ಸಾರಾಂಶ
ಮುಂದಿನ ಶೈಕ್ಷಣಿಕ ಸಾಲಿನಿಂದ ಮತ್ತೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಯೋಜನೆ ರೂಪಿಸಲಾಗಿದ್ದು, ಇವುಗಳಲ್ಲಿ 500 ಶಾಲೆಗಳಿಗೆ ಬುಧವಾರ ಪಟ್ಟಿ ಸಹಿತ ಅಧಿಸೂಚನೆ ಹೊರಡಿಸಲಾಗಿದೆ.
ಬೆಂಗಳೂರು : ಮುಂದಿನ ಶೈಕ್ಷಣಿಕ ಸಾಲಿನಿಂದ ಮತ್ತೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಯೋಜನೆ ರೂಪಿಸಲಾಗಿದ್ದು, ಇವುಗಳಲ್ಲಿ 500 ಶಾಲೆಗಳಿಗೆ ಬುಧವಾರ ಪಟ್ಟಿ ಸಹಿತ ಅಧಿಸೂಚನೆ ಹೊರಡಿಸಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಪ್ರತಿ ಶಾಲೆಗೆ 4 ಕೋಟಿ ರು.ನಂತೆ ಒಟ್ಟಾರೆ 3 ಸಾವಿರ ಕೋಟಿ ರು.ಗಳನ್ನು ಸರ್ಕಾರದಿಂದ ಭರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಹಯೋಗದಲ್ಲಿ 500 ಶಾಲೆಗಳನ್ನು ಕೆಪಿಎಸ್‌ಗಳಾಗಿ ಉನ್ನತೀಕರಿಸಲಾಗುವುದು. ಜತೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನಿಧಿಯಿಂದ ಆ ಭಾಗದ 200 ಶಾಲೆಗಳು, ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಿಂದ 10 ತಾಲೂಕುಗಳಲ್ಲಿ 100 ಶಾಲೆಗಳನ್ನು ಕೆಪಿಎಸ್‌ಗಳಾಗಿ ಉನ್ನತೀಕರಿಸಲಾಗುವುದು ಎಂದರು.
ಈಗಾಗಲೇ ರಾಜ್ಯದಲ್ಲಿ 308 ಕೆಪಿಎಸ್ ಶಾಲೆಗಳಿವೆ. ಹಂತ ಹಂತವಾಗಿ ಪ್ರತಿ ಗ್ರಾಪಂಗೊಂದು ಕೆಪಿಎಸ್ ಶಾಲೆ ಮಾಡಿ ಆ ಶಾಲೆಗಳಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಕಡೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಮುಂದಿನ ವರ್ಷ 800 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು. ಈ ಶಾಲೆಗಳ ಸುತ್ತಲ 5 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಕಡಿಮೆ ಮಕ್ಕಳಿರುವ ಶಾಲೆಗಳ ಪೋಷಕರು, ಮಕ್ಕಳು ಮತ್ತು ಎಸ್‌ಡಿಎಂಸಿಗಳ ಒಪ್ಪಿಗೆ ನೀಡಿದರೆ ವಿಲೀನ ಮಾಡುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.
ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಶಿಕ್ಷಣ ಸುಧಾರಣಾ ಸಮಿತಿ ರಚಿಸಲಾಗುತ್ತದೆ. ಈ ಯೋಜನೆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ, ಕಲಿಕಾ ಗುಣಮಟ್ಟ ಹೆಚ್ಚಿಸಲು ಸರ್ಕಾರ ಬದ್ಧತೆ ಹೊಂದಿದೆ. ಕೆಪಿಎಸ್ ಶಾಲೆಗಳೂ ಸೇರಿ ಎಲ್ಲ ಸರ್ಕಾರಿ ಶಾಲೆಗಳಿಗೂ ಇನ್ನು ಮುಂದೆ ನವೆಂಬರ್ ತಿಂಗಳಿಂದಲೇ ದಾಖಲಾತಿ ಆಂದೋಲನ ನಡೆಸಲಾಗುವುದು ಎಂದು ಹೇಳಿದರು.
ಮಕ್ಕಳಿಗೆ ಉಚಿತ ಸಾರಿಗೆ-ಕಂಪ್ಯೂಟರ್ ತರಬೇತಿ:
ಕೆಪಿಎಸ್ ಶಾಲೆಗಳಿಗೆ 5 ಕಿ.ಮೀ. ವ್ಯಾಪ್ತಿಯ ಊರುಗಳಿಂದ ಮಕ್ಕಳನ್ನು ಕರೆದುಕೊಂಡು ಬರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತಿ ಶಾಲೆಯಲ್ಲಿ ಕನಿಷ್ಠ 1200 ರಿಂದ ಗರಿಷ್ಠ 1800 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಎಲ್‌ಕೆಜಿ, ಯುಕೆಜಿಗೆ ಕನಿಷ್ಠ 40ರಿಂದ 50 ಮಕ್ಕಳು, ಉಳಿದ ತರಗತಿಗಳಿಗೆ ಕನಿಷ್ಠ 50ರಿಂದ 60 ಮಕ್ಕಳ ಪ್ರವೇಶಕ್ಕೆ ಅವಕಾಶ ನೀಡಲು ಉದ್ದೇಶಿಸಲಾಗಿದೆ. ಈ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಮಾಧ್ಯಮ ಬೋಧನೆ ಇರುತ್ತದೆ. ಜೊತೆಗೆ 1ನೇ ತರಗತಿಯಿಂದಲೇ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
ರಾಜ್ಯದಲ್ಲಿ 18 ಸಾವಿರ ಶಿಕ್ಷಕರು, ಉಪನ್ಯಾಸಕರ ನೇಮಕಕ್ಕೆ ಕ್ರಮ
ಬೆಂಗಳೂರು : ರಾಜ್ಯ ಸರ್ಕಾರಿ, ಅನುದಾನಿತ ಶಾಲೆಗಳು ಹಾಗೂ ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕರ ಕೊರತೆ ನೀಗಿಸಲು 18 ಸಾವಿರ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ನವೆಂಬರ್ ಇಲ್ಲವೇ ಡಿಸೆಂಬರ್‌ನಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಿದ ನಂತರ ಸಿಇಟಿ ಮೂಲಕ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಶಾಲೆಗಳಿಗೆ 5000, ರಾಜ್ಯದ ಇತರೆ ಜಿಲ್ಲೆಗಳಲ್ಲಿ 5000 ಸಾವಿರ, ಅನುದಾನಿತ ಶಾಲೆಗಳಿಗೆ 5000 ಶಿಕ್ಷಕರು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಸೇರಿ ಒಟ್ಟು 18 ಸಾವಿರ ಶಿಕ್ಷಕರು, ಉಪನ್ಯಾಸಕರ ನೇಮಿಸಲಾಗುತ್ತದೆ. ಈ ಸಂಬಂಧ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದರು.
2022ರ ಶಿಕ್ಷರ ನೇಮಕ ಅಧಿಸೂಚನೆ ಪ್ರಕರಣವು ನ್ಯಾಯಾಲಯದಲ್ಲಿದೆ. ಆದರೆ, ಹೊಸ ಅಧಿಸೂಚನೆಗೂ ಮತ್ತು ಹಿಂದಿನ ಅಧಿಸೂಚನೆಗೂ ಸಂಬಂಧವಿಲ್ಲ. ನಿಯಮಗಳನ್ನು ಸರಿಪಡಿಸಿ ಅಧಿಸೂಚನೆ ಪ್ರಕಟಿಸಲಾಗುತ್ತದೆ. ಪರಿಶಿಷ್ಟ ಜಾತಿ ಒಳಪಂಗಡಗಳಿಗೆ ಒಳ ಮೀಸಲಾತಿ ಅನುಸಾರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.