ಉಡುಪಿ: ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ಚಿರತೆಯೊಂದು ಸೆರೆಯಾದ ಘಟನೆ ಭಾನುವಾರ ಬೆಳಗ್ಗಿನ ಜಾವ ಇಲ್ಲಿನ ಮಣಿಪುರ ಗ್ರಾಮದ ಕುಂತಲನಗರದ ದೇವಳಗುಜ್ಜಿ ಎಂಬಲ್ಲಿ ನಡೆದಿದೆ.
ಬೆಳಗ್ಗೆ ಆಹಾರ ಅರಸಿ ಬಂದ ಚಿರತೆ ಈ ಬೋನಿನಲ್ಲಿ ಕಟ್ಟಲಾಗಿದ್ದ ನಾಯಿಯನ್ನು ಹಿಡಿಯಲು ಹೋಗಿ ತಾನೇ ಬೋನಿನಲ್ಲಿ ಸೆರೆಯಾಗಿದೆ. ನಂತರ ಸ್ಥಳೀಯರ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸ್ಥಳದಿಂದ ಸುರಕ್ಷಿತ ಪ್ರದೇಶಕ್ಕೆ ಸಾಗಿಸಿದ್ದಾರೆಸುಮಾರು 3 ವರ್ಷ ವಯಸ್ಸಿನ ಈ ಹೆಣ್ಣು ಚಿರತೆಯನ್ನು ಬಳಿಕ ವೈದ್ಯಾಧಿಕಾರಿಗಳು ತಪಾಸಣೆ ನಡೆಸಿದ್ದು, ನಂತರ ಅದನ್ನು ಅಭಯಾರಣ್ಯದಲ್ಲಿ ಬಿಡಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮುಹಮ್ಮದ್ ಜುನೈದ್ ಅಖ್ತರ್, ಶಿವಾನಂದ, ಗಸ್ತು ಅರಣ್ಯ ಪಾಲಕ ಶ್ರೀನಿವಾಸ ಜೋಗಿ, ಉಚ್ಚು ಟ್ರಸ್ಟ್ ನ ಸಂಯೋಜಕ ಅಕ್ಷಯ ಶೇಟ್ ಪಾಲ್ಗೊಂಡಿದ್ದರು.