ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಆರ್.ಸಿ ರಸ್ತೆಯ ಶ್ರಮ ಕಛೇರಿಯಲ್ಲಿ ಮೇ ೩೦ ರಂದು ಕಾರ್ಮಿಕರ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ಸಿದ್ದಾತಾ ಸಭೆ ಭಾನುವಾರ ನಡೆಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯುನ ರಾಜ್ಯಾಧ್ಯಕ್ಷರಾದ ಎಸ್. ವರಲಕ್ಷ್ಮಿ, ಮೇ ೨೦ನೇ ತಾರೀಖು ಭಾರತದ ಕಾರ್ಮಿಕರು ಮತ್ತೊಮ್ಮೆ ಅಖಿಲ ಭಾರತ ಸಾವ್ರತ್ರಿಕ ಮುಷ್ಕರಕ್ಕೆ ತಯಾರಾಗುತ್ತಿದ್ದಾರೆ. ಈ ಮುಷ್ಕರ ಬಹಳ ಪ್ರಾಮುಖ್ಯತೆ ಪಡೆದಿದೆ. ಅಂದು ಇಡೀ ದೇಶದ ಕಾರ್ಮಿಕರು ತಮ್ಮ ಕೆಲಸ ನಿಲ್ಲಿಸುತ್ತಾರೆ. ರೈತರು ಕೃಷಿ ಕೂಲಿ ಕಾರ್ಮಿಕರು, ವಿದ್ಯಾರ್ಥಿ ಯುವಜನರು, ಮಹಿಳೆಯರು ಬೀದಿಗೆ ಇಳಿಯುತ್ತಿದ್ದಾರೆ ಎಂದರು.
ಈ ಮುಷ್ಕರಕ್ಕೆ ಕಾರಣವೇನೆಂದರೆ ಈ ದೇಶದ ಸಂಪತ್ತನ್ನು ಸೃಷ್ಟಿ ಮಾಡುವ ಶ್ರಮಿಕರು ಅಂದರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಅಸಂಘಟಿತ ಕ್ಷೇತ್ರದಲ್ಲಿ ಬರುವ ಕಾರ್ಮಿಕರು, ಸ್ಕೀಮ್ ನೌಕರರು, ಮಹಿಳೆಯರು ಮತ್ತು ಸ್ವಯಂ ಉದ್ಯೋಗಿಗಳು, ಮನೆಯಲ್ಲಿ ಕುಳಿತು ಬೀಡಿ ಕಟ್ಟುವವರು ಮತ್ತು ತೋಟದ ಕಾರ್ಮಿಕರು, ಹಮಾಲಿ ಕಾರ್ಮಿಕರು ಹೀಗೆ ವಿವಿಧ ಸ್ತರದಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರು ಕೂಡ ಅಂದು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಆಕ್ರೋಶಕ್ಕೆ ಪೂರಕವಾಗಿ ರೈತರು ಕೂಡ ತಮ್ಮ ಭೂಮಿಯನ್ನು ಕಳೆದುಕೊಂಡವರು, ಬೆಳೆಗಳಿಗೆ ಬೆಂಬಲ ಬೆಲೆ ಸಿಗದವರು, ನರೇಗಾ ಕೆಲಸಗಾರರು ಮುಷ್ಕರಕ್ಕೆ ಬರುತ್ತಿದ್ದಾರೆ ಎಂದರು.ಮೋದಿ ಸರ್ಕಾರ ಇಂದು ಹಿಂದೂ ಹಿಂದೂ ಎಂದು ಹೇಳುತ್ತಿದ್ದಾರೆ. ಶ್ರಮಿಕರು ಕಾರ್ಮಿಕರಾಗಿರುತ್ತಾರೆ ಅದೇ ಶ್ರಮಿಕರ ಪರವಾಗಿರುವ ಕಾನೂನುಗಳನ್ನು ಬಂಡವಾಳಗಾರರ ಪರವಾಗಿ ಬದಲಾಯಿಸಿ ೪ ಸಂಹಿತೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಏನಿದು ೪ ಸಂಹಿತೆಗಳು ನಮ್ಮ ದೇಶದ ೨೯ ಕಾರ್ಮಿಕ ಕಾನೂನುಗಳನ್ನು ೪ ಸಂಹಿತೆಗಳಾಗಿ ಬದಲಾಯಿಸಿದ್ದಾರೆ, ಅದರಲ್ಲಿ ವೇತನ ಸಂಹಿತೆ ಎಂದು ಕರೆಯುತ್ತಾರೆ. ನಾವು ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಸಿಐಟಿಯು ಪ್ರತಿಪಾದನೆ ಮಾಡುತ್ತಿರುವುದು ಏನೆಂದರೆ, ನಮ್ಮ ದೇಶದಲ್ಲಿ ೧೦೦ಕ್ಕೆ ೮೦ರಷ್ಟು ಜನ ಯಾವುದೇ ಕಾನೂನು ವ್ಯಾಪ್ತಿಗೆ ಬರದೆ ಇರುವವರಿಗೆ ಕನಿಷ್ಟ ವೇತನ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.
ದಿನಕ್ಕೆ ೭ನೇ ವೇತನ ಆಯೋಗ ನಿಗದಿಪಡಿಸಿರುವ ೬೦೦ ರು ಕೂಲಿ ಕೊಡಬೇಕು ಎಂದು ಆಗ್ರಹಿಸುತ್ತೇವೆ. ಅದಕ್ಕೆ ಬೇಕಾದ ಕಾನೂನುಗಳನ್ನು ತರಬೇಕು ಎಂದು ಹೇಳುತಿದ್ದೇವೆ. ಆದರೆ ಈ ಕೇಂದ್ರ ಸರ್ಕಾರ ಕನಿಷ್ಟ ವೇತನವನ್ನು ಕೂಡ ಜಾರಿ ಮಾಡದೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಬಂಡವಾಳಗಾರರು ಹೇಳುವ ಹಾಗೆ ದಿನಕ್ಕೆ ೧೭೭ ರು ಕೊಡಬೇಕು ಎಂದು ಹೇಳುತ್ತಿದ್ದಾರೆ. ಈ ವೇಜ್ ಕೋಡ್ ನಲ್ಲಿ ಬೋನಸ್ ಗ್ರಾಜುಟಿ ಎಲ್ಲವನ್ನು ಸಡಿಲವಾಗುತ್ತಿದೆ, ಇದರಿಂದ ದೇಶದಲ್ಲಿ ಇನ್ನು ಮುಂದೆ ವೇತನ ಹೆಚ್ಚಾಗುವುದಿಲ್ಲ ಇದಕ್ಕೆ ದೊಡ್ಡು ಪೆಟ್ಟು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇನ್ನೊಂದು ಗಂಭೀರ ವಿಷಯವೆಂದರೆ ಸಂಘಗಳನ್ನು ಕಟ್ಟಿಕೊಳ್ಳುವ ಹಕ್ಕಿತ್ತು. ೧೯೨೬ರ ಕಾಯ್ದೆಯಲ್ಲಿ ಹಲವಾರು ಬದಲಾವಣೆ ತಂದು ಮುಂದೆ ಯಾರು ಸಂಘಗಳನ್ನು ಕಟ್ಟದ ಹಾಗೆ ಕಾನೂನುಗಳನ್ನು ತಂದಿರುತ್ತಾರೆ. ಇನ್ನುಮುಂದೆ ನಮ್ಮ ದೇಶದ ೩೦ ಕೋಟಿಗೂ ಹೆಚ್ಚು ಕಾರ್ಮಿಕರು ಯಾವುದೆ ಸಂಘಗಳನ್ನು ಕಟ್ಟಿಕೊಳ್ಳದೆ ಪ್ರಶ್ನೆ ಮಾಡುವ ಹಕ್ಕುಗಳನ್ನು ಕೂಡ ಕೇಂದ್ರ ಸರ್ಕಾರ ಕಿತ್ತು ಹಾಕುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.
ಕಾರ್ಮಿಕರಿಗೆ ಸಮಸ್ಯೆ, ಅನ್ಯಾಯಗಳಾದರೆ ಅವರಿಗೆ ನ್ಯಾಯಾಲಯಗಳು ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದ್ದವು, ಆದರೆ ಈಗ ಅವುಗಳನ್ನು ಕೂಡ ರದ್ದು ಮಾಡಿ ಕಾರ್ಮಿಕ ನಿಗಮಗಳನ್ನು ಸ್ಥಾಪಿಸಿ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ನಮ್ಮ ದೇಶದ ಕಾರ್ಮಿಕರು, ರೈತರು, ದುಡಿಯುವ ಮಹಿಳೆಯರು ಎದುರಿಸುತ್ತಿದ್ದಾರೆ. ಜೊತೆಗೆ ಎಲ್ಲಾ ಬಂಡವಾಳಶಾಹಿಗಳ ಪರವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಈ ಎಲ್ಲಾ ನೀತಿಗಳನ್ನು ವಿರೋಧಿಸಿ ಮೇ ೨೦ ರಂದು ದೇಶ ಪ್ರೇಮಿ ಮುಷ್ಕರವನ್ನು ಮಾಡುತ್ತಿದ್ದೇವೆ. ಈ ಮುಷ್ಕರದಲ್ಲಿ ಎಲ್ಲಾ ಕಾರ್ಮಿಕರು ಎಲ್ಲಾ ವಿಭಾಗದ ದುಡಿಯುವ ಜನರು ಪಾಲ್ಗೊಂಡು ದೇಶದ ಉತ್ಪಾದನೆಯನ್ನು ನಿಲ್ಲಿಸಿ ಸೇವೆಯನ್ನು ನಿಲ್ಲಿಸಿ ಕಾರ್ಮಿಕರ ಶಕ್ತಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಈ ಮುಷ್ಕರವನ್ನು ಬೆಂಬಲಿಸಬೇಕು ಎಂದು ಸಿಐಟಿಯುನ ರಾಜ್ಯಾಧ್ಯಕ್ಷರಾದ ಎಸ್. ವರಲಕ್ಷ್ಮೀ ಆಗ್ರಹಿಸಿದರು.ಸಭೆಯಲ್ಲಿ ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಎಂ.ಬಿ ಪುಷ್ಪಾ, ಜಿಲ್ಲಾದ್ಯಕ್ಷರಾದ ಧರ್ಮೇಶ್, ಅರವಿಂದ್ ಇನ್ನಿತರು ಇದ್ದರು.