ಪಾಲಾರ್‌ ಕೆರೆ ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ಕ್ರಮ

KannadaprabhaNewsNetwork |  
Published : Oct 26, 2025, 02:00 AM IST
೨೫ಬಿಟಿಎಂ-೨ಬೇತಮಂಗಲ ಬಳಿಯ ರಾಮಸಾಗರ ಪಾಲಾರ ಕೆರೆಗೆ ಶಾಸಕಿ ಎಂ.ರೂಪಕಲಾ ಬಾಗಿನ ಅರ್ಪಿಸಿದರು. | Kannada Prabha

ಸಾರಾಂಶ

ರಾಮಸಾಗರ ಪಾಲಾರ್‌ ಕೆರೆ ವೀಕ್ಷಿಸಲು ರಾಜ್ಯವಲ್ಲದೆ ಹೊರರಾಜ್ಯದ ಆಂಧ್ರ ತಮಿಳುನಾಡುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದ್ದರಿಂದ ಬೇತಮಂಗಲ ಹಾಗೂ ರಾಮಸಾಗರ ಕೆರೆಗಳ ಅಭಿವೃದ್ಧಿ ಜೊತೆಗೆ ಪ್ರವಾಸಿತಾಣವಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಕೆರೆ ತುಂಬಿರುವ ಕಾರಣ ಅಂತರ್ಜಲ ಹೆಚ್ಚಾಗಲಿದೆ.

ಕನ್ನಡಪ್ರಭ ವಾರ್ತೆ ಬೇತಮಂಗಲಜಿಲ್ಲೆಯ ಅತಿ ದೊಡ್ಡ ಕೆರೆಯಾದ ರಾಮಸಾಗರ ಪಾಲಾರ್ ಕೆರೆ ಅಭಿವೃದ್ಧಿಗಾಗಿ ೧.೪೫ ಕೋಟಿ ರು.ಗಳ ಅನುದಾನದಲ್ಲಿ ಕೆರೆ ಮತ್ತು ಕಟ್ಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಕೆರೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಿ ಎಂ.ರೂಪಕಲಾ ಭರವಸೆ ನೀಡಿದರು.ರಾಮಸಾಗರ ಪಾಲಾರ್ ಕೆರೆಗೆ ಬಾಗಿನ ಅರ್ಪಿಸುವ ಮುನ್ನ ಕೆರೆಯ ಮುಂಭಾಗದ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ನಂತರ ಸಂಪ್ರದಾಯದಂತೆ ಕೆರೆಯಲ್ಲಿ ಪೂಜೆಸಲ್ಲಿಸಿ ಬಾಗಿನ ಅರ್ಪಿಸಿದರು.ಪ್ರವಾಸಿ ತಾಣವಾಗಿ ಅಭಿವೃದ್ಧಿ

ಕೆಜಿಎಫ್ ತಾಲೂಕಿನ ಬೇತಮಂಗಲ ಹಾಗೂ ರಾಮಸಾಗರ ಪಾಲಾರ್ ಕೆರೆ ಸತತ ವಾರದಿಂದ ಕೋಡಿ ಹರಿಯುತ್ತಿದ್ದು, ತಾಲೂಕಿನ ಜನತೆಗೆ ಕುಡಿಯುವ ನೀರು ಹಾಗೂ ರೈತರ ಕೊಳವೆಬಾವಿಗಳ ಅಂತರ್ಜಲಕ್ಕೆ ಸಹಕಾರಿಯಾಗಿದೆ. ಕೆರೆಗಳು ಮೈದುಂಬಿ ಹರಿಯುತ್ತಿರುವ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಇಂತಹ ಪ್ರಕೃತಿ ತಾಣವನ್ನು ನೋಡಲು ರಾಜ್ಯವಲ್ಲದೆ ಹೊರರಾಜ್ಯದ ಆಂಧ್ರ ತಮಿಳುನಾಡುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದ್ದರಿಂದ ಬೇತಮಂಗಲ ಹಾಗೂ ರಾಮಸಾಗರ ಕೆರೆಗಳ ಅಭಿವೃದ್ಧಿ ಜೊತೆಗೆ ಪ್ರವಾಸಿತಾಣವಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆಯೂ ಅನೇಕ ಶಾಸಕರು ಪ್ರತಿನಿಧಿಸಿದ್ದಾರೆ. ತಾವೂ ಸಹ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇನೆ. ನನ್ನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಕೆಜಿಎಫ್‌ನಲ್ಲೇ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿಸಲು ಜಮೀನು ಗುರುತಿಸಿ ಕೈಗಾರಿಕೆಗಳನ್ನು ಆರಂಭಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು. ಯಾವುದೇ ಕಮಿಷನ್‌ ಪಡೆದಿಲ್ಲ

ಆದರೆ ಇದನ್ನು ಸಹಿಸದ ವಿರೋಧಿಗಳು ಅಭಿವೃದ್ಧಿಯ ನೆಪದಲ್ಲಿ ಕಮಿಷನ್ ವಸೂಲಿ ಮಾಡಲಾಗುತ್ತದೆ ಎಂಬ ಆರೋಪಗಳನ್ನು ಮಾಡುತ್ತಿರುವುದು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, ಆದರೆ ನಾನು ಯಾವುದೇ ಕಮಿಷನ್ ವಸೂಲಿಗೆ ಇಳಿದಿಲ್ಲ. ಸಿಕ್ಕ ಅವಕಾಶವನ್ನ ಪ್ರಾಮಾಣಿಕವಾಗಿ ಸದ್ಬಳಕೆ ಮಾಡಿಕೊಂಡು ಜವಾಬ್ದಾರಿಯಿಂದ ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದೇನೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.ಕುಡಿಯುವ ನೀರು ಪೂರೈಕೆ

ಬೇತಮಂಗಲ ಕೆರೆಗೆ ನೀರು ಹರಿಯುತ್ತಿರುವುದು ನಿಂತ ನಂತರ ಶುದ್ಧೀಕರಿಸಿ ಕೆಜಿಎಫ್‌ಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಬೇಸಿಗೆ ದಿನಗಳಲ್ಲಿ ಈಗಾಗಲೇ ಅಮೃತ್ ಸಿಟಿ ಯೋಜನೆ ಅಡಿಯಲ್ಲಿ ಪೈಪ್ ಲೈನ್ ಅಳವಡಿಸಿದ್ದು ನುರಿತ ಅಧಿಕಾರಿಗಳಿಂದ ಮತ್ತೊಮ್ಮೆ ಶುದ್ಧೀಕರಣ ಘಟಕ ಪರಿಶೀಲಿಸಿ ನವೀಕರಣಗೊಳಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಶಶಿಕಲಾ ಮಾಜಿ ಅಧ್ಯಕ್ಷೆ ರಮಾ ಮುರಳಿ, ಚನ್ನಕೇಶವ ರೆಡ್ಡಿ, ಕಮಸಂದ್ರ ನಾಗರಾಜ್, ಸರೋಜಮ್ಮ, ವೆಂಗಸಂದ್ರ ಸುನಿತಾ ಚಂದ್ರಶೇಖರ್, ಶಂಕರ್, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ, ವೃತ್ತ ನಿರೀಕ್ಷಕ ರಂಗಶಾಮಯ್ಯ, ಆರಕ್ಷಕ ಉಪ ನಿರೀಕ್ಷಕ ಗುರುರಾಜ್, ಮುಖಂಡರಾದ ಕಾರಿ ಪ್ರಸನ್ನ, ಹಂಗಳ ರಮೇಶ್, ರಾಮ್ ಬಾಬು, ಗುತ್ತಿಗೆದಾರ ಕೋದಂಡ ರೆಡ್ಡಿ, ಮುನಿರೆಡ್ಡಿ, ಆಂಜಪ್ಪ, ಚಂದ್ರಕಾಂತ್, ಸೀನಪ್ಪ, ಗೋಪೇನಲ್ಲಿ ಮುರಳಿ, ಪೆಂಡಾಲ್ ನಾರಾಯಣಸ್ವಾಮಿ ಇದ್ದರು.

PREV

Recommended Stories

ಬಾಲ್ಯವಿವಾಹ ನಿಷೇಧ, ಪೋಕ್ಸೋ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಿ-ನ್ಯಾಯಾಧೀಶ ಎಂ. ರಮೇಶ
ಬೇಕಾಬಿಟ್ಟಿ ಬೆಳೆ ಖರೀದಿಸುವ ವರ್ತಕರ ಲೈಸೆನ್ಸ್ ರದ್ದುಗೊಳಿಸಲು ಆಗ್ರಹ