ಕನ್ನಡಪ್ರಭ ವಾರ್ತೆ ವಿಜಯಪುರ

ಎಐ ಶೃಂಗಸಭೆಗೆ ಅಸಂಬದ್ಧವಾಗಿ ಅಡ್ಡಿಪಡಿಸಿದ ಕಾಂಗ್ರೆಸ್ ನಡೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಅಣಿಯಾಗುತ್ತಿದ್ದಂತೆ ನಗರದ ಕೋರ್ಟ್ ಸರ್ಕಲ್‌ ಬಳಿಯೇ ಬ್ಯಾರಿಕೇಡ್ ಹಾಕಿ ತಡೆದ ಪೊಲೀಸ್ ಅಧಿಕಾರಿಗಳು, 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕೆಲಕಾಲ ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಈ ನಡೆ ರಾಷ್ಟ್ರದ್ರೋಹಕ್ಕೆ ಸಮಾನವಾಗಿದೆ. ರಾಷ್ಟ್ರದ ಘನತೆಯನ್ನು ಹಾಳು ಮಾಡುವ ದುಷ್ಟ ಬುದ್ಧಿ ಹೊಂದಿರುವ ಕಾಂಗ್ರೆಸ್ ನಾಯಕರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಭಾರತ ಮಾನ ಹರಾಜು ಹಾಕುವ ಪ್ರಯತ್ನ ಮಾಡುವ ಮೂಲಕ ಭಾರತದ ಸಾಂಸ್ಕೃತಿಕತೆ ಹಾಗೂ ತಾಂತ್ರಿಕತೆಯನ್ನೂ ಸಹ ಅಪಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಕಾಪಸೆ ಮಾತನಾಡಿ, ಕಾಂಗ್ರೆಸ್ ದೇಶಕ್ಕೆ ನಿಷ್ಠೆ ತೋರಿಸುವುದು ನಿಜವೇ ಆಗಿದ್ದಿದ್ದರೆ ಇಂದು ಜಾಗತಿಕ ಅತಿಥಿಗಳ ಮುಂದೆ ಜಾಗತಿಕ ಎಐ ಸಮ್ಮೇಳನದಲ್ಲಿ ಅರೆಬೆತ್ತಲೆ ಕುಣಿಯುತ್ತಿರಲಿಲ್ಲ. ರಾಜಕೀಯ ವಿರೋಧಕ್ಕಾಗಿ ಇಂತಹ ಕೃತ್ಯ ನಡೆಸಿದವರಿಗೆ ಸಾರ್ವಜನಿಕರೇ ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ. ಸೋನಿಯಾ ಗಾಂಧಿಗೆ ಜ್ವರ ಬಂದರೆ ಉರುಳು ಸೇವೆ ಮಾಡುವ ಕಾಂಗ್ರೆಸ್ಸಿಗರು, ಭಾರತ ಮಾತೆಗೆ ಮಾತ್ರ ನಿತ್ಯ ನಿರಂತರ ಅವಮಾನ ಮಾಡುತ್ತಿರುತ್ತಾರೆ ಎಂದು ದೂರಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಭೀಮಾಶಂಕರ ಹದನೂರ, ರಾಜು ಬಿರಾದಾರ, ರವಿಕಾಂತ ಬಗಲಿ, ಈರಣ್ಣ ರಾವೂರ, ಮಹೇಂದ್ರ ನಾಯಕ, ವಿಜಯಕುಮಾರ ಕುಡಿಗನೂರ, ವಿಜಯ ಜೋಶಿ, ಕೃಷ್ಣ ಗುನ್ಹಾಳಕರ, ವಿಕಾಸ ಪದಕಿ, ಸಚಿನ ಬೊಂಬಳೆ, ರಾಜಕುಮಾರ ಸಗಾಯಿ, ರಮೇಶ ಬಿದನೂರ, ನಗರ ಮಂಡಲ ಅಧ್ಯಕ್ಷ ಸಂದೀಪ ಪಾಟೀಲ, ರಾಜೇಶ ತಾವಸೆ, ಚಿನ್ನು ಚಿನಗುಂಡಿ, ಅಶೋಕ ರಾಠೋಡ ನೇಬಗೇರಿ, ಭೀಮಸಿಂಗ ರಾಥೋಡ, ಭರತ ಕೋಳಿ, ಭರತ ಕುಲಕರ್ಣಿ, ಚೇತನ ಸಂಗಮ, ಭಾರತಿ ಭುಯ್ಯಾರ, ಬಸಮ್ಮ ಗುಜರಿ, ಜಯಶ್ರೀ ಅಫಜಲಪುರ, ಮಂಥನ ಗಾಯಕವಾಡ, ಅನಿಲ ಉಪ್ಪಾರ, ಸಂಗಮೇಶ ಉಕ್ಕಲಿ, ಶೇಖರ ಬಾಗಲಕೋಟ, ರಾಜಶೇಖರ ಬಾಗಲಕೋಟ, ಸ್ವರೂಪ ಸಪ್ತಾಳೆ, ವಿನೋದ ಪತ್ತಾರ, ಶಿವರಾಜ ಮಡಿವಾಳರ, ವಿವೇಕ ತಾವರಗೇರಿ, ಮಯೂರ ಮಾರ್ಗಾಂವ್ಕರ, ಸಾಗರ ಶೇರಖಾನೆ, ಸಂತೋಷ ಜಾಧವ ಪಾಲ್ಗೊಂಡಿದ್ದರು.


ನಕಲಿ ಗಾಂಧಿ ಮನೆತನಕ್ಕೆ ಮೆಚ್ಚಿಸಲಿಕ್ಕೆ ಈ ಕಾಂಗ್ರೆಸ್ ಕಾರ್ಯಕರ್ತರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎನ್ನಲು ಇದು ಮತ್ತೊಂದು ನಿದರ್ಶನವಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಅರೆಬೆತ್ತಲೆ ಕುಣಿಯುವುದನ್ನು ಕಂಡು ಸಾರ್ವಜನಿಕರೇ ದಂಡಿಸಿ ಬುದ್ಧಿ ಕಲಿಸಿದ್ದಾರೆ. ಆದ್ದರಿಂದ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದೆ ಹೋದರೆ ಕಾಂಗ್ರೆಸ್ ಪಕ್ಷ ಇಡೀ ರಾಷ್ಟ್ರದಿಂದಲೇ ಅಳಿದು ಹೋಗುವ ಸಮಯ ದೂರವಿಲ್ಲ.

ಉಮೇಶ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಸಿ ಮೋರ್ಚಾ ಬಿಜೆಪಿ

ಕಾಂಗ್ರೆಸ್ ಒಂದು ರೀತಿ ಕ್ಯಾನ್ಸರ್ ಇದ್ದಂತೆ, ಕೃತ್ತಕ ಬುದ್ಧಿಮತ್ತೆಯಲ್ಲಿ ಭಾರತ ಸಾರ್ವಭೌಮತೆ ಸಾಧಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಶೃಂಗಸಭೆಗೆ ಅಡ್ಡಿಪಡಿಸಿರುವ ಕಾಂಗ್ರೆಸ್ ನಡೆ ಖಂಡನಾರ್ಹ. ಇದು ದೇಶಕ್ಕೆ ಮಾಡಿದ ಅವಮಾನ. ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಇಂತಹ ಘಟನೆಗಳು ನಡೆಯುವುದು ಖಂಡನೀಯ.

ರಾಘವೇಂದ್ರ ಕಾಪಸೆ ಜಿಲ್ಲಾಧ್ಯಕ್ಷ ಯುವ ಮೋರ್ಚಾ