‘ಏನಪ್ಪ ಎದ್ದೇಳು, ಇನ್ನೂ ನಿದ್ದೆ ಮಾಡಬೇಕೆ, ಗಂಟೆ 9 ತ್ತಾಗಿದೆ’

KannadaprabhaNewsNetwork | Published : Jan 31, 2024 2:19 AM

ಸಾರಾಂಶ

ಕೆಜಿಎಫ್‌ ನಗರದ ಹೃದಯ ಭಾಗದ ಉದ್ಯಾನವೇ ಈ ರೀತಿ ಆದರೆ ನಗರದಲ್ಲಿರುವ ಇತರ ಉದ್ಯಾನದ ಪರಿಸ್ಥಿತಿ ರಂಡು ಬೇಸರ ವ್ಯಕ್ತಪಡಿಸಿದ ನ್ಯಾ.ಗಣಪತಿ ಗುರುಸಿದ್ದ ಬಾದಾಮಿ ಅವರು ಇತರರೊಂದಿಗೆ ಉದ್ಯಾನ ಸ್ವಚ್ಛಗೊಳಿಸಿದರು

ಕನ್ನಡಪ್ರಭ ವಾರ್ತೆ ಕೆಜಿಎಫ್

ಏನಪ್ಪ ಎದ್ದೇಳು, ಇನ್ನೂ ನಿದ್ದೆ ಮಾಡಬೇಕೆ, ಗಂಟೆ ೯ ಆಯಿತು ಏಳಪ್ಪ ಎಂದು ಪಾರ್ಕ್‌ನಲ್ಲಿ ಮಲಗಿದ್ದ ವ್ಯಕ್ತಿಯನ್ನು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಎಬ್ಬಿಸಿದರು.

ಕಿಂಗ್ ಜಾರ್ಜ್ ಹಾಲ್ ಉದ್ಯಾವನದಲ್ಲಿ ಎಲ್ಲಿ ನೋಡಿದರೂ ಮದ್ಯದ ಬಾಟಲಿ, ತಿಂಡಿ ತಿನಿಸು ತಿಂದು ಬಿಸಾಡಿರುವ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬಾಟಲಿ, ರಾತ್ರಿ ಕುಡಿದು ಬೆಳಿಗ್ಗೆ ೯ ರವರೆಗೆ ನಿದ್ದೆಯಿಂದ ಎದ್ದೇಳದ ಕುಡುಕರು. ನಗರದ ಕಿಂಗ್ ಜಾರ್ಜ್ ಹಾಲ್‌ನ ಪಾರ್ಕ್‌ನ ದೃಶ್ಯಗಳನ್ನು ಕಂಡು ನ್ಯಾಯಾಧೀಶರು ದಂಗಾದರು. ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನ್ಯಾಯಾಧೀಶರು, ನಗರದ ಹೃದಯ ಭಾಗದ ಉದ್ಯಾನವೇ ಈ ರೀತಿ ಆದರೆ ನಗರದಲ್ಲಿರುವ ಇತರ ಉದ್ಯಾನವನಗಳ ಪರಿಸ್ಥಿತಿ ಹೇಗಿರಬೇಡ ಎಂದರು. ಬಳಿಕ ಖುದ್ದು ನ್ಯಾಯಾಧೀಶರೇ ಒಡೆದ ಗಾಜಿನ ಮದ್ಯದ ಬಾಟಲಿಗಳನ್ನು ಆಯುವ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.

ಮೂರು ಟ್ರ್ಯಾಕ್ಟರ್‌ ತ್ಯಾಜ್ಯ ಸಂಗ್ರಹ

ಕಿಂಗ್ ಜಾರ್ಜ್ ಹಾಲಿನ ಪಾರ್ಕ್‌ನಲ್ಲಿ ಕುಡುಕರ ಹಾವಳಿ ಎಷ್ಟರ ಮಟ್ಟಿಗೆ ಎಂಬುದಕ್ಕೆ ಮೂರು ಟ್ರ್ಯಾಕ್ಟರ್ ಬಾಟಲಿ ಮತ್ತು ತಿಂದು ಬಿಸಾಡಿರುವ ತ್ಯಾಜ್ಯವೇ ಇದಕ್ಕೆ ಉದಾಹರಣೆ, ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯ ನಿಷೇಧ ಮಾಡಿದ್ದರೂ ಎಗ್ಗಿಲ್ಲದೆ ಪಾರ್ಕ್‌ಗಳಲ್ಲಿ ಕುಡುಕರ ಹಾವಳಿ ಕಂಡು ನ್ಯಾಯಾಧೀಶರು ಗರಂ ಆದರು.

ಸ್ವಚ್ಛತಾ ಕಾರ್ಯದಲ್ಲಿ ನ್ಯಾ. ಗಣಪತಿ ಗುರುಸಿದ್ದ ಬಾದಾಮಿ, ನ್ಯಾ. ಮುಜಫರ್‌ಎ ಮಾಜಂರಿ, ನ್ಯಾ. ವಿನೋದ್‌ಕುಮಾರ್, ಮಂಜುನಾಥ್. ಆರ್.ಮಂಜು ಎಂ., ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲ ಗೌಡ, ನಗರಸಭೆ ವ್ಯವಸ್ಥಾಪಕ ಶಶಿಕುಮಾರ್, ಪ್ರರ್ಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸುಜಾತ, ಡಾ.ತಿಮ್ಮಯ್ಯ ಕಾಲೇಜಿನ ಎನ್‌ಸಿಸಿ ಅಧಿಕಾರಿ ನಾರಾಯಣಸ್ವಾಮಿ, ವಕೀಲರಾದ ದಿನೇಶ್‌ಕುಮಾರ್, ವೆಂಕಟರಮಣಪ್ಪ ಸ್ವಚ್ಛತಾ ಕಾರ್‍ಯದಲ್ಲಿ ಭಾಗವಹಿಸಿದ್ದರು.

Share this article