ಗ್ರಾಮೀಣ ಪ್ರದೇಶದಲ್ಲಿ ಕಲಿತು ಇಂದು ಸನ್ಮಾನ ಸ್ವೀಕರಿಸಲು ಆಗಮಿಸಿರುವ ನಿಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ, ಕಲಿಯಬೇಕು ಎಂಬ ತುಡಿತವಿದೆ. ಆದ್ದರಿಂದ ನಿಮ್ಮ ಜ್ಞಾನದ ಹಸಿವನ್ನು ಹೆಚ್ಚಿಸಿಕೊಂಡು ಇನ್ನೂ ಉನ್ನತ ಸ್ಥಾನ ಪಡೆಯುವ ಮನಸ್ಥಿತಿಯಲ್ಲಿ ಕಲಿಕೆಯನ್ನು ಮುಂದುವರಿಸಿ ಮತ್ತು ನಿಮ್ಮ ಮೇಲೆ ಪೋಷಕರು ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ದಕ್ಕೆಯಾಗದಂತೆ ಜಾಗೃತರಾಗಿರಿ ಎಂದು ನಿ. ಪ್ರಾಂಶುಪಾಲ ಎಚ್. ಎಸ್. ಪುಟ್ಟಸೋಮಪ್ಪ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಗ್ರಾಮೀಣ ಪ್ರದೇಶದಲ್ಲಿ ಕಲಿತು ಇಂದು ಸನ್ಮಾನ ಸ್ವೀಕರಿಸಲು ಆಗಮಿಸಿರುವ ನಿಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ, ಕಲಿಯಬೇಕು ಎಂಬ ತುಡಿತವಿದೆ. ಆದ್ದರಿಂದ ನಿಮ್ಮ ಜ್ಞಾನದ ಹಸಿವನ್ನು ಹೆಚ್ಚಿಸಿಕೊಂಡು ಇನ್ನೂ ಉನ್ನತ ಸ್ಥಾನ ಪಡೆಯುವ ಮನಸ್ಥಿತಿಯಲ್ಲಿ ಕಲಿಕೆಯನ್ನು ಮುಂದುವರಿಸಿ ಮತ್ತು ನಿಮ್ಮ ಮೇಲೆ ಪೋಷಕರು ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ದಕ್ಕೆಯಾಗದಂತೆ ಜಾಗೃತರಾಗಿರಿ ಎಂದು ನಿ. ಪ್ರಾಂಶುಪಾಲ ಎಚ್. ಎಸ್. ಪುಟ್ಟಸೋಮಪ್ಪ ಸಲಹೆ ನೀಡಿದರು.ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಸೀತಾಲಕ್ಷ್ಮೀ ರಂಗಸ್ವಾಮಿಶೆಟ್ಟಿ ಚಾರಿಟಬಲ್ ಟ್ರಸ್ಟ್ ಆಯೋಜನೆ ಮಾಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಪ್ರತಿಭೆಗಳಲ್ಲಿ ವಿಶೇಷವಾದ ಆತ್ಮಬಲವಿರುತ್ತದೆ ಹಾಗೂ ಸಾಮಾಜ್ಯ ಜ್ಞನವೂ ಇರುತ್ತದೆ. ಆದ್ದರಿಂದ ಕಲಿಕೆಯ ಸಮಯದಲ್ಲಿ ವಿಷಯವನ್ನು ಗ್ರಹಿಸುವ ಮತ್ತು ಅರ್ಥೈಸಿಕೊಳ್ಳುವ ಶಕ್ತಿ ಇರುತ್ತದೆ. ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ಅನುಮಾನ ಇದ್ದರೂ ಶಿಕ್ಷಕರಲ್ಲಿ ಕೇಳಿ ಪರಿಹಾರ ಕಂಡುಕೊಳ್ಳುವ ಮನಸ್ಥಿತಿ ರೂಪಿಸಿಕೊಳ್ಳಿ, ಇದು ಮುಂದಿನ ದಿನಗಳಲ್ಲಿ ನಿಮ್ಮ ಉನ್ನತ್ತ ವ್ಯಾಸಂಗದಲ್ಲಿ ಉಪಯೋಗವಾಗಲಿದೆ ಎಂದು ಸಲಹೆ ನೀಡಿ, ಹಲವಾರು ವಿಷಯಗಳ ಕುರಿತಂತೆ ಸಲಹೆಗಳು, ಸೂಚನೆಗಳು ಹಾಗೂ ಮಾರ್ಗದರ್ಶನ ನೀಡಿದರು. ಬಿಇಒ ಕಚೇರಿಯ ಅಧಿಕಾರಿ ವಸಂತ ಕುಮಾರ್, ಪತ್ರಕರ್ತ ಎಚ್. ವಿ. ಸುರೇಶ್ ಕುಮಾರ್, ಟ್ರಸ್ಟ್ ಅಧ್ಯಕ್ಷ ಎನ್. ಆರ್.ವಿಜಯಕುಮಾರ್ ಇತರರು ಮಾತನಾಡಿದರು. ಟ್ರಸ್ಟಿನ ಸದಸ್ಯ ಬಾಲಾಜಿ ಪ್ರಾಸ್ತವಿಕ ನುಡಿಗಳನ್ನಾಡುತ್ತ ಕರ್ನಾಟಕ ರಾಜ್ಯ ನೀರಾವರಿ ಇಲಾಖೆಯ ನಿ. ಕಾರ್ಯದರ್ಶಿ ದಿ. ಎನ್. ಆರ್. ವೆಂಕಟೇಶ್ ಪ್ರಸಾದ್ ಅವರು ಅಜ್ಜಿ- ತಾತ ಹೆಸರಿನಲ್ಲಿ ೨೦೦೭ ಪ್ರಾರಂಭಿಸಿದ ಟ್ರಸ್ಟ್, ಶ್ರೀಯುತರ ಮಾರ್ಗದರ್ಶನದಲ್ಲಿ ೪ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಿಂದ ಪ್ರಾರಂಭವಾಗಿತ್ತು. ಇಂದು ೬೩ ವಿದ್ಯಾರ್ಥಿಗಳ ತನಕ ಬಂದು ತಲುಪಿದೆ. ೬೩ ಪ್ರೌಢಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತಿದ್ದು, ಪ್ರತಿವರ್ಷ ನಾಲ್ಕು ವಿದ್ಯಾರ್ಥಿಗಳನ್ನು ಹೆಚ್ಚಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಇತ್ತೀಚೆಗೆ ಮೃತಪಟ್ಟ ಟ್ರಸ್ಟಿನ ಕಾರ್ಯದರ್ಶಿಯಾಗಿದ್ದ ಎನ್. ಆರ್. ಆನಂದ್ ಕುಮಾರ್ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿದ್ಯಾ ರವಿ ಪ್ರಾರ್ಥಿಸಿದರು, ಅಮೃತ ಎಂ. ಸ್ವಾಗತಿಸಿದರು ಹಾಗೂ ಅನುಪಮಾ ನಿಲೇಶ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀ ವಾಸವಾಂಬ ಕೋ. ಬ್ಯಾಂಕ್ ಅಧ್ಯಕ್ಷ ಎಚ್.ಗೋಕುಲ್, ಸೀತಾಲಕ್ಷ್ಮೀ ರಂಗಸ್ವಾಮಿಶೆಟ್ಟಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಎನ್.ಆರ್. ಕರುಣಾಕರ್ ಕಾರ್ಯದರ್ಶಿ ಎನ್. ಜಿ. ಮುಕುಂದ, ಸದಸ್ಯರಾದ ಎನ್. ಆರ್. ಭಗವಾನ್ ದಾಸ್, ಎನ್. ಜಿ. ಮೋಹನ್, ಎನ್. ಎ. ರಜತ್ ನಾಗಯ್ಯ, ಎಂ.ಅಮರ್‌ನಾಗ್, ಎಂ. ಧೀರಜ್ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.