ಸಾರಾಂಶ
ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಕ್ಯಾಂಪ್ ಪ್ರದೇಶದ ಶಾಲೆಯೊಂದರ 5ನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷೆ ನೀಡಿರುವ ಘಟನೆ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಬೆಳಗಾವಿ : ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಕ್ಯಾಂಪ್ ಪ್ರದೇಶದ ಶಾಲೆಯೊಂದರ 5ನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷೆ ನೀಡಿರುವ ಘಟನೆ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ಆ ಶಿಕ್ಷಕಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ। ಸೋನಾಲಿ ಸರ್ನೋಬತ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸೋಮವಾರ ಶಾಲೆಯಲ್ಲಿ ಶಿಕ್ಷಕಿ ಆ ವಿದ್ಯಾರ್ಥಿಯ ಫೇಸ್ಬುಕ್ ವಿಡಿಯೋ ಮತ್ತು ಗಣವೇಷಧಾರಿಯ ಚಿತ್ರವನ್ನು ಸಂಪೂರ್ಣ ತರಗತಿಗೆ ತೋರಿಸಿ ಆ ವಿದ್ಯಾರ್ಥಿಗೆ ಘೋರ ಅಪಮಾನ ಮಾಡಿದ್ದಾರೆ. ಪುನಃ ಪುನಃ ತರಗತಿಯ ಹೊರಗೆ ನಿಲ್ಲಿಸುವ ಮೂಲಕ ಅವಮಾನಕಾರಿ ವರ್ತನೆ ಪ್ರದರ್ಶಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ವಿದ್ಯಾರ್ಥಿಯು ಶಾಲೆಯಲ್ಲಿ ನಡೆದ ಘಟನೆಯನ್ನು ಸಂಜೆ ಪೋಷಕರಿಗೆ ತಿಳಿಸಿದ್ದಾನೆ. ಭಾನುವಾರ ಸಾರ್ವಜನಿಕ ರಜೆ ದಿನವಾಗಿದ್ದರಿಂದ ವಿದ್ಯಾರ್ಥಿ ಪಥಸಂಚಲನದಲ್ಲಿ ಭಾಗವಹಿಸುವುದು ಸಂಪೂರ್ಣ ವೈಯಕ್ತಿಕ ವಿಷಯ. ಆದರೆ, ಶಿಕ್ಷಕಿ ಅದನ್ನು ರಾಜಕೀಯವಾಗಿ ತೆಗೆದುಕೊಂಡು ತರಗತಿಯಲ್ಲಿ ವಿದ್ಯಾರ್ಥಿಯನ್ನು ಅವಮಾನ ಮಾಡಿದ್ದಾರೆ. ಈ ಕೃತ್ಯದಿಂದ ಇತರೆ ವಿದ್ಯಾರ್ಥಿಗಳಲ್ಲಿಯೂ ಭಯದ ವಾತಾವರಣ ನಿರ್ಮಾಣವಾಗಿದೆ. ಮಂಗಳವಾರ ನಾನು ಶಾಲೆಗೆ ಹೋಗುವುದಿಲ್ಲವೆಂದು ವಿದ್ಯಾರ್ಥಿ ಹಠ ಹಿಡಿದಿದ್ದರಿಂದ ಪೋಷಕರಿಗೂ ಸಂಕಟವಾಗಿದೆ. ನಾನು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಶಾಲಾ ಆಡಳಿತದಿಂದ ಸ್ಪಷ್ಟ ಉತ್ತರ ಹಾಗೂ ಶಿಕ್ಷಕಿಯಿಂದ ಕ್ಷಮೆ ಕೇಳಬೇಕು. ಇಲ್ಲದಿದ್ದರೇ ನಾವು ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.