ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಬೆಳಗ್ಗೆ ಬೆಟ್ಟದ ಮೇಲಿರುವ ಮೂಲ ವಿಗ್ರಹಕ್ಕೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ ಮಾಡಲಾಯಿತು. ಇದಾದ ಬಳಿಕ ವಿವಿಧ ಪುಷ್ಪ ಹಾಗೂ ಒಡವೆಗಳಿಂದ ಅಲಂಕಾರ ನೆರವೇರಿಸಿ ಪೂಜಾ ಕೈಂಕರ್ಯ ನೆರವೇರಿದವು. ನಂತರ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕರಿಸಿದ್ದು, ಅಡ್ಡಪಲ್ಲಕ್ಕಿಯಲ್ಲಿ ಮಂಗಳವಾದ್ಯದೊಂದಿಗೆ ಬೆಟ್ಟದ ಮೇಲಿಂದ ಉತ್ಸವದಲ್ಲಿ ಕರೆತಂದು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಶುಭ ಮೇಷ ಲಗ್ನ ಮುಹೂರ್ತದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಬ್ರಹ್ಮರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ತಕ್ಷಣ ಸಹಸ್ರಾರು ಭಕ್ತರು ಗೋವಿಂದ ನಾಮಸ್ಮರಣೆಯೊಂದಿಗೆ ರಥವನ್ನು ಎಳೆದರು. ನೆರೆದಿದ್ದ ಭಕ್ತರು ಗೋವಿಂದ ಗೋವಿಂದ ಎಂಬ ಸ್ಮರಣೆಯೊಂದಿಗೆ ಭಕ್ತಿಬಾವದಲ್ಲಿ ತೇಲಿದರು. ರಥ ಸಾಗಿದಂತೆಲ್ಲಾ ಭಕ್ತರು ಬಾಳೆಹಣ್ಣು-ದವನ, ಹೂವು-ತುಳಸಿಪತ್ರೆಯನ್ನು ರಥಕ್ಕೆ ಎಸೆದು, ಕರ್ಪೂರ ಬೆಳಗಿಸಿ ಹರಕೆ ಸಲ್ಲಿಸಿ ಪುನೀತರಾದರು.
ನಂತರ ಮಾತನಾಡಿದ ಶಾಸಕ ಸಿ. ಎನ್. ಬಾಲಕೃಷ್ಣ, ದೇಶಿಯ ತಳಿಗಳ ಸಂತಾನೋತ್ಪತ್ತಿಯೊಂದಿಗೆ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಹಳ್ಳಿಕಾರ್ ತಳಿಯ ಎತ್ತುಗಳಿಗೆ ಒಳ್ಳೆಯ ಬೇಡಿಕೆ ಇದೆ. ಮೊದಲೆಲ್ಲ ಕೃಷಿ ಚಟುವಟಿಕೆಯಲ್ಲಿ ಜಾನುವಾರುಗಳ ಬಳಕೆ ಹೆಚ್ಚಾಗಿತ್ತು. ಆಧುನಿಕ ಯಂತ್ರೋಪಕರಣಗಳು ಬಳಕೆಗೆ ಬಂದ ಮೇಲೆ ನಾಟಿ ಅಥವಾ ದೇಶಿಯ ತಳಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಬೂಕನಬೆಟ್ಟದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈಗಾಗಲೇ ಬೆಟ್ಟದ ಮೇಲಿನ ಕಾಂಪೌಂಡ್ ನಿರ್ಮಾಣ, ಬೆಟ್ಟದ ರಸ್ತೆಗೆ ಕಾಂಕ್ರೀಟ್ ವ್ಯವಸ್ಥೆ, ಹಿರೀಸಾವೆ, ಸೋರೆಕಾಯಿಪುರ, ದಿಡ್ಡಮ್ಮನ ಗುಡಿ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಿ ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ-ಜಾನುವಾರುಗಳು ಆಗಮಿಸುವುದರಿಂದ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಪೂರೈಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಶೆಟ್ಟಿಹಳ್ಳಿ ಡೇರಿಯಿಂದ ೨೫ ಸಾವಿರ ಲೀಟರ್ ಸಾಮರ್ಥ್ಯವಿರುವ ಟ್ಯಾಂಕರ್ ಮೂಲಕ ಪ್ರತಿದಿನ ನೀರಿನ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು. ಬೂಕನಬೆಟ್ಟದ ತಪ್ಪಲಲ್ಲಿ ಪೂರ್ವಕಾಲದಿಂದ ಸಂತೆ ನಡೆಯುತ್ತಿದ್ದು ಇತ್ತೀಚಿನ ವರ್ಷಗಳಿಂದ ನಿಂತುಹೋಗಿತ್ತು. ಕಳೆದ ವರ್ಷದಿಂದ ಹೊಸದಾಗಿ ಸಂತೆ ಪ್ರಾರಂಭಗೊಳಿಸಲಾಗಿದೆ. ಎರಡು ಪ್ರಹಂಗಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಆಯ್ಕೆ ಮಾಡಿರುವ ೧೮ ಜೊತೆ ರಾಸುಗಳಿಗೆ ಬಹುಮಾನವಾಗಿ ೧.೨ ಗ್ರಾಂ ಚಿನ್ನ ಹಾಗೂ ೫ ಸಾವಿರ ರು. ನಗದನ್ನು ಶಾಸಕ ಸಿ.ಎನ್. ಬಾಲಕೃಷ್ಣ ಅವರು ವಿತರಿಸಿದರು. ಗ್ರಾಮೀಣ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಜೊತೆಗೆ ೫ ಜೋಡಿ ಎತ್ತುಗಳಿಗೆ ವಿಧಾನಪರಿಷತ್ ಮಾಜಿ ಸದಸ್ಯ ಎಂ. ಎ ಗೋಪಾಲಸ್ವಾಮಿ ಅವರ ವತಿಯಿಂದ ತಲಾ ೩ ಸಾವಿರ ರು. ನಗದು ನೀಡಲಾಯಿತು.
ತಹಸೀಲ್ದಾರ್ ಶಂಕರಪ್ಪ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್. ಜಿ. ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಿ.ಎನ್. ಮಂಜುನಾಥ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಂ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಸಿ.ದೊರೆಸ್ವಾಮಿ, ಉದ್ಯಮಿ ಅಣತಿ ಯೋಗೇಶ್, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್, ಅಧಿಕಾರಿ ಜ್ಯೋತಿ, ಡಿವೈಎಸ್ಪಿ ಕುಮಾರ್, ಪಿಎಸ್‌ಐ ಮಂಜುನಾಥ್, ಆರ್‌ಐ ಯೋಗೇಶ್, ದೇವಸ್ಥಾನದ ಪಾರುಪತ್ತೆದಾರ ರಂಗರಾಜ್ ಹಾಗೂ ಇತರರು ಇದ್ದರು.