ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ

Published : Oct 25, 2025, 12:51 PM IST
CM Siddaramaiah

ಸಾರಾಂಶ

ರಾಜ್ಯದಲ್ಲಿ ಸಹಕಾರ ಚಳವಳಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ಸಹಕಾರ ತತ್ವದಡಿ ಬರುವ ಎಲ್ಲಾ ಸಂಘ ಸಂಸ್ಥೆಗಳನ್ನು ಸಬಲೀಕರಣ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ಬೆಂಗಳೂರು :  ರಾಜ್ಯದಲ್ಲಿ ಸಹಕಾರ ಚಳವಳಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ಸಹಕಾರ ತತ್ವದಡಿ ಬರುವ ಎಲ್ಲಾ ಸಂಘ ಸಂಸ್ಥೆಗಳನ್ನು ಸಬಲೀಕರಣ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ವೇಳೆ ಜವಾಹರಲಾಲ್ ನೆಹರೂ ಅವರ ಜಯಂತಿ ದಿನವೇ 72ನೇ ‘ಸಹಕಾರಿ ಸಪ್ತಾಹ’ ಉದ್ಘಾಟಿಸಲಾಗುವುದು. ಸಪ್ತಾಹದ ಮೂಲಕವೂ ಸಹಕಾರ ಕ್ಷೇತ್ರದ ಸಬಲೀಕರಣಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ 72ನೇ ಸಹಕಾರ ಸಪ್ತಾಹ ಆಚರಣೆಯ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯಮಟ್ಟದ 72ನೇ ಸಪ್ತಾಹದ ಉದ್ಘಾಟನಾ ಸಮಾರಂಭ

ರಾಜ್ಯಮಟ್ಟದ 72ನೇ ಸಪ್ತಾಹದ ಉದ್ಘಾಟನಾ ಸಮಾರಂಭ ನೆಹರೂ ಜಯಂತಿ ದಿನವಾದ ನ.14 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ನಾನೇ ಉದ್ಘಾಟಿಸುತ್ತೇನೆ. ಬಳಿಕ ಮಂಗಳೂರು, ರಾಯಚೂರು, ಹಾವೇರಿ, ಹೊಸಪೇಟೆ, ಕೊಪ್ಪಳದಲ್ಲಿ ಸಪ್ತಾಹ ನಡೆಯಲಿದ್ದು ಸಮಾರೋಪ ಸಮಾರಂಭ ನ. 20 ರಂದು ಚಾಮರಾಜನಗರದಲ್ಲಿ ನಡೆಯಲಿದೆ. ಸಮಾರೋಪದಲ್ಲೂ ನಾನು ಭಾಗವಹಿಸುತ್ತೇನೆ ಎಂದು ಭರವಸೆ ನೀಡಿದರು.

ಸಹಕಾರ ಇಲಾಖೆ ಅನಿವಾರ್ಯ ಕಾರಣಗಳಿಂದ ನನ್ನ ಸುಪರ್ದಿಗೆ ಬಂದಿದೆ. ಸಹಕಾರಿ ಕ್ಷೇತ್ರವನ್ನು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದೇನೆ. ಹಾಲಿನ ಡೈರಿಗಳನ್ನು ಹಾಲಿನ ಒಕ್ಕೂಟಗಳ ಅಧೀನಕ್ಕೆ ತಂದಿದ್ದು ನಾನೇ. ಸಹಕಾರಿ ಕ್ಷೇತ್ರದಲ್ಲಿ ಒಕ್ಕೂಟಗಳನ್ನು ಮತ್ತಷ್ಟು ಬಲಗೊಳಿಸಬೇಕಿದೆ ಎಂದರು.

ಘೋಷವಾಕ್ಯಗಳನ್ನು ರಾಜ್ಯಗಳೇ ಘೋಷಿಸಬೇಕು:

ರಾಜ್ಯದಲ್ಲಿ ನಿತ್ಯ 1 ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ. ಇಂತಹ ಸಹಕಾರ ತತ್ವದಡಿ ಬರುವ ಎಲ್ಲಾ ಸಂಘ ಸಂಸ್ಥೆಗಳನ್ನೂ ಸಬಲೀಕರಣ ಮಾಡಬೇಕು. ರಾಜ್ಯದ ನೇಕಾರ, ಬಡಗಿ, ಮೀನುಗಾರರ ಸೊಸೈಟಿ ಗಳಂಥ ವೃತ್ತಿಮೂಲ ಸಂಘಗಳನ್ನು ಸಬಲಗೊಳಿಸಬೇಕು. ಸಹಕಾರ ಇಲಾಖೆ ರಾಜ್ಯದ ವಿಷಯವೇ ಹೊರತು ಕೇಂದ್ರದ ವಿಷಯವಲ್ಲ. ಹೀಗಾಗಿ ಸಹಕಾರ ಸಪ್ತಾಹದ ಘೋಷವಾಕ್ಯಗಳನ್ನು ಕೇಂದ್ರ ಸರ್ಕಾರದ ಬದಲಿಗೆ ಆಯಾ ರಾಜ್ಯಗಳೇ ಘೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಸಭೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ನಿಯಂತ್ರಣ ಕಾಯ್ದೆ ಪ್ರಕಾರ ಸಹಕಾರಿ ಬ್ಯಾಂಕ್ ಗಳ ವ್ಯವಸ್ಥಾಪಕರ ಸೇವಾವಧಿ ಮರು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಭೆಯಲ್ಲಿ ಮುಖ್ಯಮಂತ್ರಿಗೆ ಕೋರಲಾಯಿತು ಎಂದು ಮೂಲಗಳು ತಿಳಿಸಿವೆ.

ಸಚಿವರಾದ ಎಚ್.ಕೆ ಪಾಟೀಲ್, ಮಾಜಿ ಸಚಿವರಾದ ಕೆ.ಎನ್ ರಾಜಣ್ಣ, ಎಸ್.ಟಿ.ಸೋಮಶೇಖರ್, ಶಾಸಕರಾದ ವೆಂಕಟೇಶ್, ರಾಘವೇಂದ್ರ ಹಿಟ್ನಾಳ್, ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಜಿ.ಟಿ ದೇವೇಗೌಡ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಕಾರ ಮಹಾ ಮಂಡಲಗಳ ಪದಾಧಿಕಾರಿಗಳು ಹಾಜರಿದ್ದರು.

‘ಸಹಕಾರಿ ರತ್ನ’ ಪ್ರಶಸ್ತಿ ರಾಜ್ಯೋತ್ಸವ

ಮಾದರಿಯಲ್ಲಿ ನೀಡಿದರೆ ಉತ್ತಮವಲ್ಲವೇ?

ಸಹಕಾರಿ ಸಪ್ತಾಹದ ಉದ್ಘಾಟನಾ ಸಮಾರಂಭದ ದಿನವೇ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಿದ್ದು, ಪ್ರಶಸ್ತಿ ಪುರಸ್ಕೃರ ಆಯ್ಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ.

ಈ ಬಗ್ಗೆ ಸಭೆಯಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಕರ್ನಾಟಕ ಸಹಕಾರಿ ರತ್ನ ಪ್ರಶಸ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಮಾದರಿಯಲ್ಲಿ ನೀಡಿದರೆ ಒಳ್ಳೆಯದಲ್ಲವೇ?. ಮೊದಲೆಲ್ಲ ನೂರಾರು ಪ್ರಶಸ್ತಿ ನೀಡುತ್ತಿದ್ದರು. ಈಗ ಎಷ್ಟನೇ ವರ್ಷದ ಆಚರಣೆಯೋ ಅಷ್ಟೇ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ರೀತಿ ಮಾಡಬಹುದು ಅಥವಾ ಜಿಲ್ಲೆಗೆ ಒಂದರಂತೆ ಪ್ರಶಸ್ತಿ ನೀಡಿದರೆ ಸೂಕ್ತ. ಬೆಂಗಳೂರಿಗೆ ಅಗತ್ಯವಿದ್ದರೆ ಎರಡರಿಂದ ಐದು ಪ್ರಶಸ್ತಿಗಳು ಇರಲಿ. ಸಮಿತಿ ರಚಿಸಿ ಸಮಿತಿಯ ತೀರ್ಮಾನದಂತೆ ನೀಡಿ ಎಂದು ಸಿಎಂ ಸಲಹೆ ನೀಡಿರುವುದಾಗಿ ತಿಳಿದುಬಂದಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!