ಶಿವಾನಂದ ಗೊಂಬಿ
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರತಿ ವರ್ಷ ಹೆಚ್ಚಳವಾಗಬೇಕು. ಅನುತ್ತೀರ್ಣವಾಗುವವರ ಸಂಖ್ಯೆ ಕಡಿಮೆಯಾಗಬೇಕು ಎಂಬುದು ಎಲ್ಲರ ಅಭಿಲಾಷೆ. ಆದರೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಉತ್ತೀರ್ಣವಾಗುವುದು ಕಷ್ಟಸಾಧ್ಯವಾಗುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಹಿಂದುಳಿದ ಮಕ್ಕಳು ಪಾಸಾಗುವ ಹಂತಕ್ಕೆ ತರುವುದು ಸಮಸ್ಯೆಯಾಗುತ್ತಿದೆ ಎಂಬ ಗೋಳು ಶಿಕ್ಷಕರದ್ದಾಗಿರುತ್ತದೆ. ಅದಕ್ಕಾಗಿ ಅಕ್ಟೋಬರ್‌ನಿಂದ ಜಿಲ್ಲೆಯಲ್ಲಿ ರೂಢಿ ಪರೀಕ್ಷೆ ನಡೆಸಲಾಗುತ್ತಿದೆ.
ಏನಿದು ರೂಢಿ ಪರೀಕ್ಷೆ?ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 29929. ಇದರಲ್ಲಿ ಕಲಿಕೆಯಲ್ಲಿ ತೀರಾ ಹಿಂದುಳಿದ ಮಕ್ಕಳ ಸಂಖ್ಯೆ 7500 ಎಂದು ಇಲಾಖೆ ಗುರುತಿಸಿದೆ. ಈ ಮಕ್ಕಳಿಗೆ ಪ್ರತಿದಿನ ಪರೀಕ್ಷೆ ಬರೆಯಿಸುವುದೇ ರೂಢಿ ಪರೀಕ್ಷೆ.
ಈ ಪ್ರಶ್ನೆ ಪತ್ರಿಕೆಗಳನ್ನು ಕಲಿಕೆಯಲ್ಲಿ ಹಿಂದುಳಿದವರು ಎಂದು ಗುರುತಿಸಲಾದ ಮಕ್ಕಳಿಗೆ ನೀಡಲಾಗಿದೆ. ಅದನ್ನು ಪ್ರತಿದಿನ ಈ ಮಕ್ಕಳು ಬರೆದುಕೊಂಡು ಬರಬೇಕು. ನಿರಂತರವಾಗಿ ಅದೇ ಪ್ರಶ್ನೆಗಳಿಗೆ ಉತ್ತರ ಬರೆಯುವುದರಿಂದ ಆ ಮಕ್ಕಳಿಗೆ ಆ ಉತ್ತರಗಳು ನೆನಪಲ್ಲಿ ಉಳಿಯುತ್ತವೆ. ಅವರು ಪುಸ್ತಕ ನೋಡಿ ಬರೆದುಕೊಂಡು ಬರಬಹುದು. ಆ ಮಗುವಿನ ಉತ್ತರ ಪತ್ರಿಕೆಯನ್ನು ಪ್ರತಿದಿನ ಆ ವಿಷಯ ಶಿಕ್ಷಕರು ತಿದ್ದಿ ಮತ್ತೆ ಏನು ತಪ್ಪಾಗಿದೆ ನೋಡಿಕೊಂಡು ಮಕ್ಕಳಿಗೆ ಮತ್ತೆ ಮಾರ್ಗದರ್ಶನ ಮಾಡಬೇಕು. ಹೀಗೆ ಪ್ರತಿದಿನ ಅದೇ ಪ್ರಶ್ನೆ ಪತ್ರಿಕೆಯನ್ನು ಬರೆದುಕೊಂಡು ಬರುವಂತೆ ಸೂಚಿಸಲಾಗಿದೆ.
ಈ ಕೆಲಸ ಅಕ್ಟೋಬರ್ ರಜೆ ಮುಗಿದ ನಂತರದಿಂದ ಪ್ರಾರಂಭವಾಗಿದೆ. ಇದರಿಂದ ಮಕ್ಕಳು ಸಾಕಷ್ಟು ಸುಧಾರಣೆ ಕಂಡು ಬರುತ್ತಿದೆ. ಕಲಿಕೆಯಲ್ಲಿ ತೀರಾ ಹಿಂದುಳಿದವರ ಸಂಖ್ಯೆ ಇದೀಗ 7500ರಿಂದ 2800ಕ್ಕೆ ಇಳಿದಿದೆ. ಇನ್ನು ಒಂದು ತಿಂಗಳು ಕಳೆದರೆ ಇವರು ಕೂಡ ಪಾಸಾಗುವ ಹಂತಕ್ಕೆ ಬರುತ್ತಾರೆ. ಯಾರೂ ಅನುತ್ತೀರ್ಣರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ರೀತಿ ಪ್ರಯೋಗ ಮಾಡಲಾಗುತ್ತಿದೆ.
ವೈಯಕ್ತಿಕ ವೇಳಾಪಟ್ಟಿ
ಹೀಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಉತ್ತಮಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ವಿಭಿನ್ನ ರೀತಿಯ ಪ್ರಯೋಗಗಳನ್ನಂತೂ ಮಾಡುತ್ತಿರುವುದು ಸತ್ಯ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತವೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!