ಕೈ ಆಡಳಿತದಲ್ಲಿ ರಾಜ್ಯದ ಪ್ರಗತಿ ಚಕ್ರ ನಿಂತಿದೆ

KannadaprabhaNewsNetwork |  
Published : Jun 05, 2025, 01:06 AM IST
ಸಿಕೆಬಿ- 1 ಸುದ್ದಿಗೋಷ್ಟಿಯಲ್ಲಿ ಭಾಸ್ಕರ್ ರಾವ್ ಮಾತನಾಡಿದರು | Kannada Prabha

ಸಾರಾಂಶ

ಕಾನೂನು ರಕ್ಷಿಸಬೇಕಾದ ಕಾಂಗ್ರೆಸ್ ಸರ್ಕಾರವೇ, ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಓಲೈಸುತ್ತಿದೆ. ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಗಳ ಮೇಲಿನ ಕೇಸುಗಳನ್ನು ವಾಪಸ್ ಪಡೆದಿರುವುದು, ಹಾಗೂ ಡಿ.ಜಿ. ಹಳ್ಳಿ-ಕೆ.ಜಿ. ಹಳ್ಳಿ ಗಲಭೆಯಲ್ಲಿ ಗಲಭೆಕೋರರ ತುಷ್ಟಿಕರಣ ಮಾಡಿದ್ದೇ ಕಾಂಗ್ರೆಸ್ಸಿನ ಅಸಲಿ ಮುಖವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಾಂಗ್ರೆಸ್‌ ಆಡಳಿತದಲ್ಲಿ ಕರ್ನಾಟಕದ ಪ್ರಗತಿಯ ಚಕ್ರ ನಿಂತಿದೆ. ಬೆಲೆ ಏರಿಕೆಯು ಗಗನಕ್ಕೇರಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಈ ಸರ್ಕಾರ ಕೇವಲ ಪೊಳ್ಳು ಭಾಷಣ ಮತ್ತು ಆರೋಪ-ಪ್ರತ್ಯಾರೋಪಗಳಲ್ಲಿ ಕಾಲ ಕಳೆಯುತ್ತಿದೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಭಾಸ್ಕರ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿಯನ್ನು ಮರೆತು, ಕೇವಲ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ವರ್ತನೆಯೇ ಅದರ ನಿಜವಾದ ಜನವಿರೋಧಿ ಮುಖವನ್ನು ಬಯಲು ಮಾಡಿದೆ ಎಂದರು.

ಜಿಲ್ಲೆಯ ಅಭಿವೃದ್ಧಿ ಕಡೆಗಣನೆ

ಪಂಚ ಗ್ಯಾರಂಟಿಗಳನ್ನು ತೋರಿಸಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜಧಾನಿಗೆ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಒಂದು ಮುನ್ನೋಟವಿಟ್ಟು ಕೊಂಡು ಬೇರೆ ಬೇರೆ ರಾಜ್ಯಗಳ ರಾಜಧಾನಿಗಳ ಅಕ್ಕಪಕ್ಕದ ಜಿಲ್ಲೆಗಳನ್ನು ಆಭಿವೃದ್ದಿ ನಾಡಿದಂತೆ ಕೈಗಾರಿಕೆ, ಟೌನ್ ಶಿಫ್, ಸ್ಯಾಟಲೈಟ್ ಸಿಟಿಯಂತೆ ಅಭಿವೃದ್ದಿ ಪಡಿಸಬಹುದಿತ್ತು ಎಂದರು.

ಸ್ಥಳೀಯ ರೈತರಿಗೆ ಬೆಳೆ ಬೆಳೆಯಲು ನೀರಾವರಿ ಯೋಜನೆಗಳು. ನಿರುದ್ಯೋಗಿಗಳಿಗೆ ಉದ್ಯೋಗ, ರಸ್ತೆಗಳ ಅಭಿವೃದ್ದಿ ಮಾಡಬಹುದಿತ್ತು. ಆದರೆ ಪಂಚ ಗ್ಯಾರಂಟಿಗಳು ಸಮರ್ಪಕವಾಗಿ ಅರ್ಹರಿಗೆ ತಲುಪುತ್ತದೆಯೋ ಇಲ್ಲವೂ ಎಂಬುದನ್ನು ಪರಿಶೀಲಿಸುತ್ತಿಲ್ಲ. ಹೋಗಲಿ ಒಂದು ಕಿಲೋ ಮೀಟರ್ ರಸ್ತೆಯನ್ನಾದರೂ ಹಾಕಿದೆ ಎಂದರೆ ಅದೂ ಇಲ್ಲಾ. ಅಭಿವೃದ್ದಿಯಂತೂ ಶೂನ್ಯ ಎಂದು ಟೀಕಿಸಿದರು.

ಸರ್ಕಾರದ ನಿಜವಾದ ಬಣ್ಣ

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ನಂತರ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್, ನಾಸೀರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದನ್ನು ಸಮರ್ಥಿಸಿದ ಕಾಂಗ್ರೆಸ್ ಸರ್ಕಾರದ ನಿಜವಾದ ಬಣ್ಣವನ್ನು ತೋರಿಸುತ್ತದೆ. ಇಂತಹ ಘಟನೆಗಳು ಮತ್ತು ಅವುಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನಗಳು ಸಾರ್ವಜನಿಕರಲ್ಲಿ ಆತಂಕ ಮತ್ತು ಅನುಮಾನಗಳನ್ನು ಮೂಡಿಸುತ್ತವೆ ಎಂದರು.

ಕಾನೂನು ರಕ್ಷಿಸಬೇಕಾದ ಕಾಂಗ್ರೆಸ್ ಸರ್ಕಾರವೇ, ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಓಲೈಸುತ್ತಿದೆ. ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಗಳ ಮೇಲಿನ ಕೇಸುಗಳನ್ನು ವಾಪಸ್ ಪಡೆದಿರುವುದು, ಹಾಗೂ ಡಿ.ಜಿ. ಹಳ್ಳಿ-ಕೆ.ಜಿ. ಹಳ್ಳಿ ಗಲಭೆಯಲ್ಲಿ ಗಲಭೆಕೋರರ ತುಷ್ಟಿಕರಣ ಮಾಡಿದ್ದೇ ಕಾಂಗ್ರೆಸ್ಸಿನ ಅಸಲಿ ಮುಖವಾಗಿದೆ. ಕರ್ನಾಟಕದಲ್ಲಿ ಪೊಲೀಸ್ ಠಾಣೆಗಳು ಇಂದು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ. ಸರ್ಕಾರದ ವಿರುದ್ಧ ದನಿ ಎತ್ತುವವರ ಮೇಲೆ ಎಫ್‌ಐಆರ್‌ ಅಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದು ಆರೋಪಿಸಿದರು.

ಹದಗೆಟ್ಟ ಕಾನೂನು ಸುವ್ಯವಸ್ಥೆ

ಕಲಬುರಗಿಯಲ್ಲಿ ವಾಕಿಸ್ತಾನ ಧ್ವಜ ತುಳಿದ ಹಿಂದೂ ಕಾರ್ಯಕರ್ತರ ಮೇಲೆ ಸರ್ಕಾರದ ಸೂಚನೆಯಂತೆ ಪ್ರಕರಣ ದಾಖಲಿಸಿರುವ ರಾಜ್ಯ ಪೊಲೀಸ್ ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದು, ಜನತೆ ನಿತ್ಯ ಭಯದಲ್ಲಿ ಬದುಕುತ್ತಿದ್ದರೆ, ನನಗೇನೂ ಮಾಹಿತಿ ಇಲ್ಲ, ಅವರಾಧ ನಡೆದರೆ ನನಗೇನೂ ಗೊತ್ತಿಲ್ಲ ಎಂದು ಜಾರಿಕೊಳ್ಳುತ್ತಾರೆ ನಮ್ಮ ಗೃಹ ಸಚಿವರು. ಅತ್ಯಾಚಾರ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ದೊಡ್ಡ ನಗರಗಳಲ್ಲಿ ಇದೆಲ್ಲಾ ಸಾಮಾನ್ಯ ಎನ್ನುವ ಇಂತಹ ಬೇಜವಾಬ್ದಾರಿ ಮಂತ್ರಿಗಳಿಂದ ರಾಜ್ಯಕ್ಕೆ ರಕ್ಷಣೆ ಸಿಗುತ್ತದೆಂಬ ಯಾವ ಭರವಸೆಯೂ ಉಳಿದಿಲ್ಲ ಎಂದರು. ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ್, ಕೆ.ಬಿ.ಮುರಳಿ, ಮಧುಸೂಧನ ನಾರಾಯಣ, ಮುಖಂಡರಾದ ಎ.ವಿ.ಬೈರೆಗೌಡ, ಅಶೋಕ್ ಕುಮಾರ್, ಮಧುಚಂದ್ರ, ಶ್ರೀನಾಥ್, ಎಬಿಕೆ ಬಾಲು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ