ಅಕ್ರಮ ಮದ್ಯ ಮಾರಾಟದ ವಿರುದ್ಧ ಕಠಿಣ ಕ್ರಮ

KannadaprabhaNewsNetwork | Published : Feb 14, 2024 2:15 AM

ಸಾರಾಂಶ

ಅಥಣಿ, ಚಿಕ್ಕೋಡಿ, ಬೈಲಹೊಂಗಲ ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಕ್ರಮ ಕೈಗೊಳ್ಳುವಂತೆ ಹೆಚ್ಚಿನ ಕರೆಗಳು ಸದ್ದು ಮಾಡಿದವು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಇನ್ನಿತರೆ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಾನೂನಿನ ಅಡಿ ಕಠಿಣ ಕ್ರಮ ಜರುಗಿಸಲಾಗುವುದು. ಜನರೊಂದಿಗೆ ಪೊಲೀಸ್‌ ಇಲಾಖೆ ಸದಾ ಇರಲಿದೆ. ಭಯ ಪಡದೆ ತಮ್ಮ ಗಮನಕ್ಕೆ ಬರುವ ಸಮಾಜಘಾತುಕ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆ ಸ್ವೀಕರಿಸಿ ಅವರು ಮಾತನಾಡಿದರು. ಅಥಣಿ, ಚಿಕ್ಕೋಡಿ, ಬೈಲಹೊಂಗಲ ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಕ್ರಮ ಕೈಗೊಳ್ಳುವಂತೆ ಹೆಚ್ಚಿನ ಕರೆಗಳು ಸದ್ದು ಮಾಡಿದವು. ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಅಥಣಿಯ ವ್ಯಕ್ತಿ ಕರೆ ಮಾಡಿ ಇಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶೌಚಾಲಯದ ವ್ಯವಸ್ಥೆ ಸರಿ ಇಲ್ಲ. ಇಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಹಾಗೂ ಗೋಕಾಕ, ಅಥಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಸಾಗಾಟ ನಡೆಯುತ್ತಿದೆ. ಇದರಿಂದ ಇತರೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಅಥಣಿ ತಾಲೂಕಿನ ಮಸರಗುಬ್ಬಿಯಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಬೇಕು ಎಂದರು. ಅಥಣಿಯಿಂದ ಬಂದ ಮತ್ತೊಂದು ಕರೆ, ರಡರಟ್ಟಿ ತೋಟದ ಮನೆ, ಹನುಮಪ್ಪನ ರಸ್ತೆಯಲ್ಲಿನ ರೂಮ್‌ಒಂದರಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಇದಕ್ಕೆ ಸಾಕಷ್ಟು ಯುವಕರು ಬಲಿಯಾಗುತ್ತಿದ್ದಾರೆ. ಮಾರಾಟಗಾರರ ಮೇಲೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ವ್ಯಕ್ತಿ ಕರೆ ಮಾಡಿ, ಜ.23. ರಂದು ಆನ್‌ಲೈನ್‌ ಮೂಲಕ ₹58 ಲಕ್ಷ ಕಳೆದುಕೊಂಡಿದ್ದೇನೆ. ಈಗಾಗಲೇ ದೂರು ನೀಡಲಾಗಿದೆ. ಇಲ್ಲಿಯವರೆಗೂ ಹಣ ಪತ್ತೆಯಾಗಿಲ್ಲ. ನಮ್ಮ ಹಣ ಯಾವಾಗ ಸಿಗುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಆನ್ಲೈನ್ ನಲ್ಲಿ ಹಣ ಕಳೆದುಕೊಂಡ ತಕ್ಷಣ ಪೊಲೀಸರಿಗೆ ದೂರು ನೀಡಬೇಕೆಂದು ಈಗಾಲೇ ಜಿಲ್ಲಾ ಪೊಲೀಸರು ಸಾಕಷ್ಟು ಜಾಗೃತಿ ಮೂಡಿಸಲಾಗಿದೆ.‌ ನೀವು ಹಣ ಕಳೆದುಕೊಂಡ 8 ದಿನದ ನಂತರ ದೂರು ನೀಡಿದ್ದೀರಿ. ಆನ್‌ಲೈನ್ ನಲ್ಲಿ ಕಳೆದುಕೊಂಡ ಹಣ ಬೇರೆ ಬೇರೆ ಕಡೆ ವರ್ಗವಾಗಿರುತ್ತದೆ. ಆದಷ್ಟು ಬೇಗ ನಮ್ಮ ಪೊಲೀಸರು ನಿಮ್ಮ ಹಣ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಜಿಲ್ಲೆಯ ವಿವಿಧ ಕಡೆಯಿಂದ ಆಸ್ತಿ ‌ವಿವಾದ, ಸಂಚಾರ ಸಮಸ್ಯೆ, ಶಾಲೆಯ‌ ಮುಂಭಾಗದಲ್ಲಿ ಅಕ್ರಮ ತಂಬಾಕು ವಸ್ತು ಮಾರಾಟ ಸೇರಿದಂತೆ ಇನ್ನಿತರ ಸಮಸ್ಯೆಯನ್ನು‌ ಹೇಳಿದರು. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಕಾರ್ಯದಕ್ರದಲ್ಲಿ ಬೆಳಗಾವಿ ನಗರದಿಂದ 4 ಕರೆಗಳು ಸೇರಿದಂತೆ ಒಟ್ಟು 26 ಕರೆಗಳು ಬಂದಿದ್ದವು, ಫೋನ್ ಕರೆಗಳನ್ನು ಸ್ವೀಕರಿಸಿ ದೂರುದಾರರಿಗೆ ಸ್ಪಂದಿಸಿ ಕ್ರಮ ಜರುಗಿಸುವ ಭರವಸೆ ಎಸ್ಪಿ ನೀಡಿದರು.

ಮನೆ ಅಳತೆ ಮಾಡಲು ಕಾಗವಾಡ ಠಾಣೆಯ ಪಿಎಸ್‌ಐ ಮಂಟೂರ ಎಂಬುವರು ಆಗಮಿಸಿದ್ದರು. ನಮ್ಮ ವ್ಯಾಜ್ಯ ನ್ಯಾಯಾಲಯದಲ್ಲಿದೆ ಎಂದು ತಿಳಿಸಿದರೂ ಮನೆ ಅಳತೆ ಮಾಡಿದ್ದಾರೆ ಎಂದು ಕಾಗವಾಡ ಮೂಲದ ವ್ಯಕ್ತಿ ದೂರಿದರು. ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುವುದು. ಪಿಎಸ್‌ಐ ನಿಯಮಬಾಹಿರವಾಗಿ ಕಾರ್ಯ ಮಾಡಿದ್ದಲ್ಲಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿ.ಬಸರಗಿ, ಪೊಲೀಸ್ ಅಧಿಕಾರಿಗಳಾದ ಶ್ರೀಶೈಲ್ ಬಿರಾದಾರ, ಸುರೇಶ ಬೇಡಗುಂಬಳ, ಲಕ್ಷ್ಮೀ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.

ಬಾಕ್ಸ್

ಕನ್ನಡದಲ್ಲೇ ಮಾತಾಡಿ

ಬೆಳಗಾವಿ ನಗರದ ಹಿಂದವಾಡಿಯಿಂದ ಮಹಿಳೆ ಕರೆ ಮಾಡಿ ಮೊದಲಿಗೆ ಕನ್ನಡದಲ್ಲೇ ಮಾತು ಆರಂಭಿಸಿದಳು, ಬಳಿಕ ಸರ್‌ ನೀವು ಮರಾಠಿ ಮಾತನಾಡುತ್ತೀರಾ ಎಂದು ಕೇಳಿದಳು. ಇದಕ್ಕೆ ಎಸ್ಪಿ ಡಾ.ಭೀಮಾಶಂಕರ ಗುಳೇದ ಅವರು ನಗುತ್ತಲೇ ಪ್ರತಿಕ್ರಿಯಿಸಿ , ಅಮ್ಮಾ ನೀವು ಕನ್ನಡದಲ್ಲೇ ಚನ್ನಾಗಿ ಮಾತನಾಡುತ್ತಿದ್ದೀರಿ. ಆದ್ದರಿಂದ ಕನ್ನಡದಲ್ಲೇ ಮಾತನಾಡಿ ಎಂದರು. ಆಕೆ ಕನ್ನಡಲ್ಲದೇ ತಮ್ಮ ಸಮಸ್ಯೆ ಹೇಳಿಕೊಂಡಳು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಅವರು, ಕಾನೂನು ಹೊರಾಟದ ಮೂಲಕವೇ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

Share this article