‘ಶರಾವತಿ ಪಂಪ್ಡ್‌ ಸ್ಟೋರೇಜ್‌ ಮಾರಕ’

KannadaprabhaNewsNetwork |  
Published : Oct 12, 2025, 01:00 AM IST
GANDHI 2 | Kannada Prabha

ಸಾರಾಂಶ

‘ಶರಾವತಿ ಮತ್ತು ವಾರಾಹಿ ಎರಡೂ ಯೋಜನೆಗಳ ವಿರುದ್ಧ ನನ್ನ ಜೀವನದ ಕೊನೆಯವರೆಗೆ ಹೋರಾಡುತ್ತೇನೆ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.

  ಬೆಂಗಳೂರು :  ‘ಶರಾವತಿ ಮತ್ತು ವಾರಾಹಿ ಎರಡೂ ಪಂಪ್ಡ್‌ ಸ್ಟೋರೇಜ್‌ ಯೋಜನೆಗಳು ಪರಿಸರಕ್ಕೆ ಮಾರಕವಾಗಲಿದ್ದು, ಪಶ್ಚಿಮ ಘಟ್ಟಗಳ ಜೀವಸಂಕುಲ, ಪರಿಸರ ವ್ಯವಸ್ಥೆಗೆ ತೀವ್ರ ಅಪಾಯ ಒಡ್ಡಲಿವೆ. ಹೀಗಾಗಿ ನನ್ನ ಜೀವನದ ಕೊನೆಯವರೆಗೆ ಈ ಯೋಜನೆ ವಿರುದ್ಧ ಹೋರಾಡುತ್ತೇನೆ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.

ಶರಾವತಿ ಮತ್ತು ವಾರಾಹಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗಳ ವಿರುದ್ಧ ‘ಪರಿಸರಕ್ಕಾಗಿ ನಾವು’ ಸಂಘಟನೆ ಶನಿವಾರ ಗಾಂಧಿಭವನದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಯೋಜನೆಗಳಿಂದ ಪರಿಸರ ನಾಶ ಮಾತ್ರವಲ್ಲ, ಕಾನೂನು ವಿಚಾರದಲ್ಲೂ ದೊಡ್ಡ ತಪ್ಪಾಗಿದೆ. ಹೀಗಾಗಿ ಇದರ ವಿರುದ್ಧ ನಾವೆಲ್ಲರೂ ಹೋರಾಟ ನಡೆಸಬೇಕು. ನಿಮಗೆ ಭರವಸೆ ಕೊಡುತ್ತೇನೆ. ಈ ಹೋರಾಟದಲ್ಲಿ ಕೊನೆಯವರೆಗೆ ನಿಮ್ಮ ಜತೆ ಇರುತ್ತೇನೆ ಎಂದು ಹೇಳಿದರು.

ಹೋರಾಟ ನಿಲ್ಲಲ್ಲ- ವಿ.ಗೋಪಾಲಗೌಡ:

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ ಮಾತನಾಡಿ, ಈ ಅಪಾಯಕಾರಿ ಯೋಜನೆಗಳ ವಿರುದ್ಧ ಬರೀ ಹೋರಾಟ ಒಂದೇ ಸಾಕಾಗುವುದಿಲ್ಲ. ಸರ್ಕಾರಗಳು ಈ ಹೋರಾಟದಿಂದ ದಾರಿಗೆ ಬರಲಿಲ್ಲ ಎಂದರೆ ಸುಪ್ರೀಂ ಕೋರ್ಟ್‌ನಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ. ನಿಮಗೆ ಸಹಾಯ, ಸಹಕಾರ ನೀಡಲು ನಾವು ಇರುತ್ತೇವೆ ಎಂದು ಭರವಸೆ ನೀಡಿದರು.

ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಾತನಾಡಿದರು. ವಿಷಯ ತಜ್ಞರಾದ ನಿರ್ಮಲಗೌಡ, ಶಂಕರ್‌ ಶರ್ಮಾ, ಅಖಿಲೇಶ್‌ ಚಿಪ್ಪಿ ಅವರು ಯೋಜನೆಯಿಂದ ಆಗುವ ಹಾನಿ ಕುರಿತು ವಿಚಾರ ಮಂಡಿಸಿದರು.

ಸಂಘಟನೆಯ ಅಧ್ಯಕ್ಷರು, ಮಾಜಿ ಶಾಸಕರಾದ ಎ.ಟಿ. ರಾಮಸ್ವಾಮಿ, ಕಪ್ಪತ್ತಗುಡ್ಡ ನಂದಿವೇರಿ ಮಠದ ಸ್ವಾಮೀಜಿ ಸೇರಿ ಹಲವರು ಹಾಜರಿದ್ದರು.

ಯೋಜನೆ ವಿರೋಧಿಸಿನಿರ್ಣಯ ಅಂಗೀಕಾರ

ಶರಾವತಿ ಮತ್ತು ವಾರಾಹಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗಳಿಂದ ಪಶ್ಚಿಮ ಘಟ್ಟಗಳ ಜೀವಸಂಕುಲ ಮತ್ತು ಪರಿಸರ ವ್ಯವಸ್ಥೆಗೆ ತೀವ್ರ ಅಪಾಯ ಆಗಲಿದೆ. ಹೀಗಾಗಿ ಯೋಜನೆ ಕೈಬಿಟ್ಟು ಪರ್ಯಾಯ ಮೂಲಗಳಿಂದ ಇಂಧನ ಉತ್ಪಾದಿಸಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿ ನಿರ್ಣಯ ತೆಗೆದುಕೊಳ್ಳಲಾಯಿತು.

ಏನಿದು ಯೋಜನೆ?

ಶರಾವತಿ ಪಂಪ್ಡ್‌ ಸ್ಟೋರೇಜ್‌ ಎರಡು ಜಲಾಶಯಗಳ ನಡುವೆ ಕಾರ್ಯಗತಗೊಳಿಸಲು ಉದ್ದೇಶಿಸಿದ ಯೋಜನೆ. ಹೆಚ್ಚುವರಿ ವಿದ್ಯುತ್‌ ಇದ್ದಾಗ ಕೆಳಗಿನ ಜಲಾಶಯದ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್‌ ಮಾಡಿ ಶೇಖರಿಸಲಾಗುತ್ತದೆ. ವಿದ್ಯುತ್‌ ಬೇಡಿಕೆ ಹೆಚ್ಚಾದಾಗ ಆ ನೀರು ಬಳಸಿ ವಿದ್ಯುತ್‌ ಉತ್ಪಾದಿಸಿ ಪೂರೈಸಲಾಗುತ್ತದೆ.

ಹೊಸ ಜಲಾಶಯ ನಿರ್ಮಾಣ ಮಾಡದೆ ಹೆಚ್ಚು ವಿದ್ಯುತ್‌ ಉತ್ಪಾದಿಸಲು ಅನುಕೂಲ ಆಗುವುದರಿಂದ ಇದು ಗ್ರಿಡ್‌ ಸ್ಥಿರತೆ ಕಾಪಾಡಿಕೊಳ್ಳಲು ಸಹಾಯ ಮಾಡಲಿದೆ ಎಂಬುದು ಸರ್ಕಾರದ ವಾದ. ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್‌) ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಯನ್ನು ತಳಕಳಲೆ ಮತ್ತು ಗೇರುಸೊಪ್ಪ ನಡುವೆ ಮಾಡುತ್ತಿದ್ದು, ₹10,500 ಕೋಟಿ ವೆಚ್ಚದಲ್ಲಿ 2000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!