ಕನ್ನಡಪ್ರಭ ವಾರ್ತೆ ಬೆಂಗಳೂರು
5 ಕಿ.ಮೀ.ಗಳ ಮ್ಯಾರಥಾನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಐವರು ಪುರುಷರು ಮತ್ತು ಐವರು ಮಹಿಳೆಯರಿಗೆ ಮೊದಲೇ ನಿಗದಿಪಡಿಸಿದ್ದಂತೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಬಿ.ವಿ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆದ 2ನೇ ವರ್ಷದ ಮ್ಯಾರಥಾನ್‌ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಸೇರಿದಂತೆ ಪಕ್ಷದ ವಿವಿಧ ನಾಯಕರು ಬೆಳಗ್ಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಹರಿಪ್ರಸಾದ್ ಅವರು, ಭಾರತದ ಮಾಹಿತಿ ತಂತ್ರಜ್ಞಾನದ ಹರಿಕಾರ, ಆಧುನಿಕ ಭಾರತದ ಶಿಲ್ಪಿ ಎಂದೇ ಕರೆಯಲ್ಪಡುವ ರಾಜೀವ್ ಗಾಂಧಿ ಅವರು ಯುವ ಸಮೂಹದಲ್ಲಿ ಇಟ್ಟಿದ್ದ ನಂಬಿಕೆ, ಆಧುನಿಕ ಮತ್ತು ಪ್ರಗತಿಪರ ರಾಷ್ಟ್ರದ ದೃಷ್ಟಿಕೋನವನ್ನು ಈ ಮ್ಯಾರಥಾನ್ ಸಾಕ್ಷೀಕರಿಸಿದಂತಿದೆ ಎಂದರು.ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಸಾವಿರಾರು ಯುವಜನರು ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿರುವುದು ನೋಡಿದಾಗ ಆರೋಗ್ಯಕರ ಸಮಾಜದ ಕಡೆ ನಡೆಯುತ್ತಿದ್ದಾರೆ ಎನಿಸುತ್ತಿದೆ. ಕಾಂಗ್ರೆಸ್ ಸದಾಕಾಲ ಸಮಾಜವನ್ನು ಒಗ್ಗೂಡಿಸುವ ವೇದಿಕೆ ಸೃಷ್ಟಿಸುತ್ತಾ ಬಂದಿದೆ. ಮನುಷ್ಯ ಮನುಷ್ಯರ ಮಧ್ಯೆ ಒಡಕು ಸೃಷ್ಟಿಸುವುದು ಬಹಳ ಸುಲಭ, ಆದರೆ ಒಗ್ಗೂಡಿಸುವುದು ಬಹಳ ಕಷ್ಟ. ಶ್ರೀನಿವಾಸ್ ಅವರ ತಂಡ ಯುವಕರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದರು.
ಇದಕ್ಕೂ ಮುನ್ನ ತಾರೆಯರು ನಡೆಸಿಕೊಟ್ಟ ಮಾಸ್ ಡ್ಯಾನ್ಸ್, ವರ್ಕೌಟ್ ಗಮನ ಸೆಳೆಯಿತು. ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ್, ಎನ್ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಮ್ಯಾರಥಾನ್‌ನಲ್ಲಿ 5 ಕಿ.ಮೀ. ಓಟವನ್ನು ಮೊದಲು ಪೂರೈಸಿದ ಐವರು ಮಹಿಳಾ ಮತ್ತು ಐವರು ಪುರುಷ ಸ್ಪರ್ಧಿಗಳಿಗೆ ಗಣ್ಯರು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಮೊದಲ ಬಹುಮಾನ 1 ಲಕ್ಷ ರು, ದ್ವಿತೀಯ ಬಹುಮಾನ 75 ಸಾವಿರ ರು., ತೃತೀಯ ಬಹುಮಾನ 50 ಸಾವಿರ ರು., ನಾಲ್ಕನೇ ಬಹುಮಾನ 25 ಸಾವಿರ ರು. ಮತ್ತು ಸಮಾಧಾನಕರ ಬಹುಮಾನ ನೀಡಿ ಗೌರವಹಿಸಲಾಯಿತು. ಮಹಿಳಾ ವಿಭಾಗದ ಪೈಕಿ ಸೋನಂ ಪಾರ್ಮ್‌ರ್ ಪ್ರಥಮ, ಯಾಶಿ ಸಾಚನ್ ದ್ವಿತೀಯ, ತಮನ್ನ ತಮನ್ನಾ ತೃತೀಯ, ಪ್ರಿಯಾಂಕಾ ಸಿ. ನಾಲ್ಕನೇ ಬಹುಮಾನ ಮತ್ತು ಆರಾಧನಾ ಕುಮಾರಿ ಸಮಾಧಾನಕರ ಬಹುಮಾನ. ಪುರುಷ ವಿಭಾಗದ ಪೈಕಿ ಶಾರುಖ್ ಖಾನ್ ಪ್ರಥಮ, ಹರೀಶ್ ಶೀರನ್ ದ್ವಿತೀಯ, ಗೌರವ್ ಕಸನ ತೃತೀಯ, ಶೈಲೇಶ್ ಕುಶವಾಹ ನಾಲ್ಕನೇ ಬಹುಮಾನ ಮತ್ತು ಆದಿತ್ಯ ತ್ಯಾಗಿ ಸಮಾಧಾನಕರ ಬಹುಮಾನ ಪಡೆದುಕೊಂಡರು.