ರಾಜ್ಯಾದ್ಯಂತ ಇಂದಿನಿಂದ ‘ಶಕ್ತಿ’ ಆರಾಧನೆ ಶುರು

KannadaprabhaNewsNetwork |  
Published : Sep 22, 2025, 01:01 AM IST
ಕುದ್ರೋಳಿ ದೇವಸ್ಥಾನದ ಅಲಂಕಾರ | Kannada Prabha

ಸಾರಾಂಶ

ಸೋಮವಾರ ರಾಜ್ಯಾದ್ಯಂತ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಮುಂದಿನ 11 ದಿನಗಳ ಕಾಲ ಶಕ್ತಿದೇವತೆ ‘ದೇವಿ’ಯ ಆರಾಧನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಿಯ ಆರಾಧನಾ ಕೇಂದ್ರಗಳಲ್ಲಿ ನಡೆಯುವ ದಸರಾ ಮಹೋತ್ಸವದ ಆಚರಣೆಯ ಕಿರುಚಿತ್ರಣ ಇಲ್ಲಿದೆ.

ಸೋಮವಾರ ರಾಜ್ಯಾದ್ಯಂತ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಮುಂದಿನ 11 ದಿನಗಳ ಕಾಲ ಶಕ್ತಿದೇವತೆ ‘ದೇವಿ’ಯ ಆರಾಧನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಿಯ ಆರಾಧನಾ ಕೇಂದ್ರಗಳಲ್ಲಿ ನಡೆಯುವ ದಸರಾ ಮಹೋತ್ಸವದ ಆಚರಣೆಯ ಕಿರುಚಿತ್ರಣ ಇಲ್ಲಿದೆ.

ಶೃಂಗೇರಿಯಲ್ಲಿ ನವರಾತ್ರಿ ಉತ್ಸವ ಆರಂಭ:

ಶೃಂಗೇರಿಯಲ್ಲಿ ಮಹಾಲಯ ಅಮಾವಾಸ್ಯೆ ದಿನವಾದ ಭಾನುವಾರ ಬೆಳಗ್ಗೆ ಪೀಠದ ಅಧಿದೇವತೆ ಶಾರದಾಂಬೆಗೆ ಮಹಾಭಿಷೇಕ ನಡೆಯಿತು. ಮಹಾಭಿಷೇಕದ ನಂತರ ದಸರಾಕ್ಕೆ ಅಧಿಕೃತ ಚಾಲನೆ ದೊರೆಯಿತು. ಶಾರದೆಯನ್ನು ಜಗತ್ ಪ್ರಸೂತಿಕ ಅಲಂಕಾರದಿಂದ ಸಿಂಗರಿಸಲಾಗಿತ್ತು.

ನವರಾತ್ರಿ ಉತ್ಸವದ ಅಂಗವಾಗಿ ಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಸೋಮವಾರ ಶಾರದೆಗೆ ಹಂಸವಾಹಿನಿಯಲಂಕಾರ ನಡೆಯಲಿದ್ದು, ಬ್ರಾಹ್ಮಿಯಾಗಿ ಭಕ್ತರನ್ನು ಅನುಗ್ರಹಿಸಲಿದ್ದಾಳೆ. ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ ಮಠದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಲಕ್ಷಾರ್ಚನೆ, ಬೀದಿ ಉತ್ಸವ, ದಿಂಡೀ ದೀಪಾರಾಧನೆ, ಅಷ್ಟಾವಧಾನ ಸೇವೆ, ಜಗದ್ಗುರುಗಳ ದಸರಾ ದರ್ಬಾರ್ ನಡೆಯಲಿದೆ.ಇಂದಿನಿಂದ ಕೊಲ್ಲೂರಲ್ಲಿ ಶರನ್ನವರಾತ್ರಿ ಪರ್ವ:

ರಾಜ್ಯದ ಪ್ರಮುಖ ಮುಜರಾಯಿ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ಸೆ.22ರಿಂದ ಅ.2ರ ವರೆಗೆ ವೈವಿಧ್ಯಮಯ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಅ.1ರಂದು ಮಹಾನವಮಿ ಪ್ರಯುಕ್ತ ಬೆಳಗ್ಗೆ 11.30ಕ್ಕೆ ಮಹಾಚಂಡಿಕಾಯಾಗ, ಮಧ್ಯಾಹ್ನ 1.10ಕ್ಕೆ ರಥೋತ್ಸವ, ಅ.2ರಂದು ವಿಜಯದಶಮಿ ಪ್ರಯುಕ್ತ ಬೆಳಗ್ಗೆ ಚಿಕ್ಕಮಕ್ಕಳಿಗೆ ವಿದ್ಯಾರಂಭ, ನವಾನ್ನಪ್ರಾಶನ, ಸಂಜೆ ವಿಜಯೋತ್ಸವಗಳು ವೈಭವದಿಂದ ನಡೆಯಲಿವೆ. ಇದರಲ್ಲಿ ನಮ್ಮ ರಾಜ್ಯ ಮಾತ್ರವಲ್ಲದೇ ಪಕ್ಕದ ಕೇರಳ, ತಮಿಳುನಾಡಿನಿಂದಲೂ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಮಂಗಳೂರಿನ ಕುದ್ರೋಳಿಯಲ್ಲಿ ಇಂದಿನಿಂದ ನವದುರ್ಗಾರಾಧನೆ:

ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲೂ ನವರಾತ್ರಿ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ಆರಂಭವಾಗಲಿದೆ.

ಕುದ್ರೋಳಿಯ ನವದುರ್ಗಾರಾಧನೆಗೆ ಪ್ರತಿದಿನ ಸಹಸ್ರಾರು ಮಂದಿ ಭೇಟಿ ನೀಡುತ್ತಾರೆ. ಶಾರದೆ ಸೇರಿದಂತೆ ನವದುರ್ಗೆಯರನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದ್ದು. ಕ್ಷೇತ್ರ ಜನಾಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಅ.2ರಂದು ನಡೆಯುವ ‘ಮಂಗಳೂರು ದಸರಾ ಮೆರವಣಿ’ಗೆ ವರ್ಷದಿಂದ ವರ್ಷಕ್ಕೆ ಜನಾಕರ್ಷಣೆ ಪಡೆಯುತ್ತಿದೆ. ರಾತ್ರಿಯಿಡೀ ಸಾಗುವ ದಸರಾ ಮೆರವಣಿಗೆಯಲ್ಲಿ ಲಕ್ಷಾಂತರ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.ಧಾರವಾಡದಲ್ಲಿ ಇಂದಿನಿಂದ ನವರಾತ್ರಿ ಸಡಗರ:

ಉತ್ತರ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ನಗರ ಧಾರವಾಡದಲ್ಲಿ ದಸರಾ ಸಂಭ್ರಮ ಕಳೆಕಟ್ಟುತ್ತಿದೆ. ಈಗಾಗಲೇ ಒಂದು ವಾರದಿಂದ ಕಡಪಾ ಮೈದಾನದಲ್ಲಿ ದಸರಾ ವಸ್ತುಪ್ರದರ್ಶನ ಶುರುವಾಗಿದ್ದು, ಸೋಮವಾರದಿಂದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಕೊನೆ ದಿನ ಗಾಂಧಿನಗರದ ಬಂಡೆಮ್ಮ ದೇವಸ್ಥಾನದ ಆವರಣದಿಂದ ಕಡಪಾ ಮೈದಾನದವರೆಗೆ ಜಂಬೂ ಸವಾರಿ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ.

ನವರಾತ್ರಿ ನಿಮಿತ್ತ ನಗರದ ಜವಳಿ ಪೇಟೆಯಲ್ಲಿರುವ ಲಕ್ಷ್ಮಿನಾರಾಯಣ ದೇವಸ್ಥಾನ, ಮಂಗಳವಾರ ಪೇಟೆಯ ಕಟ್ಟಿಮಠ, ನಗರೇಶ್ವರ ದೇವಸ್ಥಾನ, ಧಾರವಾಡದ ಪೊಲೀಸ್‌ ಹೆಡ್‌ಕ್ವಾರ್ಟರ್ಸ್‌ನಲ್ಲಿಯ ಐತಿಹಾಸಿಕ ದುರ್ಗಾ ದೇವಸ್ಥಾನಗಳಲ್ಲಿ ನಿತ್ಯ ದೇವಿಗೆ ಅಲಂಕಾರ, ಪೂಜೆ ನಡೆಯಲಿದೆ.ತುಮಕೂರು ದಸರಾ ಉತ್ಸವ ಇಂದಿನಿಂದ ಪ್ರಾರಂಭ:‘ತುಮಕೂರು ದಸರಾ’ ಉತ್ಸವ ಸೋಮವಾರದಿಂದ ವಿದ್ಯುಕ್ತವಾಗಿ ಪ್ರಾರಂಭವಾಗಲಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭವ್ಯವಾಗಿ ನಿರ್ಮಿಸಿರುವ ದಸರಾ ಧಾರ್ಮಿಕ ಮಹಾಮಂಟಪದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ, ಬೆಳಗ್ಗೆ 5 ಗಂಟೆಗೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು. ಉತ್ಸವದ ಮೊದಲ ದಿನ ದೇವಿಗೆ ಶೈಲಪುತ್ರಿ ಅಲಂಕಾರ ಮಾಡಲಾಗುವುದು.ಬೆಳಗ್ಗೆ 5 ಗಂಟೆಗೆ ನಾದಸ್ವರದೊಂದಿಗೆ ಭೂಮಿಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ, 8 ಗಂಟೆಗೆ ನಗರದ ಸರ್ವೋದಯ ಹೈಸ್ಕೂಲ್ ಮೈದಾನದಲ್ಲಿ ಹಾಟ್ ಏರ್ ಬಲೂನ್‌ಗೆ ಚಾಲನೆ ನೀಡಲಾಗುವುದು. ಕೇಂದ್ರ ಸಚಿವ ವಿ.ಸೋಮಣ್ಣ, ದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ.ಜಯಚಂದ್ರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಸಂಗಪ್ಪ ತಂಗಡಗಿ ಸೇರಿ ಗಣ್ಯರು ಉಪಸ್ಥಿತರಿರುತ್ತಾರೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ