ಶನಿವಾರಸಂತೆ : ಜಮ್ಮುಕಾಶ್ಮೀರದ ಪೂಂಛ್‌ನಲ್ಲಿ ಡಿ. 27 ರಂದು ಬೆಳಗ್ಗಿನ ಜಾವದಲ್ಲಿ ಸೇನಾ ವಾಹನ ಪ್ರಪಾತಕ್ಕೆ ಉರುಳಿ ಭಾನುವಾರ ರಾತ್ರಿ ನಿಧನರಾಗಿದ್ದ ಯೋಧ ದಿವಿನ್ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ.
ದಿವಿನ್ ಪಾರ್ಥಿವ ಶರೀರ ಶ್ರೀನಗರದಿಂದ ಬೆಂಗಳೂರುಗೆ ವಿಮಾನದಲ್ಲಿ ಬರಲಿದ್ದು ಅಲ್ಲಿಂದ ಸೇನಾ ವಾಹನದಲ್ಲಿ ತವರಿಗೆ ಬರುವ ಸಂದರ್ಭ ಮೈಸೂರಿನಲ್ಲಿ ಕೊಡಗು-ಮೈಸೂರು ಸಂಸದ ಯುದುವೀರ್ ಒಡೆಯರ್ ಪಾರ್ಥಿವ ಶರೀರವನ್ನು ಬರ ಮಾಡಿಕೊಳ್ಳಲಿದ್ದಾರೆ. ಕುಶಾಲಗರದಲ್ಲಿ ನಿವೃತ್ತ ಸೈನಿಕರು ಮತ್ತು ಸಾರ್ವಜನಿಕರಿಗೆ ಸ್ಪಲ್ಪಹೊತ್ತು ದಿವಿನ್ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ.
ಕುಶಾಲನಗರದಿಂದ ಕೊಡಗು ಜಿಲ್ಲಾಡಳಿತ ದಿವಿನ್ ಪಾರ್ಥಿವ ಶರೀರವನ್ನು ಬರ ಮಾಡಿಕೊಳ್ಳಲಿದೆ. ಬೆಳಗ್ಗೆ 7 ಗಂಟೆಗೆ ಆಲೂರುಸಿದ್ದಾಪುರಕ್ಕೆ ಪಾರ್ಥಿವ ಶರೀರ ಬರುವ ನಿರೀಕ್ಷೆ ಇದೆ. ಮಂಗಳವಾರ ಆಲೂರುಸಿದ್ದಾಪುರದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹುತಾತ್ಮ ಯೋಧನ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ನಂತರ ಮಾಲಂಬಿ ಗ್ರಾಮದ ದಿವಿನ್ ಪೋಷಕರ ತೋಟದಲ್ಲಿ ದಿವಿನ್ ಅಂತ್ಯಕ್ರಿಯೆ ನಡೆಯಲಿದೆ. ದಿವಿನ್ ಮರಾಠ ರಿಜಿಮೆಂಟ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿನ್ನಲೆಯಲ್ಲಿ ಮರಾಠ ರಿಜಿಮೆಂಟ್ ತರಬೇತಿ ಕೇಂದ್ರ ಬೆಳಗಾವಿಯಲ್ಲಿರುವುದರಿಂದ ಬೆಳಗಾವಿಯಿಂದ ಮಿಲಿಟರಿ ಅಧಿಕಾರಿಗಳ ತಂಡ ಆಲೂರುಸಿದ್ದಾಪುರಕ್ಕೆ ಬಂದು ಸೇನಾ ಗೌರವ ನೀಡಲಿದ್ದಾರೆ.ಹುತಾತ್ಮ ಯೋಧ ದಿವಿನ್ 2013 ರಲ್ಲಿ ಸೇನೆಗೆ ಸೇರಿದ್ದಾರೆ.
ಬೆಳಗಾವಿಯಲ್ಲಿ ತರಬೇತಿ ಪಡೆದು ದೇಶದ ವಿವಿಧ ಕಡೆಗಳಲ್ಲಿ ಕರ್ತವ್ಯನಿರ್ವಹಿಸುತ್ತಾರೆ. ದಿವಿನ್‍ಗೆ ಪಿರಿಯಪಟ್ಟಣದ ಬಳಿಯ ಹುಡುಗಿಯೊಬ್ಬರ ಜೊತೆ ವಿವಾಹ ನಿಶ್ಚಯವಾಗಿದೆ. ಫೆ 23 ಕ್ಕೆ ವಿವಾಹದ ಆಮಂತ್ರಣ ಪತ್ರ ಮುದ್ರಿಸಲಾಗಿತ್ತು. ಆದರೆ ಆಮಂತ್ರಣ ಪತ್ರವನ್ನು ಹಂಚಿರಲಿಲ್ಲ. ದಿವಿನ್ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಆಲೂರು ಸಿದ್ದಾಪುರದಲ್ಲಿ ಪೂರೈಸಿದ್ದಾರೆ. ಶನಿವಾರಸಂತೆ ಭಾರತಿ ಪ.ಪೂ.ಕಾಲೇಜಿನಲ್ಲಿ ಪಿಯುಸಿ[ವಾಣಿಜ್ಯ ಶಾಸ್ತ್ರ] ಮುಗಿಸಿದ್ದಾರೆ. ಮತ್ತು ಅಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಮೊದಲ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಸೇನೆಗೆ ಆಯ್ಕೆ ನಡೆಯುತ್ತದೆ. ದಿವಿನ್ ಸೇನೆಗೆ ಆಯ್ಕೆಗೊಳ್ಳುತ್ತಾರೆ. ದಿವಿನ್ ತಂದೆ ಪಳಂಗೋಟು ಪ್ರಕಾಶ್ ಕಳೆದ ಏಪ್ರಿಲ್ ತಿಂಗಳಲ್ಲಿ ನಿಧನರಾಗಿದ್ದಾರೆ. ದಿವಿನ್ ತಂದೆ ತಾಯಿಗೆ ಒಬ್ಬನೆ ಪುತ್ರನಾಗಿದ್ದು ತಾಯಿ ಜಲಜಾಕ್ಷಿ ಈಗ ಪುತ್ರನನ್ನು ಕಳೆದುಕೊಂಡಿದ್ದಾರೆ. ಮಾಲಂಬಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಜಮ್ಮುಕಾಶ್ಮೀರದ ಪೂಂಛ್‌ನಲ್ಲಿ ಡಿ. 27 ರಂದು ಬೆಳಗ್ಗಿನ ಜಾವದಲ್ಲಿ ಸೇನಾ ವಾಹನ ಪ್ರಪಾತಕ್ಕೆ ಉರುಳಿ ಟ್ರಕ್‍ನಲ್ಲಿದ್ದ ಮರಾಠ ರಿಜಿಮೆಂಟ್ 10 ಮಂದಿ ಯೋಧರ ಪೈಕಿ ಕರ್ನಾಟಕದ ಮೂರು ಮಂದಿ ಮತ್ತು ಮಹಾರಾಷ್ಟ್ರದ ಇಬ್ಬರು ಯೋಧರು ಸ್ಥಳದಲ್ಲಿ ಹುತಾತ್ಮರಾಗಿದ್ದು 5 ಮಂದಿ ಯೋಧರು ಗಂಭೀರ ಗಾಯಗೊಂಡಿದ್ದರು ಈ ಪೈಕಿ ಕೊಡಗಿನ ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಬಳಿಯ ಮಾಲಂಬಿ ಗ್ರಾಮದ ಯೋಧ ಪಿ.ಪಿ.ದಿವಿನ್[32] ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ದಿವಿನ್ ಜಮ್ಮು ಕಾಶ್ಮೀರದ ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 4 ದಿನಗಳಿಂದ ದಿವಿನ್ ಸ್ಥಿತಿ ಚಿಂತಾಜನಕವಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಗುರುವಾರ ಮಿಲಿಟರಿ ಅಧಿಕಾರಿಗಳು ದಿವಿನ್ ಪೋಷಕರಿಗೆ ಶ್ರೀನಗರದ ಮಿಲಿಟರಿ ಆಸ್ಪತ್ರೆಗೆ ಬರುವಂತೆ ಮಾಹಿತಿ ನೀಡಿದ್ದರು. ಅದರಂತೆ ದಿವಿನ್ ತಾಯಿ ಜಲಜಾಕ್ಷಿ ಮತ್ತು ಸಂಬಂಧಿಕರು ಶ್ರೀನಗರ ತಲುಪಿದ್ದರು.
ಯೋಧ ದಿವಿನ್ ಹುತಾತ್ಮಗೊಂಡಿರುವ ಬಗ್ಗೆ ದಿವಿನ್ ಪೋಷಕರ ಜೊತೆಯಲ್ಲಿದ್ದ ಆಲೂರುಸಿದ್ದಾಪುರ ಸಮೀಪದ ಚಿಕ್ಕಕಣಗಾಲು ಗ್ರಾಮದವರಾದ ಮತ್ತು ಜಮ್ಮು ಕಾಶ್ಮೀರದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಯೋಧ ಪ್ರಶಾಂತ್ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಜಮ್ಮುಕಾಶ್ಮೀರದ ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ದಿವಿನ್ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ದಿವಿನ್ ಪರಿಸ್ಥಿತಿ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು.
ಸೋಮವಾರ ಮಧ್ಯಾಹ್ನ 2.30 ಕ್ಕೆ ಮರಣೋತ್ತರ ಪರೀಕ್ಷೆ ಮುಕ್ತಾಯ: ಸೋಮವಾರ ಬೆಳಗ್ಗೆ 10 ಗಂಟೆಗೆ ವರೆಗೂ ದಿವಿನ್ ಪಾರ್ಥಿವ ಶರೀರವನ್ನು ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿರಿಸಲಾಯಿತು. ನಂತರ ಮರಣೋತ್ತರ ಪರೀಕ್ಷೆಗಾಗಿ ಶ್ರೀನಗರದ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಶ್ರೀನಗರದ ಪೊಲೀಸರು ಮಹಜರು ಕಾರ್ಯನಡೆಸಿದರು. ಮಧ್ಯಾಹ್ನ 2.30 ಕ್ಕೆ ದಿವಿನ್ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಂದ ಮರಣ ದೃಢೀಕರಣ ಪತ್ರ ಸೇರಿದಂತೆ ದಿವಿನ್ ಪಾರ್ಥಿವ ಶರೀರವನ್ನು ಪೋಷಕರಿಗೆ ಒಪ್ಪಿಸಿದರು. ದಿವಿನ್ ನನ್ನ ಅಣ್ಣನ ಮಗನಾಗಿದ್ದು ತುಂಬಾ ಒಳ್ಳೆಯ ಹುಡುಗನಾಗಿದ್ದ. ಚಿಕ್ಕ ವಯಸಿನಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದ. ಈಗ ದಿವಿನ್ ವೀರಮರಣ ಹೊಂದಿರುವುದು ನಮ್ಮ ಕುಟುಂಬಕ್ಕೆ ದುಖ ತಂದಿದೆ. ದಿವಿನ್ ಅಂತ್ಯಕ್ರಿಯೆಯನ್ನು ತೋಟದಲ್ಲಿ ನಡೆಸಲು ಕುಟುಂಬಸ್ಥರು, ಗ್ರಾಮಸ್ಥರು, ಬಂಧುಗಳು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ದಿವಿನ್ ಚಿಕ್ಕಪ್ಪ ಪಳಂಗೋಟು ಶ್ರೀಧರ್ ತಿಳಿಸಿದರು.
ದಿವಿನ್ ಪ್ರೌಢಶಾಲೆಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ. ಅವನು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂಬುವುದನ್ನು ತಿಳಿದು ತುಂಬಾ ಸಂತೋಷಗೊಂಡಿದೆ. ಆದರೆ ಈಗ ಅವರು ಹುತಾತ್ಮರಾಗಿರುವುದು ತಿಳಿದು ಸಂಕಟವಾಗುತ್ತಿದೆ ಎಂದು ಆಲೂರುಸಿದ್ದಾಪುರ ಸರಕಾರಿ ಪ.ಪೂ.ಕಾಲೇಜು ಉಪನ್ಯಾಸಕ ಮಲ್ಲೇಶ್ ತಿಳಿಸಿದರು.
ಯೋಧ ದಿವಿನ್ ಹುತಾತ್ಮರಾಗಿರುವುದು ನೋವಿನ ವಿಚಾರ. ಇಂದು ದಿವಿನ್ ಪಾರ್ಥಿವ ಶರೀರ ತವರೂರಿಗೆ ಬರಲಿದೆ . ಜಿಲ್ಲಾಡಳಿತ ಹುತಾತ್ಮ ಯೋಧ ದಿವಿನ್ ಪಾರ್ಥಿವ ಶರೀರವನ್ನು ಗೌರಯುತವಾಗಿ ಬರ ಮಾಡಿಕೊಳ್ಳುವುದರಿಂದ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿ ದಿವಿನ್ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದರು.