ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರವನ್ನು ಅಧಿಕಾರಿಗಳು ತೆಗೆಸಿದ ಮತ್ತು ಬೀದರ್ನಲ್ಲಿ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ಜನಿವಾರ ತೆಗೆಯಲು ಒಪ್ಪದ ಕಾರಣ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಿದ ಘಟನೆ ನಿಜವೇ ಆದರೆ ಅದು ಅತಿರೇಕದ ವರ್ತನೆ. ಜನಿವಾರ ತೆಗೆಯಲು ಒಪ್ಪದ ವಿದ್ಯಾರ್ಥಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಈ ವಿಚಾರವಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.ನಗರದ 29 ನೇ ವಾರ್ಡ್ ನ ಸುಣ್ಣಕಲ್ ಬೀದಿಯ ದೇವಪ್ಪ ಬಡಾವಣೆಯಲ್ಲಿ 4 ಕೋಟಿ ರು.ಗಳ ವೆಚ್ಚದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂತಹ ಪ್ರಕರಣ ಯಾವುದೇ ಕೇಂದ್ರದಲ್ಲಿ ನಡೆದರೂ ಗಂಭೀರವಾಗಿ ಪರಿಗಣಿಸುತ್ತೇವೆ. ಎಲ್ಲ ಜಾತಿ, ಧರ್ಮಗಳ ಆಚರಣೆ ಸಂಪ್ರದಾಯಕ್ಕೆ ಗೌರವ ಕೊಡಬೇಕು ಎಂದರು.
ವಿದ್ಯಾರ್ಥಿಗೆ ನ್ಯಾಯ ಒದಗಿಸಲು ಯತ್ನಘಟನೆ ಸಂಬಂಧ ಅಧಿಕಾರಿಗಳ ಬಳಿ ವರದಿ ಪಡೆದು, ಮುಂದೆ ಏನು ಮಾಡಬಹುದು ಎಂದು ಯೋಚಿಸುತ್ತೇನೆ. ಆ ರೀತಿ ಆಗಿದ್ದು ಸತ್ಯವೇ ಆದರೆ ಪರಿಶೀಲನೆ ಮಾಡುತ್ತೇನೆ. ಬೀದರ್ನಲ್ಲಿ ಸುಚಿವೃತ ಕುಲಕರ್ಣಿ ಗಣಿತ ಪರೀಕ್ಷೆ ಬರೆಯ ಬೇಕಿತ್ತು ಉಳಿದಂತೆ ವಿಜ್ಞಾನ ಪರೀಕ್ಷೆ ಬರೆದಿದ್ದಾನೆ, ಈ ಕುರಿತು ವಿದ್ಯಾರ್ಥಿಗೆ ನ್ಯಾಯ ಒದಗಿಸಲು ಕಾನೂನು ರಿತ್ಯಾ ಪ್ರಯತ್ನಿಸುತ್ತೇನೆ. ಆದರೆ ಪ್ರತಿ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶ ನಮ್ಮದಲ್ಲ ಎಂದು ತಿಳಿಸಿದರು.
ಸಮಾಜ ಸೇವೆ ಹೆಸರಲ್ಲಿ ರಾಜಕೀಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ವ್ಯಕ್ತಿಗಳು ಬೇರೆ ಏನೇನೋ ಸೇವೆಗಳನ್ನು ಮಾಡುವ ಬದಲು ರಕ್ತದಾನ ಶಿಬಿರಗಳನ್ನು ಮಾಡಿ ಪ್ರಾಣಗಳನ್ನು ಉಳಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು. ನಗರದ 29 ನೇ ವಾರ್ಡ್ ನ ಸುಣ್ಣಕಲ್ ಬೀದಿಯ ದೇವಪ್ಪ ಬಡಾವಣೆಯಲ್ಲಿ ಶುಕ್ರವಾರ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆನೆರವೇರಿಸಿ ಮಾತನಾಡಿ, ಕ್ರೀಡೆ, ದೇವಸ್ಥಾನ, ಜಾತ್ರೆ ಕಾರ್ಯಕ್ರಮವೆಂದು ದುಂದು ವೆಚ್ಚ ಮಾಡುವುದಕ್ಕಿಂತ ರಕ್ತದಾನದಂತಹ ಗುರುತರ ಸೇವೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.ಶಾಸಕ ಸುಬ್ಬಾರೆಡ್ಡಿ ರಕ್ತದಾನಬಾಗೇಪಲ್ಲಿಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಇಂದಿಗೂ ಸಾಕಷ್ಟು ಜನರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಮೊದಲು ನಾನೇ ರಕ್ತದಾನ ಮಾಡುತ್ತೇನೆ. ಇದುವರೆಗೂ ನಾನು 13 ಬಾರಿ ರಕ್ತದಾನ ಮಾಡಿದ್ದೇನೆ ಎಂದರು. ರಕ್ತದಾನ ಶಿಬಿರಗಳನ್ನು ಮಾಡಿ ದಾಖಲೆ ರಕ್ತ ಸಂಗ್ರಹ ಮಾಡಿದ ಜಿಲ್ಲಾಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಸಹೋದರ ಡಾ.ಬಾಲಾಜಿ ಹಾಗೂ ಕೆ.ವಿ.ಟ್ರಸ್ಟ್ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರೆಡ್ ಕ್ರಾಸ್ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ನಗರಸಭೆ ಸದಸ್ಯ ಕಣಿತಹಳ್ಳಿ ವೆಂಕಟೇಶ್, ಮತ್ತಿತರರು ಇದ್ದರು.