ಕನ್ನಡಪ್ರಭ ವಾರ್ತೆ ಆಲೂರು
ಕ್ಷಯ ರೋಗಿಗಳು ತಪ್ಪದೆ ಆರು ತಿಂಗಳು ಚಿಕಿತ್ಸೆ ಪಡೆಯಲೇಬೇಕು. ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿದರೆ ರೋಗ ಮುಕ್ತರಾಗಿ ಬದುಕಲು ಅವಕಾಶವಿದೆ. ಕ್ಷಯರೋಗ ಮುಕ್ತ ದೇಶವನ್ನು ಮಾಡಲು ಪಣ ತೊಡೋಣ ಎಂದು ಶಾಸಕ ಸಿಮೆಂಟ್ ಮಂಜು ಕರೆ ನೀಡಿದರು.ಪಟ್ಟಣದ ತಾಲೂಕು ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಐಎಂಎ ಮಹಿಳಾ ವೈದ್ಯರ ವಿಭಾಗ, ಐಎಂಎ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೋಂಕಿನಿಂದ ಹರಡುವ ಕ್ಷಯ ರೋಗ ಗುಣಪಡಿಸುವಂತಹ ರೋಗ. ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಅಗತ್ಯವಿದೆ. ಹಾಸನ ಐಎಂಎ ಮಹಿಳಾ ಘಟಕದ ವೈದ್ಯರು ಆಹಾರ ಕಿಟ್‌ಗಳನ್ನು ಉಚಿತವಾಗಿ ಕೊಡಲು ಮುಂದೆ ಬಂದು ಸಹಕರಿಸುವುದಕ್ಕೆ ಧನ್ಯವಾದಗಳು. ರೋಗಿಗಳು ಎಚ್ಚರಿಕೆಯಿಂದ ರೋಗ ಹರಡದಂತೆ ಗಮನ ಹರಿಸಬೇಕು ಎಂದರು. ತಹಸೀಲ್ದಾರ್ ಮಲ್ಲಿಕಾರ್ಜುನರವರು, ರೋಗ ಹತೋಟಿಗೆ ತರಲು ವೈದ್ಯರೊಡನೆ ವೈಯಕ್ತಿಕವಾಗಿ ಸಹಕಾರ ನೀಡುತ್ತೇನೆ. ದೇಹದಲ್ಲಿ ಸದಾ ರೋಗ ನಿರೋಧಕ ಶಕ್ತಿ ಇರುವಂತೆ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು ಎಂದರು.ತಾಲೂಕು ಆಡಳಿತ ವೈದ್ಯಾಧಿಕಾರಿ ಹಾಗೂ ಜಿಲ್ಲಾ ಐಎಂಎ ಮಹಿಳಾ ವೈದ್ಯರ ವಿಭಾಗ ಅಧ್ಯಕ್ಷರಾದ ಡಾ. ನಿಸಾರ್ ಫಾತಿಮ, ೨೦೩೦ರ ವೇಳೆಗೆ ಕ್ಷಯ ಮುಕ್ತ ದೇಶ ಮಾಡಲು ಪಣ ತೊಡೋಣ. ಹಾಸನ ಐಎಂಎ ಮಹಿಳಾ ಘಟಕ, ಹಲವು ವೈದ್ಯರು ಮತ್ತು ಕೆಲ ಸಮಾಜ ಸೇವಕರ ಸಹಕಾರದಿಂದ ಸುಮಾರು ೭೦ ಸಾವಿರ ಬೆಲೆ ಬಾಳುವ ಪೌಷ್ಟಿಕಾಂಶವುಳ್ಳ ಆಹಾರ ಕಿಟ್‌ನ್ನು ಆರು ತಿಂಗಳಿಗಾಗುವಂತೆ ರೋಗಿಗಳಿಗೆ ನೀಡುತ್ತಿದ್ದೇವೆ. ರೋಗಿಗಳು ಸಂಪೂರ್ಣ ಕಾಲಾವಧಿ ಔಷಧಿಯನ್ನು ತಪ್ಪದೇ ಪಡೆಯಬೇಕು. ಮಧ್ಯದಲ್ಲಿ ಬಿಟ್ಟರೆ ಪುನಃ ರೋಗ ಉಲ್ಪಣವಾಗುವ ಸಾಧ್ಯತೆ ಇದೆ ಎಂದರು.ಜಿಲ್ಲಾ ಐಎಂಎ ಅಧ್ಯಕ್ಷ ಶ್ರೀರಂಗ ಡಾಂಗೆ ಅವರು ಮಾತನಾಡಿ, ದೇಶದಲ್ಲಿ ಶೇ. ೨೬ರಷ್ಟು ಕ್ಷಯ ರೋಗಿಗಳಿದ್ದಾರೆ. ರೋಗ ಎರಡು ತಿಂಗಳಿನಲ್ಲಿ ಗುಣವಾದರೂ ತಪ್ಪದೆ ಆರು ತಿಂಗಳು ಚಿಕಿತ್ಸೆ ತೆಗೆದುಕೊಳ್ಳಬೇಕು. ಪ್ರತಿ ವರ್ಷ ದೇಶದಲ್ಲಿ ಕ್ಷಯ ರೋಗದಿಂದ ೪ ಲಕ್ಷ ಜವರು ಸಾವಿಗೀಡಾಗುತ್ತಿದ್ದಾರೆ. ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನ ಮಾಡೋಣ ಎಂದರು. ಆಲೂರು ತಾಲೂಕು ಆಸ್ಪತ್ರೆಯಲ್ಲಿ ಕ್ಷಯರೋಗ ಪತ್ತೆ ಹಚ್ಚುವ ಯಂತ್ರವಿದ್ದು ಅತಿ ಹೆಚ್ಚು ರೋಗಿಗಳನ್ನು ಗುರುತಿಸಿ ರೋಗ ಪತ್ತೆ ಮಾಡಿದ ಆಡಳಿತ ವೈದ್ಯಾಧಿಕಾರಿ ಡಾ. ಜಯಪ್ರಕಾಶ್ ಅವರನ್ನು ಜಿಲ್ಲಾ ಐಎಂಎ ವತಿಯಿಂದ ಗೌರವಿಸಲಾಯಿತು.ಸಮಾರಂಭದಲ್ಲಿ ಐಎಂಎ ಮಹಿಳಾ ಘಟಕದ ಕಾರ್ಯದರ್ಶಿ ಡಾ. ದಿವ್ಯಶ್ರೀ, ಖಜಾಂಚಿ ಡಾ. ದಿವ್ಯಾರಾಣಿ, ತಾ. ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ. ಲಿಖಿತಾಕೃಷ್ಣ ಉಪಸ್ಥಿತರಿದ್ದರು.
ವೈದರೊಂದಿಗೆ ಸಮಾಜ ಸೇವಕರಾದ ಷಡಾಕ್ಷರಿ, ಶರೀಫ್, ದೀಪುರವರು ಪೌಷ್ಟಿಕ ಆಹಾರ ಕಿಟ್ ಕೊಡಲು ಸಹಕರಿಸಿದರು. ಸತೀಶ್, ಮೋಹನ್, ಬಿ. ಎಸ್. ಸತೀಶ್, ಮಂಜುನಾಥ್, ಭಾಗ್ಯಮ್ಮ, ಕೆ. ಟಿ. ದಾಕ್ಷಾಯಿಣಿ ಭಾಗವಹಿಸಿದ್ದರು.