ಆರತಿ ಬೆಳಗಲು ಸೀಗವ್ವನಲ್ಲಿಗೆ ತೆರಳುವ ಸಡಗರ ಮಹಿಳೆಯರಿಗೆ ಅಚ್ಚುಮೆಚ್ಚುನಿಂಗರಾಜ ಬೇವಿನಕಟ್ಟಿ
ಪಟ್ಟಣದಲ್ಲಿ ಪ್ರತಿಷ್ಠಾಪಿಸುವ ಸೀಗವ್ವ ಮತ್ತು ಗೌರವ್ವನ ಮೂರ್ತಿಗಳಿಗೆ ಅ. 28ರಂದು ವಿಶೇಷವಾಗಿ ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಸೀಗಿ ಹುಣ್ಣಿಮೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.
ಹುಣ್ಣಿಮೆಯ ದಿನದಂದು ಹಾಗೂ ಮಾರನೇ ದಿನದ ರಾತ್ರಿ ವೇಳೆಯಲ್ಲಿ ಮಹಿಳೆಯರು ಹಾಗೂ ಚಿಕ್ಕಮಕ್ಕಳು ಸೇರಿದಂತೆ ವಿವಿಧ ಬಗೆಯ ಹೂ ಮುಡಿದು, ಬಣ್ಣಬಣ್ಣದ ಸೀರೆಗಳನ್ನುಟ್ಟು, ಸಕ್ಕರೆ ಗೊಂಬೆಯ ಆರತಿಯನ್ನು ತಟ್ಟೆಯಲ್ಲಿಟ್ಟುಕೊಂಡು ಸೀಗವ್ವನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ಬರುವ ಹಾದಿಯ ಮಧ್ಯ ಗ್ರಾಮೀಣ ಸೊಗಡಿನ ಜಾನಪದ ಶೈಲಿಯ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ ಅಕ್ಕತಂಗಿಯರಾದ ಸೀಗವ್ವ ಮತ್ತು ಗೌರವ್ವನಿಗೆ ಆರತಿ ಎತ್ತಿ ಬೆಳಗುವರು.''''''''ಗೌರಿ ಗೌರಿ ಅಂತ... ಗಣಪತಿ ಅಂತ... ಮುತ್ತಿನ ಚಂಡ ಅಂತ ಹೋಗಿ ಬಾ ಗೌರಿ ಸಾಗಿ ಬಾ ಗೌರಿ'''''''' ಎಂದು ಹಾಡು ಹಾಡುತ್ತಾ ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಸೀಗವ್ವ ಮತ್ತು ಗೌರವ್ವನಿಗೆ ಹಾಡು ಹಾಡುತ್ತಾ ಆರತಿ ಬೆಳಗಿ ಸಂಪ್ರದಾಯ ಮೆರೆಯುತ್ತಾರೆ.ಹೆಣ್ಣುಮಕ್ಕಳಿಂದ ವಿವಿಧ ಬಗೆಯ ಆಟ: ಸೀಗಿ ಹುಣ್ಣಿಮೆ ಕಾರ್ಯಕ್ಕೆಂದು ಗ್ರಾಮದ ಮಹಿಳೆಯರು ಹಾಗೂ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳು ಸಂಭ್ರಮದಿಂದ ಹಬ್ಬ ಆಚರಣೆ ಮಾಡುವುದರ ಜೊತೆಗೆ ಮಕ್ಕಳು, ಯುವಕರು, ಯುವತಿಯರು ಸೌಹಾರ್ದದಿಂದ ಚಂದಿರನ ಬೆಳದಿಂಗಳಲ್ಲಿ ತಮ್ಮ ನೆಚ್ಚಿನ ವಿವಿಧ ಆಟ ವಿನೋದಾವಳಿ ಪ್ರದರ್ಶಿಸಿ ನಲಿದಾಡುತ್ತಾರೆ.ಸೀಗಿ ಹುಣ್ಣಿಮೆ ಬಂತೆಂದರೆ ಸಾಕು ಉತ್ತರ ಕರ್ನಾಟಕದ ಹೆಂಗಳೆಯರಲ್ಲಿ ಸಂಭ್ರಮ ಸಡಗರ ಮನೆ ಮಾಡುತ್ತದೆ, ಹೆಣ್ಣುಮಕ್ಕಳು ವಾರಪೂರ್ತಿ ಹೊಸ ಸೀರೆ, ಉಡುಪು ಧರಿಸಿ ನಲಿದಾಡುವ ಸೀಗಿ ಹುಣ್ಣಿಮೆ ಆಚರಣೆಯ ಸಂಭ್ರಮ ಕಣ್ತುಂಬಿಕೊಳ್ಳುವುದೇ ಒಂದು ಸಂತಸ.
ಸೀಗಿ ಹುಣ್ಣಿಮೆ ದಿನ ಸಮೀಪಿಸುತ್ತಿದ್ದಂತೆಯೇ ಸಹಜವಾಗಿ ಸಕ್ಕರೆ ಗೊಂಬೆಗಳು ನೆನಪಿಗೆ ಬರುತ್ತವೆ. ಈ ಗೊಂಬೆಗಳು ಇಲ್ಲದಿದ್ದರೆ ಹುಣ್ಣಿಮೆಯ ಆಚರಣೆಯೇ ಅಪೂರ್ಣ ಎಂಬ ಮಾತುಗಳು ಕೇಳಿಬರುತ್ತವೆ. ವಾರ ಮೊದಲೇ ಗೊಂಬೆಗಳ ತಯಾರಿಕೆಯಲ್ಲಿ ತೊಡಗುವ ಗ್ರಾಮ ಹಾಗೂ ಪಟ್ಟಣಗಳ ಅನೇಕ ಕುಟುಂಬಗಳು ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹುಣ್ಣಿಮೆಗೆ ಅಗತ್ಯವಿರುವ ಗೊಂಬೆಗಳ ತಯಾರಿಕೆ ಸಡಗರದಿಂದ ಆರಂಭಗೊಂಡಿದೆ.
ಬೆಲೆ ಏರಿಕೆಯ ಬಿಸಿ: ಆರತಿ ತಯಾರಕರು ಸಾಮಾನ್ಯವಾಗಿ ಆರತಿಯ ಬೆಲೆಯನ್ನು ಏರಿಸಿದ್ದು ಮಾರುಕಟ್ಟೆಯಲ್ಲಿ ಕಂಡುಬರುತ್ತದೆ. ಒಂದು ಕ್ವಿಂಟಲ್ ಸಕ್ಕರೆಯಿಂದ ಆರತಿ ತಯಾರಿಸಲು ಬಳಸುವ ವಸ್ತುಗಳಿಂದ ೭೫ ರಿಂದ ೮೦ ಕೆಜಿ ಆರತಿಯನ್ನು ತಯಾರಿಸಬಹುದು. ಈ ನಿಟ್ಟಿನಲ್ಲಿ ಸಕ್ಕರೆ ಬೆಲೆಗಿಂತ ಆರತಿಯ ಬೆಲೆಯು ದ್ವಿಗುಣವಾಗುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಾರೆ ಗ್ರಾಹಕರು.
ಪೂಜ್ಯನೀಯವಾಗಿ ಗೌರವ್ವನನ್ನು ಪೂಜಿಸಿ ಮನೆಯಲ್ಲಿ ಸಿಹಿ ಪದಾರ್ಥ ಮಾಡಿ ಎಲ್ಲರೂ ಸಂಭ್ರಮಿಸುವ ಪರಿಯನ್ನು ನಾವು ಇಂದಿಗೂ ಗ್ರಾಮೀಣ ಭಾಗದಲ್ಲಿ ಕಾಣುತ್ತೇವೆ ಎಂದು ಗ್ರಾಮಸ್ಥೆಯರಾದ ಶೋಭಾ ಬೆಟಗೇರಿ, ನಿರ್ಮಲಾ ಹಿರೇಮಠ, ಅಕ್ಕಮ್ಮ ಬೆಟಗೇರಿ ಹೇಳುತ್ತಾರೆ.