ಹುಳಿಯಾರಿನಲ್ಲಿ ಅದ್ಧೂರಿ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Jan 31, 2024 2:19 AM

ಸಾರಾಂಶ

ಸಮ್ಮೇಳನಾಧ್ಯಕ್ಷರನ್ನು ಭವ್ಯ ಮೆರವಣಿಗೆಯೊಂದಿಗೆ ಶ್ರೀ ವಾಸವಿ ಕಲ್ಯಾಣ ಮಂಟಪದಿಂದ ರಾಮ್ ಗೋಪಾಲ್ ವೃತ್ತ, ಕನಕದಾಸ ವೃತ್ತ, ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆಯ ಮೂಲಕ ವೇದಿಕೆಗೆ ಕರೆತಂದರು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಬಾಲಕಿಯರು, ಹುಲಿ ಕುಣಿತ, ಡೊಳ್ಳು ಕುಣಿತ ಮುಂತಾದ ಮುಂತಾದ ತಂಡಗಳೊಂದಿಗೆ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಹುಳಿಯಾರು

ಹುಳಿಯಾರು ಪಟ್ಟಣದಲ್ಲಿ ಆಯೋಜಿಸಿರುವ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆಯಿತು.

ಎಂಪಿಎಸ್ ಮೈದಾನದಲ್ಲಿ ರಾಷ್ಟ್ರಧ್ವಜ, ನಾಡಧ್ವಜ, ಪರಿಷತ್ ಧ್ವಜ ಹಾರಿಸುವ ಮೂಲಕ ಸಮ್ಮೇಳನಾಧ್ಯಕ್ಷೆ ಪ್ರೊ.ಕೃಷ್ಣಾಬಾಯಿ ಚಾಲನೆ ನೀಡಿದರು. ನಂತರ ಮೆರವಣಿಗೆಯನ್ನು ಮಾಜಿ ಶಾಸಕ ಕೆ,ಎಸ್. ಕಿರಣ್ ಕುಮಾರ್ ಉದ್ಘಾಟಿಸಿದರು, ಸಮ್ಮೇಳನಾಧ್ಯಕ್ಷರನ್ನು ಭವ್ಯ ಮೆರವಣಿಗೆಯೊಂದಿಗೆ ಶ್ರೀ ವಾಸವಿ ಕಲ್ಯಾಣ ಮಂಟಪದಿಂದ ರಾಮ್ ಗೋಪಾಲ್ ವೃತ್ತ, ಕನಕದಾಸ ವೃತ್ತ, ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆಯ ಮೂಲಕ ವೇದಿಕೆಗೆ ಕರೆತಂದರು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಬಾಲಕಿಯರು, ಹುಲಿ ಕುಣಿತ, ಡೊಳ್ಳು ಕುಣಿತ ಮುಂತಾದ ಮುಂತಾದ ತಂಡಗಳೊಂದಿಗೆ ಭಾಗವಹಿಸಿದ್ದರು.

ಪ್ರಾರ್ಥನೆ ನಂತರ ನಾಡಗೀತೆ ಮತ್ತು ರೈತಗೀತೆ ಹಾಡಿನೊಂದಿಗೆ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮ್ಮೇಳನಾಧ್ಯಕ್ಷೆ ಫ್ರೊ. ಕೃಷ್ಣಾಬಾಯಿ ಹಾಗಲವಾಡಿ, 11 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ನನ್ನನ್ನು ಆಯ್ಕೆಮಾಡಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹುಟ್ಟಿರುವುದು ನನ್ನ ಸೌಭಾಗ್ಯ ಎಂದು ನಾನು ಪರಿಗಣಿಸುತ್ತೇನೆ. ನನ್ನ ತಂದೆ- ತಾಯಿ ನಾನು ಹೆಣ್ಣು ಮಗಳಾದರೂ ವಿದ್ಯಾಭ್ಯಾಸ ಕಲಿಸಿ ನಾನು ಈ ಸ್ಥಾನಕ್ಕೆ ಬರಲು ಕಾರಣಾಗಿದ್ದಾರೆ. ಹಾಗೆಯೇ ನನಗೆ ವಿದ್ಯೆ ಕಲಿಸಿದ ಗುರುಗಳಿಗೂ ಕೂಡ ನಾನು ನಮಿಸುತ್ತೇನೆ, ಇದುವರೆಗೂ ಹತ್ತು ಸಮ್ಮೇಳನಗಳು ತಾಲೂಕಿನಲ್ಲಿ ನಡೆದಿವೆ. 10 ಸಮ್ಮೇಳನಾಧ್ಯಕ್ಷರು ಸರಸ್ವತಿಯ ಪುತ್ರರಂತೆ ಸಮ್ಮೇಳನದ ಅಧ್ಯಕ್ಷತೆವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.

ಈ ವೇಳೆ ಕುವೆಂಪು ವಾಕ್ಯವನ್ನು ನೆನೆದ ಅವರು, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು, ಕನ್ನಡಕ್ಕಾಗಿ ಧ್ವನಿ ಎತ್ತು ಅಲ್ಲಿ ಪಾಂಚಜನ್ಯ ಮೊಳಗುವುದು, ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದೇ ಗೋವರ್ಧನ ಗಿರಿಯಾಗುವುದು. ಕನ್ನಡದಲ್ಲಿ ಮಾತನಾಡುವವರು , ಕನ್ನಡದಲ್ಲಿ ಉಸಿರಾಡುವವರು, ಕನ್ನಡದಲ್ಲಿ ಬದುಕುವವರ ಜೀವನ ಬಂಗಾರವಾಗುತ್ತದೆ ಎಂಬುದಕ್ಕೆ ನನ್ನ ಜೀವನವೇ ಉದಾಹರಣೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಂತಹ ಕನ್ನಡವನ್ನು ಕೇವಲ ಭಾಷಣಕ್ಕೆ ಸೀಮಿತವಾಗಿರಿಸದೇ ಕನ್ನಡವನ್ನು ಮಾತನಾಡುವ ಹಾಗೂ ಬರೆಯುವ ಮೂಲಕ ನಮ್ಮ ಭಾಷೆಯನ್ನು ಉಳಿಸಿ, ಬೆಳೆಸಬೇಕಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಪ್ರೋ, ಕೃಷ್ಣಾಬಾಯಿ ಹಾಗಲವಾಡಿ ತಿಳಿಸಿದರು.

ಶಾಸಕ ಸಿ.ಬಿ. ಸುರೇಶ್ ಬಾಬು ಅಧ್ಯಕ್ಷತೆ ವಹಿಸಿದ್ದರು, ಸಂಸ್ಕೃತಿ ಚಿಂತಕ ಎಸ್.ಜಿ.ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು, ಡಾ. ತಿಮ್ಮನಹಳ್ಳಿ ವೇಣುಗೋಪಾಲ್ ಧ್ವಜ ಪ್ರದಾನ ಮಾಡಿದರು, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಸಮ್ಮೇಳನದ ಆಶಯ ತಿಳಿಸಿದರು, ತಹಸೀಲ್ದಾರ್ ಸಿ.ಜಿ.ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಕಾಂತರಾಜು, ಎಇಇ ಗವಿರಂಗಯ್ಯ, ತಾ. ಕಸಾಪ ಅಧ್ಯಕ್ಷ ರವಿಕುಮಾರ್ ಕಟ್ಟೆಮನೆ, ಪಪಂ ಅಧ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷೆ ಶೃತಿ ಸನತ್ , ಪಪಂ ಮುಖ್ಯಾಧಿಕಾರಿ ನಾಗಭೂಷಣ್, ಪಪಂ ಸದಸ್ಯರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸುರೇಶ್, ಕರವೇ ತಾಲೂಕು ಅಧ್ಯಕ್ಷ ಚನ್ನಬಸವಯ್ಯ, ಹುಳಿಯಾರು ಕರವೇ ಅಧ್ಯಕ್ಷ ಬೇಕರಿ ಪ್ರಕಾಶ್ , ತಾಲೂಕು ಹಾಗೂ ಹುಳಿಯಾರು ಹೋಬಳಿ ಕಸಾಪದ ಸದಸ್ಯರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Share this article