ಸಾರಾಂಶ
ಕಂಪ್ಲಿ: ತಾಲೂಕಿನಲ್ಲಿ ಶನಿವಾರ ಸಂಜೆ ಸುರಿದ ಬಿರುಗಾಳಿ, ಗುಡುಗು ಸಿಡಿಲು, ಆಲಿಕಲ್ಲು ಸಹಿತ ಬಾರಿ ಮಳೆಗೆ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕಚ್ಚಿದೆ ಅಲ್ಲದೇ, ಭತ್ತದ ಕಾಳು ಕೇಸರಿಗೆ ಬಿದ್ದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ರೈತರದ್ದಾಗಿದೆ.
ಸೋಮಲಾಪುರ, ಹೊನ್ನಳ್ಳಿ, ಮಾವಿನಹಳ್ಳಿ, ದೇವಲಾಪುರ ಸೇರಿದಂತೆ ಇತರೆಡೆ ಆರ್.ಎನ್. ಆರ್ ಮತ್ತು ಗಂಗಾಕಾವೇರಿ ತಳಿಯ ಭತ್ತ ಬೆಳೆಯಲಾಗಿತ್ತು. ಭಾಗಶಃ ಅರ್ಧದಷ್ಟು ಭತ್ತ ಕಟಾವ ಸಹ ಮಾಡಲಾಗಿತ್ತು. ಇನ್ನೇನು 10 ದಿನಗಳಲ್ಲಿ ಇನ್ನುಳಿದಷ್ಟು ಭತ್ತ ಕಟಾವಿಗೆ ಬರುತ್ತಿತ್ತು. ಕಟಾವಿಗೆ ಬೇಕಾಗುವ ಸಿದ್ಧತೆ ಸಹ ರೈತರು ಕೈಗೊಂಡಿದ್ದರು. ಅಷ್ಟರಲ್ಲಿ ವರುಣ ತೋರಿದ ಆರ್ಭಟಕ್ಕೆ ಕಟಾವಿಗೆ ಬಂದಿದ್ದ ಭತ್ತದ ತೆನೆಯಲ್ಲಿನ ಕಾಳುಗಳು ನೆಲಕ್ಕೆ ಬಿದ್ದಿದ್ದರಿಂದ ಅನ್ನದಾತರು ಸಂಕಷ್ಟ ಎದುರಿಸುವಂತಾಗಿದೆ.ಒಂದುವರೆ ಎಕರೆಗೆ 8 ಚೀಲ ಭತ್ತ : ಈ ಬಾರಿಯ ಭತ್ತದ ಬೆಳೆ ನಿರೀಕ್ಷೆಯಷ್ಟು ಇಳುವರಿ ನೀಡಿತ್ತು, ಸಾಲ ಮಾಡಿ ತಂದು ಭತ್ತ ಬೆಳೆದಿದ್ದಕ್ಕೂ ಸಾರ್ಥಕವಾಯಿತು ಎಂದು ನಂಬಿ, ಒಂದುವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತ ಭಾನುವಾರ ಕಟಾವು ಮಾಡಲೆಂದು ಶನಿವಾರ ಜಮೀನಿನ ಬಳಿ ಭತ್ತ ಕತ್ತರಿಸುವ ಯಂತ್ರ ನಿಲ್ಲಿಸಲಾಗಿತ್ತು. ಆದರೆ ಶನಿವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಮಳೆಯಿಂದ ನನ್ನ ಜಮೀನಿನಲ್ಲಿದ್ದ ಭತ್ತದ ತೆನೆಯ ಕಾಳು ಕೆಸರಿನಲ್ಲಿ ಬಿದ್ದಿತ್ತು. ಇದರಿಂದ 80 ಚೀಲ ದೊರೆಯಬೇಕಿದ್ದ ಭತ್ತ ಬರೀ 8 ಚೀಲ ದೊರೆತಿದೆ. ಇದರಿಂದ ಭತ್ತ ಕತ್ತರಿಸುವ ಯಂತ್ರದ ಖರ್ಚನ್ನು ಸಹ ನೀಡಲಾಗುವುದಿಲ್ಲ. ಮಳೆರಾಯನ ಅಟ್ಟಹಾಸಕ್ಕೆ ಭತ್ತದ ಕಾಳೆಲ್ಲ ಕೆಸರಿನಲ್ಲಿ ಬಿದ್ದು ಮಣ್ಣು ತಿನ್ನುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ರೈತ ಪೆದ್ದಯ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ.
250 ಎಕರೆ ಭತ್ತ ನಷ್ಟ: ಶನಿವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಮಳೆಗೆ ಸೋಮಲಾಪುರ ಬಳಿ ಬೆಳೆಯಲಾಗಿದ್ದ ಭತ್ತ ನೆಲಕ್ಕಚ್ಚಿದ್ದು, ಭತ್ತದ ತೆನೆಯ ಕಾಳು ಕೆಸರಿನಲ್ಲಿ ಬಿದ್ದಿದೆ. ಈ ಕುರಿತು ತಹಸೀಲ್ದಾರ್ ಶಿವರಾಜ್ ಶಿವಪುರ ಸೇರಿದಂತೆ ತಾಲೂಕಾಡಳಿತ ಸಿಬ್ಬಂದಿ, ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸೋಮಲಾಪುರ ಭಾಗದಲ್ಲಿ ಮಾತ್ರವೇ ಸುಮಾರು 250ಕ್ಕೂ ಹೆಚ್ಚು ಭತ್ತ ಬೆಳೆ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.ಸೋಮಲಾಪುರ ಗ್ರಾಮದಲ್ಲಿ ನನ್ನ ಸ್ವಂತ 6 ಎಕರೆ ಗುತ್ತಿಗೆ 6 ಎಕರೆ ಸೇರಿ ಒಟ್ಟಾರೆ 12 ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದೆ. ಸಸಿ, ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ, ಕೃಷಿ ಕಾರ್ಮಿಕರ ಕೂಲಿ ವೆಚ್ಚ ಸೇರಿದಂತೆ ಎಕರೆ ₹40 ಸಾವಿರದಂತೆ 12 ಎಕರೆ ಜಮೀನಿನಲ್ಲಿ ಭತ್ತ ಬೆಳೆಯಲು ₹5 ಲಕ್ಷಗಳವರೆಗೂ ಖರ್ಚು ಮಾಡಿಕೊಂಡಿರುವೆ ಶನಿವಾರ ಸುರಿದ ಆಲಿಕಲ್ಲು ಮಳೆಗೆ ಭತ್ತದ ತೆನೆಯ ಕಾಳೆಲ್ಲ ಮಣ್ಣು ಪಲಾಗಿದ್ದು. ಜೀವನೋಪಾಯಕ್ಕಾಗಿ ಸಾಲ ಮಾಡಿ ಭತ್ತ ಹಾಕಿದ್ದೆ. ಇದೀಗ ಮಳೆರಾಯನ ಕರಿ ನೆರಳಿನಿಂದ ಬೆಳೆದ ಭತ್ತವೆಲ್ಲ ಮಣ್ಣು ಪಾಲಾಗಿದ್ದು ಸಾಲ ಮುಟ್ಟಿಸಲು ದಿಕ್ಕು ತೋಚದಂತಾಗಿದೆ ಎಂದು ರೈತ ಎನ್. ಶಿವರಾಜ್ ತಿಳಿಸಿದ್ದಾರೆ.
ತಾಲೂಕಿನ ಸೋಮಲಾಪುರ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಗೆ ಭತ್ತದ ತೆನೆಯ ಕಾಳೆಲ್ಲ ನೆಲಕ್ಕೆ ಬಿದ್ದು ರೈತರಿಗೆ ನಷ್ಟವಾಗಿದ್ದು, ಎಲ್ಲೆಡೆ ರೈತರ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಸರ್ಕಾರದಿಂದ ದೊರೆಯುವ ನಷ್ಟ ಪರಿಹಾರ ರೈತರಿಗೆ ತಲುಪಿಸುವ ಕಾರ್ಯಕೈಗೊಳ್ಳಲಾಗುವುದು ಎಂದು ಕಂಪ್ಲಿ ತಹಸೀಲ್ದಾರ್ ಶಿವರಾಜ್ ಶಿವಪುರ ಹೇಳಿದರು.