ಭಕ್ತಿಯಿಂದ ಲೌಕಿಕ ಜಂಜಾಟಗಳಿಗೆ ಮುಕ್ತಿ

KannadaprabhaNewsNetwork |  
Published : Aug 25, 2025, 01:00 AM IST
33 | Kannada Prabha

ಸಾರಾಂಶ

ಶ್ರಾವಣ ಮಾಸದಲ್ಲಿ ಸದ್ವಿಚಾರಗಳನ್ನು ತಿಳಿದುಕೊಳ್ಳಲು ಸಾಕಷ್ಟು ಅವಕಾಶಗಳು ದೊರಕುತ್ತವೆ. ಅಧ್ಯಯನಕ್ಕೆಇದು ಪ್ರಶಸ್ಥ

ಕನ್ನಡಪ್ರಭ ವಾರ್ತೆ ಮೈಸೂರು

ದೈನಂದಿನ ಲೌಕಿಕ ಜಂಜಾಟಗಳಿಂದ ಹೊರ ಬರಬೇಕಾದರೆ ಭಕ್ತಿಯಿಂದ ಭಗವಂತನ ಸ್ಮರಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಗರ ಮಾಪನ ಯೋಜನಾಧಿಕಾರಿ ಜಿ. ಸೀಮಂತಿನಿ ತಿಳಿಸಿದರು.

ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನ ಸಮಾರೋಪದಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸದಲ್ಲಿ ಸದ್ವಿಚಾರಗಳನ್ನು ತಿಳಿದುಕೊಳ್ಳಲು ಸಾಕಷ್ಟು ಅವಕಾಶಗಳು ದೊರಕುತ್ತವೆ. ಅಧ್ಯಯನಕ್ಕೆಇದು ಪ್ರಶಸ್ಥವಾದ ಕಾಲ ಎಂದರು.

ಸಾಹಿತಿ ಡಾ.ಕೆ. ಅನಂತರಾಮು ಮಾತನಾಡಿ, ಲಕ್ಕಣ್ಣದಂಡೇಶನು ಶಿವತತ್ತ್ವ ಚಿಂತಾಮಣಿಯ ಒಂದೊಂದು ಪದ್ಯದಲ್ಲಿಯೂ ಒಬ್ಬೊಬ್ಬ ವ್ಯಕ್ತಿಯ ಮಹತ್ವಪೂರ್ಣವಾದ ಜೀವನವನ್ನೇ ಅಡಕಗೊಳಿಸಿದ್ದಾನೆ. 63 ಪುರಾತನರು ಅವರವರ ಶಿವಭಕ್ತಿಯನ್ನು ಮೆರೆದಿದ್ದಾರೆ. ಅವರ ಜೀವನದಗಾಥೆಯನ್ನು ಕೇಳಿಸಿಕೊಳ್ಳಲು ಸಾಧ್ಯವಾಗಿದ್ದು ಎಲ್ಲರ ಸೌಭಾಗ್ಯ ಎಂದರು.

ಸಾಹಿತಿ ಡಾ.ಬಿ.ವಿ. ವಸಂತಕುಮಾರ್‌ ಮಾತನಾಡಿ, ನಾದಬಿಂದು ಕಳಾತೀತಂ ಎಂಬಂತೆ ಶಬ್ಧವೇ ವಿಶ್ವದ ಸೃಷ್ಟಿಯ ಮೂಲವಾಗಿದೆ. ಇದು ವಿಜ್ಞಾನದ ಕ್ವಾಂಟಮ್ ಸಿದ್ಧಾಂತದ ಮೂಲಕವೂ ಸಾಬೀತಾಗಿದೆ. ನಾವು ಕೇಳುವ ಒಳ್ಳೆಯ ಮಾತುಗಳನ್ನು ಜೀವನಕ್ಕೆ ಬೆಳಕಾಗಿ ಪರಿವರ್ತಿಸಿಕೊಳ್ಳಬೇಕು. ಮಾತಿನಾಚೆಗಿನ ಮೌನವೂ ಅಷ್ಟೇ ಮುಖ್ಯ ಎಂದು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪ ನಿರ್ದೇಶಕಿ ಎಲ್. ಮೇಘಲಾ ಮಾತನಾಡಿ, ನಮ್ಮ ಇಲಾಖೆಯಿಂದ ಪ್ರತಿವರ್ಷ ಸುತ್ತೂರು ಜಾತ್ರೆಯಲ್ಲಿ ಮಳಿಗೆಗಳನ್ನು ತೆರೆಯುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರ ಕೌಶಲಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.

ಮೈಸೂರು ಶ್ರೀ ಕುದೇರು ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಹುಲಿಯೂರುದುರ್ಗದ ಶ್ರೀ ಸಿದ್ಧಲಿಂಗ ಶಿವಾನಂದ ಸ್ವಾಮೀಜಿ, ಕುಣಿಗಲ್ ಹಿರೇಮಠದ ಶ್ರೀ ವೀರರುದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿನ ಕೃಪೆಯಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಗುರುವಿನ ಗುಲಾಮನಾಗವ ತನಕ ಮುಕ್ತಿ ದೊರೆಯಲು ಸಾಧ್ಯವಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಮಕ್ಕಳನ್ನೂ ಕರೆದುಕೊಂಡು ಬರಬೇಕು. ಯುವಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವಾಗಬೇಕು ಎಂದು ಹೇಳಿದರು.

ಎಂ. ಗಿರೀಶ್, ವಸಂತಕುಮಾರಯ್ಯ ಮತ್ತು ಉಮಾ ನಾಗೇಶ್‌ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರವಚನ ಆಲಿಸಿ ಉತ್ತಮ ಪ್ರಬಂಧ ರಚಿಸಿದವರಿಗೆ ಬಹುಮಾನ ವಿತರಿಸಲಾಯಿತು. ಕೆ.ಬಿ. ಸೋಮಶೇಖರ್ ಹಾಗೂ ಎಚ್.ಎಸ್. ರಮೇಶ್‌ ಮತ್ತು ಕುಟುಂಬದವರು ಸೇವಾರ್ಥ ನೆರವೇರಿಸಿದರು. ಜೆಎಸ್‌ಎಸ್ ಲಲಿತಕಲಾ ವೃಂದದವರು ಪ್ರಾರ್ಥಿಸಿದರು. ಎನ್.ಆರ್. ಶಿವಕುಮಾರ್ ಸ್ವಾಗತಿಸಿದರು. ಕಲ್ಯಾಣದೇವರು ವಂದಿಸಿದರು. ಕುಮಾರಸ್ವಾಮಿ ವಿರಕ್ತಮಠ ನಿರೂಪಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ