ಸುರಪುರದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸುರಪುರ
ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭ ಸ್ಥಗಿತ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಭಾರತ ಸರ್ಕಾರ (ಎನ್‌ಸಿಇಆರ್‌ಟಿ) ಅಂತಿಮವಾಗಿ ತೀರ್ಮಾನಿಸಿದಂತೆ ಅಂಗನವಾಡಿಗಳಲ್ಲಿ ಬೆಳಗ್ಗೆ 10ರಿಂದ 1 ಗಂಟೆಯವರೆಗೆ ತನಕ ಮಕ್ಕಳಿಗೆ ಔಪಚಾರಿಕ ಶಿಕ್ಷಣ (ಇಸಿಸಿಇ) ಬೋಧಿಸಲಾಗುತ್ತದೆ. ಇರುವಂತಹ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಬದಲಿಗೆ ಆಯಾಯ ಇಲಾಖೆಗಳು ತಮ್ಮ ವ್ಯಾಪ್ತಿ ಮೀರಿ (ಐಸಿಡಿಎಸ್) ಕೆಲಸಗಳನ್ನು ಹಂಚಿಕೊಳ್ಳುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಕರ್ನಾಟಕ ಸರ್ಕಾರ ಹೊಸ ಶಿಕ್ಷಣ ನೀತಿ ಅಳವಡಿಸುವುದಿಲ್ಲ ಎನ್ನುತ್ತಲೇ ರಾಜ್ಯದ ಶಿಕ್ಷಣ ನೀತಿ ರೂಪಿಸಲು ಪ್ರತ್ಯೇಕ ಆಯೋಗ ರಚಿಸಿದೆ. ಆಯೋಗದ ವರದಿ ಬರುವ ಮುನ್ನವೇ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಆದೇಶ ಮಾಡಿರುವುದು ಏಕಮುಖವಾಗಿದೆ. ಇದರಿಂದ 4 ವರ್ಷ ಮೇಲ್ಪಟ್ಟ ಮಕ್ಕಳನ್ನು ಶಿಕ್ಷಣ ಇಲಾಖೆಯಡಿಯಲ್ಲಿ ಹೋದರೆ ಅಂಗನವಾಡಿ ಅಸ್ತಿತ್ವ ಕಳೆದುಕೊಳ್ಳುತ್ತವೆ ಎಂದು ದೂರಿದರು.
4 ವರ್ಷದ ಮಕ್ಕಳು ಸರ್ಕಾರಿ ಶಾಲೆಗೆ ಹೋದರೆ ಅಂಗನವಾಡಿ ಕೇಂದ್ರಗಳಿಗೆ ಅನುದಾನ ಕ್ರಮೇಣವಾಗಿ ನಿಂತು ಮುಚ್ಚುತ್ತವೆ. ಅಲ್ಲದೆ ಮಕ್ಕಳಿಗೆ ಶಾಲೆಯಲ್ಲಿ ಆರೋಗ್ಯದಡೆಗೆ ಗಮನ ನೀಡುವುದಿಲ್ಲ. ಅಂಗನವಾಡಿ ಮತ್ತು ಶಾಲೆ ಎರಡರಲ್ಲೂ ದಾಖಲಾಗುತ್ತಾರೆ. ಸರಕಾರಿ ಶಾಲೆಗಳಲ್ಲಿ ಈಗಾಗಲೇ 36 ಸಾವಿರ ಶಿಕ್ಷಕರಿಲ್ಲ, ಅಲ್ಲದೆ ಸೂಕ್ತವಾದ ಶಾಲಾ ಕಟ್ಟಡಗಳಿಲ್ಲ. ಕೆಕೆಆರ್‌ಡಿಪಿಯಡಿ ಹೊಸದಾಗಿ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸುವುದನ್ನು ತಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
6 ವರ್ಷದ ಮಕ್ಕಳ ಸಂರಕ್ಷಣೆಗಾಗಿ ಭಾರತದಲ್ಲಿರುವ ಏಕೈಕ(ಐಸಿಡಿಎಸ್) ಯೋಜನೆ ಕಾಪಾಡಬೇಕು. ಇಲ್ಲಿದಿದ್ದರೆ ಸಾಮೂಹಿಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.