-ಕೆ.ಎನ್.ಚಕ್ರಪಾಣಿ.

ಬಿಜೆಪಿ ಮುಖಂಡರು, ಅಧ್ಯಕ್ಷರು, ಚಕ್ರಪಾಣಿ ಫೌಂಡೇಷನ್ (ರಿ)

-ಇಂದು ಅಲ್ಲೂರಿ ಸೀತಾರಾಮ ರಾಜು ಜನ್ಮದಿನ

‘ಒಬ್ಬ ವ್ಯಕ್ತಿಯ ಜೀವನದ ಮೌಲ್ಯವನ್ನು ಆತ ಎಷ್ಟು ವರ್ಷ ಬದುಕಿದ ಎಂಬುದರಿಂದ ಅಳೆಯುವುದಿಲ್ಲ; ಸಮಾಜ ಮತ್ತು ರಾಷ್ಟ್ರಕ್ಕಾಗಿ ಎಷ್ಟು ಮಹತ್ತರ ಸೇವೆ ಸಲ್ಲಿಸಿದ ಎಂಬುದರಿಂದ ತೂಗಿ ನೋಡಲಾಗುತ್ತದೆ’- ಶೋಷಿತರ ಬದುಕುವ ಹಕ್ಕುಗಳಿಗಾಗಿ ಧ್ವನಿಯೆತ್ತಿದ ದೇಶದ ಸ್ವಾತಂತ್ರ್ಯ ಹೋರಾಟಗಾರರೂ ಆದ ಅಲ್ಲೂರಿ ಸೀತಾರಾಮ ರಾಜು ಅವರ ಜೀವನಕ್ಕೆ ಈ ಮಾತು ಅತ್ಯಂತ ಸೂಕ್ತವಾಗಿ ಅನ್ವಯಿಸುತ್ತದೆ.


ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿ ಅವರಂತೆ ಅಲ್ಲೂರಿ ಸೀತಾರಾಮ ರಾಜು ಅವರ ಹೆಸರೂ ಚಿರಸ್ಥಾಯಿಯಾಗಿ ಅಚ್ಚೊತ್ತಿದೆ. ಅವರು ಕೇವಲ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಕ್ರಾಂತಿಕಾರಿಯಲ್ಲ; ಆದಿವಾಸಿ ಸಮುದಾಯದ ಹಕ್ಕುಗಳ ರಕ್ಷಣೆಗಾಗಿ ಕೆಚ್ಚಿನಿಂದ ಹೋರಾಡಿದರು; ಸ್ವಾಭಿಮಾನದ ಪ್ರತೀಕ ಹಾಗೂ ತ್ಯಾಗದ ಪ್ರತಿರೂಪವಾಗಿದ್ದರು.

1897ರ ಜುಲೈ 4ರಂದು ಇಂದಿನ ಆಂಧ್ರಪ್ರದೇಶದ ಪಾಂಡ್ರಾಂಗಿ ಗ್ರಾಮದಲ್ಲಿ ಹುಟ್ಟಿದ ಅಲ್ಲೂರಿ ಸೀತಾರಾಮ ರಾಜು ಬಾಲ್ಯದಿಂದಲೇ ದೇಶಭಕ್ತಿ, ಅಧ್ಯಾತ್ಮ ಮತ್ತು ಸಾಮಾಜಿಕ ಕಾಳಜಿಯನ್ನು ಬೆಳೆಸಿಕೊಂಡಿದ್ದರು.

ಬುಡಕಟ್ಟು ಜನರಿಗೆ ಬ್ರಿಟಿಷರ ಕಾಯ್ದೆ ಹೊಡೆತ:

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಅವರು ಔಪಚಾರಿಕ ಶಿಕ್ಷಣವನ್ನು ಅರ್ಧದಲ್ಲೇ ಬಿಡಬೇಕಾಯಿತು. ತಂದೆಯ ಸಾವಿನ ನಂತರ ಸುಮಾರು 18ನೇ ವಯಸ್ಸಿಗೇ ಅವರು ಅಧ್ಯಾತ್ಮದತ್ತ ಮುಖಮಾಡಿ ಪೂರ್ವಘಟ್ಟದ ಅರಣ್ಯ ಪ್ರದೇಶಗಳಲ್ಲಿ ಸಂಚರಿಸುತ್ತಾ ಧ್ಯಾನ, ಯೋಗ ಮತ್ತು ಬದುಕಿನ ಕುರಿತಾದ ತತ್ವಚಿಂತನೆಗಳಲ್ಲಿ ತೊಡಗಿದರು. ಔಷಧೀಯ ಸಸ್ಯಗಳ ಕುರಿತು ಹೊಂದಿದ್ದ ಜ್ಞಾನದಿಂದ ಸ್ಥಳೀಯ ಆದಿವಾಸಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಕಾರಣದಿಂದ ಆದಿವಾಸಿ ಬುಡುಕಟ್ಟು ಜನರ ಕಣ್ಣಲ್ಲಿ ಆಧ್ಯಾತ್ಮಿಕ ಶಕ್ತಿಯುಳ್ಳ ವ್ಯಕ್ತಿಯಾಗಿಯೂ ಕಂಡು ಅವರ ವಿಶ್ವಾಸವನ್ನು ಗಳಿಸಿದ್ದರು.

1882ರ ಮದ್ರಾಸ್ ಅರಣ್ಯ ಕಾಯ್ದೆ ಸೇರಿದಂತೆ ಬ್ರಿಟಿಷರ ಅರಣ್ಯ ನೀತಿಗಳ ಪರಿಣಾಮವಾಗಿ ಆದಿವಾಸಿಗಳು ತಮಗೆ ಸಹಜವಾಗಿಯೇ ಇದ್ದ ಸಾಂಪ್ರದಾಯಿಕ ಹಕ್ಕುಗಳನ್ನು ಕಳೆದುಕೊಳ್ಳಬೇಕಾಯಿತು. ತಲೆಮಾರುಗಳಿಂದ ತಮಗೆ ಜೀವನಾಧಾರವಾಗಿದ್ದ ಅರಣ್ಯಗಳನ್ನು ಪ್ರವೇಶಿಸುವುದಕ್ಕೂ ಅವರಿಗೆ ನಿರ್ಬಂಧಗಳನ್ನು ಹೇರಲಾಯಿತು. ತಾವು ಹುಟ್ಟಿ ಬೆಳೆದ ನೆಲದಲ್ಲೇ ಆದಿವಾಸಿಗಳಿಗೆ ಆಡಳಿತ ನೀತಿಗಳಿಂದ ಒದಗಿಬಂದ ಸಂಕಷ್ಟವನ್ನು ನೋಡಿ ತಾಳಿಕೊಳ್ಳಲು ಅಲ್ಲೂರಿ ಅವರಿಗೆ ಸಾಧ್ಯವಾಗಲಿಲ್ಲ. ಈ ಅನ್ಯಾಯದ ವಿರುದ್ಧ ಜನರಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಹೋರಾಟದ ಮನೋಭಾವವನ್ನು ಬೆಳೆಸಿದರು.

ಬ್ರಿಟಿಷರ ಎದೆ ನಡುಗಿಸಿದ ಅಲ್ಲೂರಿ:

1922ರಲ್ಲಿ ಆರಂಭವಾದ ರಾಂಪಾ (ಮಾನ್ಯಂ) ದಂಗೆಯು ಭಾರತದ ಸ್ವಾತಂತ್ರ್ಯ ಹೋರಾಟದ ಮಹತ್ವದ ಅಧ್ಯಾಯವಾಗಿದೆ. ಆ ವೇಳೆ, ಅಲ್ಲೂರಿ ಸೀತಾರಾಮ ರಾಜು ಅವರ ನೇತೃತ್ವದಲ್ಲಿ ಸಾವಿರಾರು ಆದಿವಾಸಿಗಳು ಬ್ರಿಟಿಷ್ ಆಡಳಿತಕ್ಕೆ ಸವಾಲು ಹಾಕಿದರು. ಚಿಂತಪಲ್ಲಿ, ಕೃಷ್ಣದೇವಿಪೇಟ, ರಾಜವೊಮ್ಮಂಗಿ ಸೇರಿದಂತೆ ಅನೇಕ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು. ಬ್ರಿಟಿಷರು ಸ್ಥಾಪಿಸಿದ್ದ ನ್ಯಾಯಾಲಯಗಳನ್ನು ಬಹಿಷ್ಕರಿಸಲು ಕರೆ ನೀಡಿ, ಗ್ರಾಮ ಮಟ್ಟದಲ್ಲಿ ಪರ್ಯಾಯ ನ್ಯಾಯ ವ್ಯವಸ್ಥೆ ಹಾಗೂ ಸ್ಥಳೀಯ ಆಡಳಿತದ ಮಾದರಿಯನ್ನು ರೂಪಿಸಿದರು.

ಆಂತರ್ಯದಲ್ಲಿ ಆಧ್ಯಾತ್ಮಿಕ ಅನುಭೂತಿಗೆ ಹಂಬಲಿಸುತ್ತಿದ್ದ ಅಲ್ಲೂರಿ ಸೀತಾರಾಮ ರಾಜು, ಮತ್ತೊಂದೆಡೆ ಗೆರಿಲ್ಲಾ ಯುದ್ಧತಂತ್ರದಲ್ಲಿಯೂ ಅಸಾಮಾನ್ಯ ಪರಿಣತಿ ಗಳಿಸಿದ್ದರು. ಎದುರಾಳಿಗಳ ವಿರುದ್ಧ ಹೋರಾಡಲು ತಮ್ಮ ಬೆಂಬಲಿಗರಿಗೆ ಬಿಲ್ಲು-ಬಾಣ ಮತ್ತಿತರ ಸಾಂಪ್ರದಾಯಿಕ ಆಯುಧಗಳ ಬಳಕೆಯಲ್ಲಿ ತರಬೇತಿ ನೀಡುತ್ತಿದ್ದರು. ಮತ್ತೊಂದೆಡೆ, ಗೆರಿಲ್ಲಾ ಸಮರ ತಂತ್ರವನ್ನು ಹೆಣೆದು ಬ್ರಿಟಿಷರ ನಿಯಂತ್ರಣದಲ್ಲಿದ್ದ ಪೊಲೀಸ್ ಠಾಣೆಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿ ಅಲ್ಲಿರುತ್ತಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುತ್ತಿದ್ದರು. ವಿಶೇಷವೆಂದರೆ, ತಮ್ಮ ದಾಳಿಗಳ ಕುರಿತು ಮುಂಚಿತವಾಗಿಯೇ ಪತ್ರ ಮುಖೇನ ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ಬಳಿಕವೂ ಅವರನ್ನು ಯಶಸ್ವಿಯಾಗಿ ಮಣಿಸುತ್ತಿದ್ದರು. ಹೀಗೆ, ಬ್ರಿಟಿಷ್ ಪಡೆಗಳಿಗೆ ಸವಾಲು ಒಡ್ಡುತ್ತಿದ್ದ ಅವರಿಗೆ ಅರಣ್ಯವೇ ಕೋಟೆಯಾಗಿತ್ತು; ಜನರ ವಿಶ್ವಾಸವೇ ಅತಿದೊಡ್ಡ ಶಕ್ತಿಯಾಗಿತ್ತು.

ಅರಣ್ಯ ಪ್ರದೇಶದ ಇಂಚಿಂಚನ್ನೂ ಅರಿತಿದ್ದ ಅವರು, ಸ್ಥಳೀಯ ಆದಿವಾಸಿಗಳ ಸಹಕಾರದಿಂದ ಬಲಿಷ್ಠ ಮಾಹಿತಿ ಜಾಲವನ್ನು ನಿರ್ಮಿಸಿದ್ದರು. ಡೋಲಿನ ಸದ್ದು, ಪಕ್ಷಿಗಳ ಕೂಗಿನ ಅನುಕರಿಸುವ ಸಂಕೇತ ಭಾಷೆ ಹಾಗೂ ಗುಡ್ಡಗಾಡಿನಲ್ಲಿ ವಿಶಿಷ್ಟ ಕಾವಲು ವ್ಯವಸ್ಥೆ ಮೂಲಕ ಬ್ರಿಟಿಷ್ ಪಡೆಗಳ ಚಲನವಲನವನ್ನು ಕ್ಷಣಕ್ಷಣಕ್ಕೂ ತಿಳಿಯುವ ವ್ಯವಸ್ಥೆಯನ್ನು ಅವರು ರೂಪಿಸಿದ್ದರು.

ವಿಚಾರಣೆ ಇಲ್ಲದೇ ‘ಬಲಿದಾನ!’:

ಅಲ್ಲೂರಿ ಅವರ ಕೆಚ್ಚೆದೆಯ ಹೋರಾಟಕ್ಕೆ ಬೆಚ್ಚಿದ ಬ್ರಿಟಿಷ್ ಸರ್ಕಾರವು ನಂತರ ಅವರನ್ನು ಸೆರೆಹಿಡಿಯಲು ಸಹಕರಿಸುವವರಿಗೆ ಭಾರೀ ಬಹುಮಾನ ಘೋಷಿಸಿತು. ಅದಕ್ಕಾಗಿ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ್ದ ವಿಶೇಷ ಪಡೆಗಳನ್ನೂ ನಿಯೋಜಿಸಲಾಯಿತು. ಕೇವಲ ಅವರನ್ನು ಬಂಧಿಸುವ ಕಾರ್ಯಾಚರಣೆಗಾಗಿಯೇ ಬ್ರಿಟಿಷ್ ಆಡಳಿತವು ಆಗಿನ ಅವಧಿಯಲ್ಲೇ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿತ್ತು. ಅಂತಿಮವಾಗಿ 1924ರ ಮೇ 7ರಂದು ಅಲ್ಲೂರಿ ಬ್ರಿಟಿಷರ ವಶಕ್ಕೆ ಸಿಕ್ಕರು. ಸ್ಥಳೀಯ ಆದಿವಾಸಿಗಳ ಮೇಲೆ ನಡೆಯುತ್ತಿದ್ದ ಕ್ರೂರ ದಮನ ನಿಲ್ಲಲಿ ಎಂಬ ಉದ್ದೇಶದಿಂದಲೇ ಅವರು ತಮ್ಮನ್ನು ತಾವು ಬಲಿದಾನಕ್ಕೆ ಒಪ್ಪಿಸಿಕೊಂಡರು ಎಂಬ ಅಭಿಪ್ರಾಯವನ್ನು ಅನೇಕ ಇತಿಹಾಸಕಾರರು ವ್ಯಕ್ತಪಡಿಸುತ್ತಾರೆ.

ಸೆರೆ ಸಿಕ್ಕ ಅಲ್ಲೂರಿ ಅವರನ್ನು ಯಾವುದೇ ನ್ಯಾಯಯುತ ವಿಚಾರಣೆಯಿಲ್ಲದೆ ಮರವೊಂದಕ್ಕೆ ಕಟ್ಟಿಹಾಕಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಕೇವಲ 27ನೇ ವಯಸ್ಸಿನಲ್ಲಿ ಅವರು ಮಾತೃಭೂಮಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಆದರೆ ಅವರ ತ್ಯಾಗದಿಂದ ಸ್ವಾತಂತ್ರ್ಯದ ಕಿಚ್ಚು ಇನ್ನಷ್ಟು ಪ್ರಜ್ವಲಿಸಿತು. ಸಣ್ಣ ಪ್ರಾಯದಲ್ಲೇ ಅವರು ಪ್ರದರ್ಶಿಸಿದ ಅಸಾಧಾರಣ ನಾಯಕತ್ವ, ಸಂಘಟನಾ ಸಾಮರ್ಥ್ಯ ಮತ್ತು ಅಪ್ರತಿಮ ಶೌರ್ಯ ಅಚ್ಚರಿ ಹುಟ್ಟಿಸುತ್ತದೆ.

ಆಂಧ್ರಪ್ರದೇಶದಲ್ಲಿ ಅವರನ್ನು ತುಂಬು ಅಭಿಮಾನದಿಂದ ‘ಮಾನ್ಯಂ ವೀರುಡು’ ಎಂದು ಕರೆಯಲಾಗುತ್ತದೆ. ಈ ಬಿರುದು ಜನರು ಅವರಿಗೆ ನೀಡಿದ ಅತ್ಯುನ್ನತ ಗೌರವವಾಗಿದೆ. 2022ರಲ್ಲಿ ಭಾರತ ಸರ್ಕಾರವು ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮ ವಾರ್ಷಿಕೋತ್ಸವವನ್ನು ರಾಷ್ಟ್ರಮಟ್ಟದಲ್ಲಿ ಭವ್ಯವಾಗಿ ಆಚರಿಸಿತು. ಆಗ ವಿವಿಧೆಡೆ ಅವರ ಸ್ಮರಣಾರ್ಥ ಪ್ರತಿಮೆಗಳು ಸ್ಥಾಪನೆಗೊಂಡವು; ಹಲವು ಕಾರ್ಯಕ್ರಮಗಳು ನಡೆದವು. ಇದು ರಾಷ್ಟ್ರವು ಅವರ ತ್ಯಾಗವನ್ನು ವಿಶೇಷವಾಗಿ ಗೌರವಿಸಿದ ಸಂದರ್ಭವಾಗಿತ್ತು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೀಮಾವರಂನಲ್ಲಿ ಅಲ್ಲೂರಿ ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಆಂಧ್ರಪ್ರದೇಶದಲ್ಲಿ ಜಿಲ್ಲೆಯೊಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಇಂದು ದೇಶವು ಅಲ್ಲೂರಿ ಅವರ 129ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಅಮರವೀರರಾಗಿ ಅವರಿಗೆ ಸಲ್ಲಬೇಕಾದ ಹೆಚ್ಚಿನ ಗೌರವದ ಬಗ್ಗೆ ಅವಲೋಕಿಸಬೇಕಾಗಿದೆ. ಅವರ ಜೀವನಗಾಥೆಯನ್ನು ಶಾಲಾ-ಕಾಲೇಜುಗಳ ಪಠ್ಯಕ್ರಮಗಳಲ್ಲಿ ಇನ್ನಷ್ಟು ವ್ಯಾಪಕವಾಗಿ ಪರಿಚಯಿಸುವ ಹಾಗೂ ಯುವಜನತೆಗೆ ಅವರ ಆದರ್ಶಗಳನ್ನು ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಎಂದೆಂದಿಗೂ ಪ್ರೇರಣೆಯಾಗುವಂತಹ ಮಹಾನ್ ಚೇತನವಾದ ಕ್ಷಾತ್ರತೇಜಸ್ಸಿನ ದೇಶಪ್ರೇಮಿ ಅಲ್ಲೂರಿ ಅವರನ್ನು ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿಗೆ ಪರಿಗಣಿಸಬೇಕೆಂಬ ಕೂಗು ನಾಗರಿಕ ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳಿಂದ ಹಲವು ವರ್ಷಗಳಿಂದಲೇ ಕೇಳಿಬರುತ್ತಿದೆ. ಅಲ್ಲೂರಿ ಅವರಿಗೆ ಈ ಪುರಸ್ಕಾರ ಸಂದರೆ ಅದು ಕೇವಲ ಒಬ್ಬ ವ್ಯಕ್ತಿಗೆ ನೀಡುವ ಗೌರವವಾಗುವುದಿಲ್ಲ; ಭಾರತದ ಸ್ವಾತಂತ್ರ್ಯ ಹೋರಾಟದ ಅನೇಕ ಅನಾಮಧೇಯ ವೀರರಿಗೆ ಸಲ್ಲಿಸುವ ಗೌರವವೂ ಆಗಲಿದೆ. ಅಲ್ಲೂರಿ ಸೀತಾರಾಮ ರಾಜು ಅವರು ಭಾರತದ ಸುಪುತ್ರರೂ ಹೌದು, ವಿಶ್ವವಂದ್ಯರೂ ಹೌದು!