ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತ ರಾಜ್ಯವನ್ನು ಹಿಂದೆಂದೂ ಕಾಣದ ದುಸ್ಥಿತಿಗೆ ದೂಡಿದೆ. ಇದು ಆಡಳಿತ ನಡೆಸುವ ಸರ್ಕಾರವಲ್ಲ, ಕೇವಲ ವಸೂಲಿ ಸರ್ಕಾರವಾಗಿದೆ. ರಾಜ್ಯದ ಸಮಗ್ರ ದುಸ್ಥಿತಿಗಾಗಿ ಹೊಸಪೇಟೆಯಲ್ಲಿ ಸಾಧನೆ ಸಮಾವೇಶ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಆಡಳಿತ ಕನ್ನಡಿಗರ ಬದುಕಿಗೆ ಶಾಪವಾಗಿದೆ. ಜನನ ಪ್ರಮಾಣಪತ್ರದಿಂದ ಮರಣ ಪ್ರಮಾಣಪತ್ರದವರೆಗೂ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.
ಜನಾದೇಶಕ್ಕೆ ಮಾಡಿದ ದ್ರೋಹನೆಮ್ಮದಿಯಿಂದ ಬದುಕಲು ಅಥವಾ ಸಾಯಲು ಸಹ ಬಿಡದ ಕ್ರೂರ ಭ್ರಷ್ಟತೆ ರಾಜ್ಯವನ್ನು ಆವರಿಸಿದೆ. ರಾಜ್ಯ ಇಂದು ಆರ್ಥಿಕ ದಿವಾಳಿ, ಶೂನ್ಯ ಅಭಿವೃದ್ಧಿ, ಕುಸಿದ ಕಾನೂನು ಸುವ್ಯವಸ್ಥೆ, ಸಾಮಾಜಿಕ ನ್ಯಾಯದ ಕಗ್ಗೋಲೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ನರಳುತ್ತಿದೆ. ಇದು ಜನಾದೇಶಕ್ಕೆ ಮಾಡಿದ ದ್ರೋಹ ಮತ್ತು ರಾಜ್ಯಕ್ಕೆ ತಂದ ಅಪಚಾರ ವಾಗಿದೆ ಎಂದರು. ಕಾಂಗ್ರೆಸ್ ಸರ್ಕಾರ ಎಂದರೆ ಭ್ರಷ್ಟಾಚಾರದ ಕೂಪ. ಇದು ಸ್ಪಷ್ಟವಾಗಿ ‘ಕಮಿಷನ್ ಸರ್ಕಾರ’. 60 ಪರ್ಸೆಂಟ್ ಸರ್ಕಾರ. ಪ್ರತಿಯೊಂದು ಯೋಜನೆಯಲ್ಲೂ, ಪ್ರತಿ ಟೆಂಡರ್‌ನಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ. ಸಿ.ಎಂ.ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯವನ್ನು ಕಾಂಗ್ರೆಸ್ ಪಕ್ಷದ "ಎಟಿಎಂ " ಆಗಿ ಪರಿವರ್ತಿಸಿದ್ದಾರೆ. ಕರ್ನಾಟಕದಲ್ಲಿ ಲೂಟಿ ಮಾಡಿದ ಕೋಟ್ಯಂತರ ಹಣವನ್ನು ಪಕ್ಷದ ಹೈಕಮಾಂಡ್‌ಗೆ ಮತ್ತು ಇತರ ರಾಜ್ಯಗಳ ಚುನಾವಣೆಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾರೆಂದರು.
ಮುಡಾ ನಿವೇಶನ ಹಗರಣ ಕಾಂಗ್ರೆಸ್ ನಾಯಕರೇ ಭ್ರಷ್ಟಾಚಾರದ ಕಿಂಗ್ ಪಿನ್‌ಗಳು ವಾಲ್ಮೀಕಿ ನಿಗಮದ 187 ಕೋಟಿ ರು.ಗಳನ್ನು ಕಬಳಿಸಿ ಪರಿಶಿಷ್ಟ ಪಂಗಡ ಸಮುಧಾಯಕ್ಕೆ ಮಾಡಿದೆ. ಸ್ಟಾರ್ಟ್ ಮೀಟರ್ ಹೆಸರಿನಲ್ಲಿ 15.568 ಕೋಟಿ ಹಗರಣದ ಶಂಕೆ ಇದೆ. ಇದರಲ್ಲಿ ಸಚಿವ ಜಾರ್ಜ್ ಪಾತ್ರ ಪ್ರಮುಖವಾಗಿದೆ. ರಾಜ್ಯದಲ್ಲಿನ ಗಂಭೀರ ಪ್ರಕರಣಗಳ ತನಿಖೆಗೆ ನೀಡಿದ್ದ ಮುಕ್ತ ಸಮ್ಮತಿಯನ್ನು ಸರ್ಕಾರ ಹಿಂಪಡೆದಿದೆ. ಇದು ಭ್ರಷ್ಟರನ್ನು ರಕ್ಷಿಸಲು ಮತ್ತು ನಡೆದ ಹಗರಣಗಳನ್ನು ಮುಚ್ಚಿಹಾಕಲು ನಡೆಸುತ್ತಿರುವ ವ್ಯವಸ್ಥಿತ ಹುನ್ನಾರವಾಗಿದೆ. ಜೊತೆಗೆ ಮುಸ್ಲಿಂ ತುಷ್ಟಿಕರಣ ಮಾಡುತ್ತಿದೆ ಎಂದರು.ಈ ಸರ್ಕಾರ ಸಂವಿಧಾನದ ಆಶಯಗಳಿಗೆ ದ್ರೋಹ ಬಗೆಯುತ್ತಿದೆ. ಉಪಮುಖ್ಯಮಂತ್ರಿಗಳೇ ಬಹಿರಂಗವಾಗಿ ಸಂವಿಧಾನ ಬದಲಾಗಲಿದೆ ಎಂದು ಹೇಳುವ ಮೂಲಕ ಅಲ್ಪಸಂಖ್ಯಾತರ ಓಲೈಕೆಗಾಗಿ ಸಂವಿಧಾನವನ್ನೇ ಅಪಮಾನಿಸಿದ್ದಾರೆ. ಪಹಲ್ಗಾಮ್ ದಾಳಿಯಂತಹ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಸಚಿವರು ಅಸಂವೇದನಾಶೀಲ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅರಾಜಕತೆಶಾಸಕರು ಸೈನಿಕರಿಗೆ ಅಪಮಾನ ಮಾಡುವ ಮೂಲಕ ದೇಶದ್ರೋಹದ ಪರಮಾವಧಿ ತಲುಪಿದ್ದಾರೆ. ಪಾಕಿಸ್ತಾನದಲ್ಲಿ ಸಿದ್ದರಾಮಯ್ಯ ''''ವಝೀರ್-ವಿ-ಆಲ'''' ಎಂದೇ ಫೇಮಸ್ ಆಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ರಾಜ್ಯವು ಅರಾಜಕತೆಯ ಕೂಪವಾಗಿ ಮಾರ್ಪಟ್ಟಿದೆ. ಅಭದ್ರತೆಯಲ್ಲಿ ಜನಸಾಮಾನ್ಯರ ನಿತ್ಯ ಬದುಕು ಸಾಗಿಸುವಂತಾಗಿದೆ ಎಂದರು.
ಒಂದೇ ಒಂದು ಉತ್ತಮ ರಸ್ತೆ, ಶಾಲೆ, ಆಸ್ಪತ್ರೆ, ಸರ್ಕಾರಿಕಟ್ಟಡ, ನೀರಾವರಿ ಯೋಜನೆ ಉದ್ಘಾಟನೆಯಾಗಿಲ್ಲ. ಹೊಸ ಕಾರ್ಯಕ್ರಮಗಳಿಗೂ ಶಿಲಾನ್ಯಾಸ ಮಾಡಿಲ್ಲ. ಸಂಬಳಕೊಡಲು ಹಣವಿಲ್ಲ. ಶಾಸಕರುಗಳಿಗೆ ಅನುದಾನ ನೀಡಿಲ್ಲ. ಇದು ಸಾಧನೆಯೇ, ಇದು ವಿಕಾಸವೇ. ಅವಕಾಶ ಸಿಕ್ಕ ಎಲ್ಲಾ ಕಡೆ ಅನುದಾನಕ್ಕೆ ಕತ್ತರಿಹಾಕಲಾಗಿದೆ. ಹಾಗೆಯೇ ಅಗತ್ಯ ನಿತ್ಯಾವಶ್ಯಕ ವಸ್ತುಗಳ ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿರುವುದು ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದರು.ಸುದ್ದಿಗೊಷ್ಟಿಯಲ್ಲಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಬಿ.ಮುರಳಿ, ಹೆಚ್.ಎಸ್.ಮುರಳಿಧರ್, ಜಿಲ್ಲಾ ಕಾರ್ಯದರ್ಶಿ ಆರ್.ಹೆಚ್.ಎನ್. ಅಶೋಕ್, ಸಹ ವಕ್ತಾರ ದೇವಸ್ಥಾನದ ಹೊಸಹಳ್ಳಿ ರಾಮಣ್ಣ, ವಕ್ತಾರ ಮಧುಚಂದ್ರ ಇದ್ದರು.