ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಉಡುಪಿ: ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ ರಾಷ್ಟ್ರಕವಿ ಕುವೆಂಪು ಅವರು, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಬುದ್ದ ಅವರ ವಿಚಾರಧಾರೆಗಳನ್ನು ಹೊಸ ರೂಪದಲ್ಲಿ ನಾಡಿಗೆ ಪರಿಚಯಿಸಿದವರು. ಅವರ ಆಶಯದಂತೆ ಪ್ರತಿಯೊಬ್ಬರೂ ವಿಶ್ವ ಮಾನವ ಪರಿಕಲ್ಪನೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜ ಸುಧಾರಣೆ ಸಾಧ್ಯ ಎಂದು ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್ ಹೇಳಿದರು.
ಅವರು ಸೋಮವಾಎರ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ ಹೈಸ್ಕೂಲ್) ಜನತಾ ಸಭಾಭವನದಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಪ್ರಯುಕ್ತ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು. ಜಾತಿ, ಮತ, ಧರ್ಮ, ಪಂಥಕ್ಕೆ ಆದ್ಯತೆ ನೀಡದೇ ಮಾನವೀಯ ಧರ್ಮವೇ ಮೇಲು ಎಂಬ ಕುವೆಂಪು ಅವರ ವಿಶ್ವ ಮಾನವ ಸಂದೇಶ ಮನುಕುಲಕ್ಕೆ ಮಾದರಿಯಾಗುವಂತದ್ದು. ಅವರಂತಹ ಮಹನೀಯರುಗಳನ್ನು ಗೌರವಿಸಿ, ಅವರ ತತ್ವ, ಸಿದ್ಧಾಂತ, ಆದರ್ಶಗಳನ್ನು ಮನನ ಮಾಡಿಕೊಂಡರೇ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯ ಎಂದರು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವಿಷ್ಣುಮೂರ್ತಿ ಪ್ರಭು ಉಪನ್ಯಾಸ ನೀಡಿ ಮಾತನಾಡಿ, ರಸ ಋಷಿ ಕವಿ ಕುವೆಂಪು ಅವರು ಸತ್ವಯುತ ಸಾಹಿತ್ಯವನ್ನು ರಚಿಸಿ, ಜಾತಿ, ಮತ, ಧರ್ಮದ ಗಡಿಗಳನ್ನು ಮೀರಿ ಎಲ್ಲರೂ ಮಾನವರೇ, ಮಾನವೀಯತೆಯೇ ದೊಡ್ಡ ಧರ್ಮ ಎಂಬ ಸಂದೇಶ ಸಾರಿದ್ದಾರೆ. ಕುವೆಂಪು ರವರ ಕಾವ್ಯಗಳಲ್ಲಿನ ತತ್ವಗಳನ್ನು ಮಾದರಿಯಾಗಿಟ್ಟುಕೊಂಡು ವಿದಾರ್ಥಿಗಳೂ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಮಾನವ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು. ಪ್ರತಿಯೊಬ್ಬರಲ್ಲೂ ಸಮಾನತೆ, ಪರರಿಗೆ ಹಿತ ಬಯಸುವ ಗುಣವಿದ್ದಾಗ ವಿಶ್ವ ಮಾನವರಾಗುವುದು ಸಾಧ್ಯ, ವಿಶ್ವ ಮಾನವ ದಿನಾಚರಣೆಗೆ ಪೂರಕವಾಗಿ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ., ಕಾಲೇಜಿನ ಪ್ರಾಂಶುಪಾಲೆ ಲೀಲಾ ಭಟ್ ಮತ್ತಿತರರು ಉಪಸ್ಥಿತರಿದ್ದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ನಿರೂಪಿಸಿ, ಪ್ರೌಢಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕಿ ಭಾಗೀರಥಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.