ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ ತಾಲೂಕು ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಿಗೆ ಮಕ್ಕಳ ಹಕ್ಕು ರಕ್ಷಣೆ, ಪೋಕ್ಸೋ ಕಾಯಿದೆ ಮತ್ತು ಮಾನಸಿಕ ಆರೋಗ್ಯ ಕುರಿತು ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜವನ್ನು ಪಿಡುಗಾಗಿ ಕಾಡುತ್ತಿರುವ ಈ ಸಮಸ್ಯೆ ಕುರಿತು ಶಿಕ್ಷಣ ಇಲಾಖೆ ಆಶ್ರಯದಲ್ಲಿ ತರಬೇತಿ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ. ಶಿಕ್ಷಕರು ನಿಮ್ಮ ಸುತ್ತಮುತ್ತ ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗುತ್ತಿದ್ದರೆ ಅಥವಾ ಅಪ್ರಾಪ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೆ ಅದನ್ನು ತಡೆಗಟ್ಟುವಲ್ಲಿ ನೀವುಗಳು ಪ್ರಮುಖ ಪಾತ್ರ ವಹಿಸುವ ಜತೆಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವನ್ನು ಮೂಡಿಸುವಂತೆ ಸಲಹೆ ನೀಡಿದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್ ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ನಮ್ಮಗಳ ಕರ್ತವ್ಯ ಆಗಬೇಕಿದೆ, ಜೊತೆಗೆ ಸಮಾಜದಲ್ಲಿ ಅಪ್ರಾಪ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಶಿಕ್ಷಕರುಗಳು ಸೇರಿದಂತೆ ಎಲ್ಲರೂ ತಡೆಗಟ್ಟಬೇಕಿದೆ ಎಂದರು. ಈ ದೌರ್ಜನ್ಯಗಳು ಅಧಿಕಗೊಳ್ಳಲು ಇತ್ತೀಚಿನ ಸೋಷಿಯಲ್ ಮಿಡಿಯಾದ ಯುಟೂಬ್‌ಗಳು ಕಾರಣವಾಗಿದೆ ಎಂದು ಆರೋಪಿಸಿದರು.ಹಿರಿಯ ವಕೀಲ ಎಚ್.ಎಸ್.ಅರುಣ್ ಕುಮಾರ್ ಅವರು ಮಕ್ಕಳ ಹಕ್ಕು ರಕ್ಷಣೆ, ಪೋಕ್ಸೋ ಕಾಯಿದೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿ, ಅಗತ್ಯ ಮಾಹಿತಿ ಹಾಗೂ ಸಲಹೆ ನೀಡಿದರು. ಹಿರಿಯ ನ್ಯಾಯಾಧೀಶರು ಹಾಗೂ ಗಣ್ಯರು ಶಿಕ್ಷಣ ಇಲಾಖೆಯ ಬಿಆರ್‌ಸಿ ಎಂ.ಜಿ.ಪರಮೇಶ್ ಮಡಬಲು ಅವರು ರಚಿಸಿರುವ ೪೨ ವಿಷಯಗಳ ಅಂಶಗಳುಳ್ಳ ಬೆಳಗುವ ಹಣತೆಗಳು ಎಂಬ ಕೃತಿಯನ್ನು ಬಿಡುಗಡೆ ಮಾಡಿದರು.
ಒಂದು ದಿನದ ತರಬೇತಿ ಕಾರ್ಯಕ್ರಮ ಬೆಳಿಗ್ಗೆಯಿಂದ ಸಂಜೆವರೆಗೆ ಏರ್ಪಡಿಸಿದ್ದು ಅದರಲ್ಲಿ ಮಕ್ಕಳ ರಕ್ಷಣಾ ನೀತಿ ಹಾಸನದ ಡಯಟ್‌ನ ಹಿರಿಯ ಉಪನ್ಯಾಸಕ ರುದ್ರೇಶ್, ಮಾನಸಿಕ ಆರೋಗ್ಯದ ಬಗ್ಗೆ ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಡಾ. ಕಾರ್ತೀಕ್, ಪೋಕ್ಸೋ ಕಾಯ್ದೆ ಬಗ್ಗೆ ತಾಲೂಕು ಶಿಕ್ಷಣ ಇಲಾಖೆಯ ಸಿಇಒ ಕಾಂತರಾಜಪ್ಪ ಹಾಗೂ ಬಿಆರ್‌ಪಿ ಎಂ.ಜಿ.ಪರಮೇಶ್ ದೈಹಿಕ ದಂಡನೆ ಬಗ್ಗೆ, ಬಿಆರ್‌ಪಿಗಳಾದ ನಿಂಗರಾಜು, ನಾಗರಾಜು, ಋತುಚಕ್ರದ ಮತ್ತು ವೈಯಕ್ತಿಕ ಶುಚಿತ್ವದ ಬಗ್ಗೆ ತಾಲೂಕು ಆರೋಗ್ಯ ಇಲಾಖೆಯ ಭಾನುಶ್ರೀ ಹಾಗು ಹದಿಹರೆಯದ ಸಮಸ್ಯೆಗಳ ಬಗ್ಗೆ ಹಾಸನದ ಡಯಟ್‌ನ ಹಿರಿಯ ಉಪನ್ಯಾಸಕಿ ಗೀತಾ ಅವರು ಉಪನ್ಯಾಸ ನೀಡಿದರು.ಶಿಕ್ಷಕಿ ಆಶಾ ಅವರು ಪ್ರಾರ್ಥಿಸಿದರು. ಪರಮೇಶ್ ಸ್ವಾಗತಿಸಿದರು. ತಾಲೂಕಿನ ಖಾಸಾಗಿ ಹಾಗೂ ಅನುದಾನಿತ ಶಾಲೆಗಳ ಸುಮಾರು ಐದು ನೂರಕ್ಕೂ ಹೆಚ್ಚು ಮಂದಿ ಶಿಕ್ಷಕ ಶಿಕ್ಷಕಿಯರು ತರಬೇತಿಯ ಉಪಯೋಗ ಪಡೆದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಚೇತನ, ಬಿಇಒ ಸೋಮಲಿಂಗೇಗೌಡ, ಶಿಕ್ಷಣ ಇಲಾಖೆಯ ಇಸಿಒಗಳಾದ ರಾಮಚಂದ್ರು, ಕೇಶವ್, ಸುಜಾತ್ ಆಲಿ, ಡಯಟ್‌ನ ಗೀತಾ ರುದ್ರೇಶ್ ಸೇರಿದಂತೆ ಶಿಕ್ಷಣ ಇಲಾಖೆಯ ಸಿಬ್ಬಂದಿ ಹಾಜರಿದ್ದರು.