಕೆ ಅನುಷ್ಠಾನದ ಕಾರ್ಯವು ಶುರುವಾಗಿದೆ.

ಆ ನಿಟ್ಟಿನಲ್ಲಿ ರಾಯಚೂರು ನಗರಸಭೆಯನ್ನು ಮೇಲ್ದರ್ಜೇಗೇರಿಸಿ ಮಹಾನಗರ ಪಾಲಿಕೆಯನ್ನಾಗಿ ಮಾಡಿ ಆದೇಶಿಸಿರುವ ರಾಜ್ಯ ಸರ್ಕಾರ ರಾಜ್ಯ ಪತ್ರದಲ್ಲಿ ಬುಧವಾರ ಪ್ರಕಟಿಸಿದೆ.

ಪತ್ರದ ಸಾರಾಂಶ: ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1975 ರ ಸೆಕ್ಷನ್, 4 ಮತ್ತು 503 ರನ್ವಯ ಜನಸಂಖ್ಯೆ 3 ಲಕ್ಷಕ್ಕಿಂತ ಕಡಿಮೆಯಿಲ್ಲದಂತಿದ್ದು, ಜನಸಂಖ್ಯೆ ಸಾಂದ್ರತೆ 1 ಚದರ ಕಿಮೀ ಪ್ರದೇಶಕ್ಕೆ 3 ಸಾವಿರ ಇರಬೇಕು. ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರೆ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ 6 ಕೋಟಿ ರು. ಇಲ್ಲವೇ ವಾರ್ಷಿಕ ತಲಾ ಒಬ್ಬನಿಗೆ 200 ರು.ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದಂತೆ ಇರಬೇಕು. ಅಂಥ ಪ್ರದೇಶದಲ್ಲಿನ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡವಾರು ಒಟ್ಟು ಉದ್ಯೋಗದ ಶೇ.50 ಕಡಿಮೆಯಿಲ್ಲದಂತೆ ಇರಬೇಕು. ಈ ಎಲ್ಲ ಅಂಶಗಳನ್ನು ಪೂರೈಸಿದ ರಾಯಚೂರು ನಗರಸಭೆ ಪ್ರದೇಶವನ್ನು ದೊಡ್ಡ ನಗರ ಪ್ರದೇಶ ಎಂದು ಉದ್ದೇಶಿಸಿ ರಾಯಚೂರು ಮಹಾನಗರ ಪಾಲಿಕೆ ಎಂದು ಪದನಾಮಕರಿಸಲಾಗಿದೆ. ಪಾಲಿಕೆಯನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ ಎಂದು ರಾಜ್ಯಪಾಲರ ಅಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಅವರು ಆದೇಶ ಹೊರಡಿಸಿದ್ದಾರೆ.

*ತಿಂಗಳ ಗಡುವು ಆಕ್ಷೇಪಣೆಗೆ ಅವಕಾಶ:

ಮಹಾನಗರ ಪಾಲಿಕೆ ಅಧಿಸೂಚನೆ ಪ್ರಕಟಗೊಂಡ ಬಳಿಕ ಯಾವುದೇ ರೀತಿಯ ಆಕ್ಷೇಪಣೆ, ಸಲಹೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಆದೇಶ ಹೊರಡಿಸಿದ ತಿಂಗಳಲ್ಲಿ ಸಾರ್ವಜನಿಕರು ಬೆಂಗಳೂರಿನಲ್ಲಿರುವ ಪೌರಾಡಳಿತ ನಿರ್ದೇಶನಾಲಯಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

ಕಳೆದ ಸೆ.17 ರಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ರಾಯಚೂರು ನಗರಸಭೆಯನ್ನು ಮೇಲ್ದರ್ಜೇಗೇರಿಸಿ ಮಹಾನಗರ ಪಾಲಿಕೆಯನ್ನಾಗಿಸಿ ತೀರ್ಮಾನಕೈಗೊಂಡ ತಿಂಗಳಲ್ಲಿಯೇ ಸರ್ಕಾರವು ರಾಜ್ಯಪತ್ರ ಹೊರಡಿಸುವುದರ ಮುಖಾಂತರ ನಿವಾಸಿಗಳ ಬಹುದಿನಗಳ ಕನಸು ಇದೀಗ ಸಾಕಾರಗೊಂಡಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ದುಬೈ ವಾರ್ಷಿಕೋತ್ಸವಕ್ಕೆ ಗೌರ್ನರ್‌ಗೆ ಆಹ್ವಾನ
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್