ಕನ್ನಡಪ್ರಭ ವಾರ್ತೆ, ತುಮಕೂರು
ತೀವ್ರ ಕುತೂಹಲ ಮೂಡಿಸಿರುವ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 8 ನಿರ್ದೇಶಕರ ಅವಿರೋಧ ಆಯ್ಕೆ ಹೊರತುಪಡಿಸಿ ಉಳಿದ 6 ನಿರ್ದೇಶಕರ ಸ್ಥಾನಗಳಿಗೆ ಬೆಳಿಗ್ಗೆ 9 ಗಂಟೆಯಿಂದ ಬಿರುಸಿನ ಮತದಾನ ನಡೆದು 6 ಜನರು ನೂತನ ನಿರ್ದೇಶಕರಾಗಿ ಆಯ್ಕೆಯಾದರು.ಡಿಸಿಸಿ ಬ್ಯಾಂಕ್‌ನ 14 ನಿರ್ದೇಶಕರ ಸ್ಥಾನಗಳ ಪೈಕಿ ಎ ಕೆಟಗರಿಯ ನಾಲ್ವರು, ಬಿ ಸಿ ಡಿ ಹಾಗೂ ಡಿ1 ಕೆಟಗರಿಯ ತಲಾ 1 ನಿರ್ದೇಶಕ ಸ್ಥಾನ ಸೇರಿ ಒಟ್ಟು 8 ಮಂದಿ ನಿರ್ದೇಶಕರ ಅವಿರೋಧ ಆಯ್ಕೆಯಾಗಿದೆ. ಉಳಿದ ಪ್ರಾಥಮಿಕ ಕೃಷಿ ಉತ್ತಿನ ಸಹಕಾರ ಸಂಘದ ಎ ಕೆಟಗರಿಯ ಉಳಿದ 6 ತಾಲೂಕುಗಳಾದ ಕುಣಿಗಲ್, ತಿಪಟೂರು, ಪಾವಗಡ, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ಶಿರಾ ತಾಲೂಕುಗಳ ತಲಾ 1 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಿತು.
ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ 6 ಸ್ಥಾನಗಳಿಗೆ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಿ ಚುನಾವಣೆ ನಡೆಸಲಾಯಿತು. 6 ತಾಲೂಕುಗಳ ಮತದಾರರು ಡಿಸಿಸಿ ಬ್ಯಾಂಕ್‌ಗೆ ಆಗಮಿಸಿ ಉತ್ಸಾಹದಿಂದಲೇ ಮತದಾನ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.ಚಿಕ್ಕನಾಯಕನಹಳ್ಳಿ ತಾಲೂಕಿನ 23 ಮಂದಿ ಮತದಾರರು, ಗುಬ್ಬಿ ತಾಲೂಕು 21, ಕುಣಿಗಲ್ 18, ಪಾವಗಡ 20, ತಿಪಟೂರು 18, ಸಿರಾ 29 ಸಹಕಾರಿ ಸಂಘದ ಪ್ರತಿನಿಧಿಗಳಾಗಿರುವ ಮತದಾರರು ಡಿಸಿಸಿ ಬ್ಯಾಂಕ್‌ನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು.
ಚುನಾವಣೆ ನಡೆದ ಡಿಸಿಸಿ ಬ್ಯಾಂಕ್ ಮತಗಟ್ಟೆ ಕೇಂದ್ರದ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.ಮತಗಟ್ಟೆ ಕೇಂದ್ರದ 100 ಮೀಟರ್ ವ್ಯಾಪ್ತಿಯಿಂದ ದೂರದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸಿರುವ ಅಭ್ಯರ್ಥೊಗಳ ಬೆಂಬಲಿಗರು, ಸಹಕಾರ ಸಂಘಗಳ ಪ್ರತಿನಿಧಿಗಳು ಜಮಾಯಿಸಿದ್ದರು.
ಅವಿರೋಧ ಆಯ್ಕೆಯಾದವರು....ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎ ಕೆಟಗರಿ ತುಮಕೂರು ತಾಲೂಕಿನಿಂದ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ, ತುರುವೇಕೆರೆಯಿಂದ ಎಂ. ಸಿದ್ದಲಿಂಗಪ್ಪ, ಮಧುಗಿರಿಯಿಂದ ಜಿ.ಜೆ. ರಾಜಣ್ಣ, ಕೊರಟಗೆರೆಯಿಂದ ಎನ್. ಹನುಮಾನ್, ಬಿ. ವರ್ಗದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ, ಪಟ್ಟಣ ಸಹಕಾರ ಬ್ಯಾಂಕ್‌ಗಳು, ವ್ಯವಸಾಯೇತರ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ಎಸ್. ಲಕ್ಷ್ಮೀನಾರಾಯಣ, ಡಿ ವರ್ಗದ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೇತ್ರದಿಂದ ಬಿ. ನಾಗೇಶ್‌ಬಾಬು ಹಾಗೂ ಡಿ1 ವರ್ಗದ ಮಹಿಳಾ ಸಂಘಗಳ ಕ್ಷೇತ್ರದಿಂದ ಮಾಲತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ಮೂಲಕ ಆಯ್ಕೆಯಾದವರು
ಗುಬ್ಬಿಯಿಂದ ಎಚ್ ಸಿ ಪ್ರಭಾಕರ್ , ಚಿಕ್ಕನಾಯಕನಹಳ್ಳಿಯಿಂದ ಎಸ್.ಆರ್. ರಾಜಕುಮಾರ್, ಕುಣಿಗಲ್‌ನಿಂದ ಬಿ. ಶಿವಣ್ಣ, ತಿಪಟೂರಿನಿಂದ ಶಾಸಕ ಕೆ. ಷಡಕ್ಷರಿ, ಶಿರಾದಿಂದ ಜಿ.ಎಸ್.ರವಿ, ಪಾವಗಡದಿಂದ ಶಾಸಕ ಎಚ್.ವಿ. ವೆಂಕಟೇಶ್ ಆಯ್ಕೆಯಾಗಿದ್ದಾರೆ.