ಸುಂಟಿಕೊಪ್ಪ: 70ನೇ ಕನ್ನಡ ರಾಜ್ಯೋತ್ಸವ ಆಚರಣೆ

KannadaprabhaNewsNetwork |  
Published : Nov 05, 2025, 12:45 AM IST
ರಾಜ್ಯೋತ್ಸವ  | Kannada Prabha

ಸಾರಾಂಶ

ಭಾರತಾಂಬೆಯ ಸೇವೆಯಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಕನ್ನಡ ರಾಜ್ಯೋತ್ಸವ ನಮ್ಮಗೆಲ್ಲರಿಗೂ ಪ್ರೇರಣೆ ನೀಡುವಂತಹ ಆಚರಣೆಯಾಗಬೇಕು ಎಂದು ವಿ.ಜಿ. ಲೋಕೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಭಾರತಾಂಬೆಯ ಸೇವೆಯಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಕನ್ನಡ ರಾಜ್ಯೋತ್ಸವ ನಮ್ಮಗೆಲ್ಲರಿಗೂ ಪ್ರೇರಣೆ ನೀಡುವಂತಹ ಆಚರಣೆಯಾಗಬೇಕು ಎಂದು ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಹೇಳಿದರು.

ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಆಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಭಾಷಾವರು ಪಾಂತ್ಯಗಳಾಗಿ ರಚನೆಯಾದ ಸಂದರ್ಭ ಮೈಸೂರು 1956ರಲ್ಲಿ ಅಸ್ತಿತ್ವಕ್ಕೆ ಬಂದು ಮುಂದೆ 1973 ನವೆಂಬರ್ 1 ರಂದು ಕರ್ನಾಟಕವೆಂದು ಹೆಸರಾಯಿತು. ಅಂದಿನಿಂದ ಪ್ರತಿ ವರ್ಷವೂ ನ. 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ ಕನ್ನಡ ನಾಡು ನುಡಿ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲಾರೂ ಮತ್ತೆ ಮತ್ತೆ ಕಟ್ಟಿಬದ್ಧರಾಗಬೇಕು ಎಂದು ಅವರು ಕರೆ ನೀಡಿದರು.

ಸುಂಟಿಕೊಪ್ಪ ಗ್ರೇಡ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್.ಸುನಿಲ್‌ಕುಮಾರ್ ಮಾತನಾಡಿ, ಮುಂದಿನ ವರ್ಷದಿಂದ ಗ್ರಾಮ ಪಂಚಾಯಿತಿ ಕನ್ನಡ ಸಾಹಿತ್ಯ ಪರಿಷತ್‌ನೊಂದಿಗೆ ಕೈ ಜೋಡಿಸಲಿದೆ ಎಂದು ಅವರು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸುಂಟಿಕೊಪ್ಪ ಹೋಬಳಿ ಕಸಾಪ ಕಾರ್ಯದರ್ಶಿ ಕೆ.ಎಸ್.ಅನಿಲ್‌ಕುಮಾರ್, ಕನ್ನಡ ವೃತ್ತಕ್ಕೆ 4 ದಶಕಗಳ ಇತಿಹಾಸ ಇದ್ದು ಕಳೆದ 35 ವರ್ಷಗಳಿಂದ ಕನ್ನಡ ಧ್ವಜವನ್ನು ವರ್ಷಪೂರ್ತಿ ಕನ್ನಡ ವೃತ್ತದಲ್ಲಿ ಹಾರಾಟ ಮಾಡುತ್ತಿರುವ ಏಕೈಕ ಸ್ಥಳ ಸುಂಟಿಕೊಪ್ಪವಾಗಿದ್ದು ರಾಜ್ಯದಲ್ಲಿಯೂ ಕೂಡ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು. ಸಮಾರಂಭದ ಮೊದಲಿಗೆ ಕನ್ನಡ ವೃತ್ತದಲ್ಲಿ ಧ್ವಜಾರೋಹಣವನ್ನು ಹಿರಿಯ ಪತ್ರಕರ್ತ ಮತ್ತು ಕೊಡಗು ಪತ್ರಕರ್ತರ ಸಂಘ ಕುಶಾಲನಗರ ತಾಲೂಕು ಘಟಕದ ಉಪಾಧ್ಯಕ್ಷರಾದ ಬಿ.ಸಿ.ದಿನೇಶ್ ನೆರವೇರಿಸಿದರು. ಇದೇ ಸಾಧಕರಾದ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಜೆಸಿಂತ ಜೊವಿಟಾ ವಾಸ್ ಅವರು ಅನುದಾನಿತ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಲಾಗುವ ರಾಜ್ಯ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸಾಧನೆಗಾಗಿ ಸನ್ಮಾನಿಸಲಾಯಿತು. ಅದೇ ರೀತಿ ಪತ್ರಿಕಾ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಗಾಗಿ ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಅವರನ್ನು ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ಸನ್ಮಾನಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸಬಾಸ್ಟಿನ್ ವಹಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಕಸಾಪ ಕಾರ್ಯದರ್ಶಿ ಕೆ.ಎಸ್.ಅನಿಲ್‌ಕುಮಾರ್ ಸ್ವಾಗತಿಸಿ, ನಿರೂಪಿಸಿ, ಕೊನೆಯಲ್ಲಿ ರಫೀಕ್‌ಖಾನ್ ವಂದಿಸಿದರು. ಕ.ಸಾ.ಪ. ಹಿರಿಯ ಸದಸ್ಯ ಹಾಗೂ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಯಶೋಧ, ಪೂಜಾರಿ, ಎಸ್.ಜಿ.ಶ್ರೀನಿವಾಸ್, ಸುಂಟಿಕೊಪ್ಪ ಹೋಬಳಿ ಕಸಾಪ ಕಾರ್ಯದರ್ಶಿ ಲೀಲಾವತಿ, ಖಜಾಂಜಿ ಸತೀಶ್ ಶೇಟ್, ಸದಸ್ಯರಾದ ವಹೀದ್‌ಜಾನ್, ಆಶೋಕ್ ಶೇಟ್, ಗ್ರಾ.ಪಂ.ಸದಸ್ಯರಾದ ವಸಂತಿ, ಜೀನಾಸುದ್ಧಿನ್, ರಫೀಕ್ ಖಾನ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಆಟೋಚಾಲಕರ ಸಂಘದ ಅಧ್ಯಕ್ಷ ಕೆ.ಎಚ್.ಶರೀಫ್, ಕಾರ್ಯದರ್ಶಿ ಸಚಿನ್, ಕೆ.ಎಚ್.ಶಿವಣ್ಣ, ಹಿರಿಯ ಪತ್ರಕರ್ತ ಜಿ.ಕೆ.ಬಾಲಕೃಷ್ಣ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ಶಿಕ್ಷಕ ಶಿಕ್ಷಕಿಯರು ಮಕ್ಕಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ