ಕನ್ನಡಪ್ರಭ ವಾರ್ತೆ ಸೊರಬ
ಸರ್ಕಾರಿ ನೌಕರರು ಯಾವುದೇ ಒತ್ತಡ ಇಲ್ಲದೇ ಕಾರ್ಯನಿರ್ವಹಿಸುವ ಮುಕ್ತ ವಾತಾವರಣ ಕಲ್ಪಿಸಿದಾಗ ಸಾರ್ವಜನಿಕರ ಕಡತಗಳು ಶೀಘ್ರ ವಿಲೇವಾರಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಜತೆ ಸಹಕರಿಸಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.ಸೋಮವಾರ ಪಟ್ಟಣದ ಡಾ. ರಾಜ್ ರಂಗಮಂದಿರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಸರ್ಕಾರಿ ನೌಕರರ ಸಮ್ಮೇಳನ, ಕಾರ್ಯಾಗಾರ ಹಾಗೂ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕನಾಗಿದ್ದ ಅವಧಿಯಲ್ಲಿ ಮತ್ತು ಸಚಿವನಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ಅಧಿಕಾರಿ ವರ್ಗಕ್ಕೆ ಯಾವುದೇ ಒತ್ತಡ ಇಲ್ಲದೇ, ಕಾರ್ಯನಿರ್ವಹಿಸುವ ವಾತಾವರಣ ಸೊರಬ ಕ್ಷೇತ್ರದಲ್ಲಿದೆ. ಈ ಮೂಲಕ ಸಾರ್ವಜನಿಕ ಕುಂದುಕೊರತೆಗಳನ್ನು ನಿಷ್ಠೆ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ತಂದೆ ಎಸ್. ಬಂಗಾರಪ್ಪ ಅವರು ಅಂದಿನ ದಿನಗಳಲ್ಲಿ ನೌಕರರ ಬಗ್ಗೆ ಅಪಾರವಾದ ಗೌರವ ಹೊಂದಿದ್ದರು ಎಂದರು.ಎನ್.ಪಿ.ಎಸ್. ರದ್ದತಿ, ಆರೋಗ್ಯ ಸಂಜೀವಿನಿ, ಏಳನೇ ವೇತನ ಆಯೋಗ ಜಾರಿ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಅನುದಾನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಮಾತನಾಡಿ, ನೌಕರರ ಜೀವನದ ಹಿತಕಾಪಾಡಲು ಎನ್‌ಪಿಎಸ್ ರದ್ದು ಮಾಡಿ, ಓಪಿಎಸ್ ಜಾರಿಯಾಗಬೇಕು. ಏಳನೇ ವೇತನ ಆಯೋಗ ಜಾರಿಗೆ ತರಬೇಕು ಹಾಗೂ ಆರೋಗ್ಯ ಸಂಜೀವಿನಿ ಜಾರಿಯಾದರೆ ನೌಕರರ ಹಿತವನ್ನು ಕಾಪಾಡಲು ಸಾಧ್ಯ ಎಂದರು.ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಓಟೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ಹುಸೇನ್ ಸರಾಕವಸ್, ಸಿಇಒ ಸತ್ಯನಾರಾಯಣ, ಕೃಷಿ ನಿರ್ದೇಶಕ ಕೆ.ಜಿ. ಕುಮಾರ್, ವಿನಯ್ ಪಾಟೀಲ್, ತಾಪಂ ಇಒ ಪ್ರದೀಪ್‌ಕುಮಾರ್, ಪುರಸಭಾ ಮುಖ್ಯಾಧಿಕಾರಿ ಟಿ.ಬಾಲಚಂದ್ರಪ್ಪ, ಚಂದ್ರಪ್ಪ, ಇಕ್ಬಾಲ್ ಜಾತಿಗೇರ್, ಆಶಾ, ಮುಖಂಡರಾದ ರವಿಕುಮಾರ್, ವೈ.ಎಚ್. ನಾಗರಾಜ್, ಆರ್.ಮೋಹನ್‌ಕುಮಾರ್, ಎಚ್.ಗಣಪತಿ, ಎಂ.ಡಿ.ಶೇಖರ್, ನೆಹರು ಕೊಡಕಣಿ, ಶಿವಲಿಂಗೇಗೌಡ, ಸದಾನಂದಗೌಡ, ರೇವಣಪ್ಪ, ನರಸಿಂಹಮೂರ್ತಿ, ಪರಮೇಶ್ವರಪ್ಪ, ಹಾಲಪ್ಪ, ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ವಿ.ಗೌಡ ಮೊದಲಾದವರು ಹಾಜರಿದ್ದರು.
- - -ಟಾಪ್ ಕೋಟ್ ಸಾಮಾಜಿಕ ಭದ್ರತೆ ದೃಷ್ಟಿಯಿಂದ ನಿವೃತ್ತಿ ವೇತನ ನೀಡಬೇಕು ಮತ್ತು ಎನ್.ಪಿ.ಎಸ್. ರದ್ದುಪಡಿಸುವ ಮೂಲಕ ಸರ್ಕಾರಿ ನೌಕರರ ಹಿತಕಾಯಬೇಕು. ನೌಕರರು ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಯಂತ್ರಗಳಿದ್ದಂತೆ
- ಆಯನೂರು ಮಂಜುನಾಥ, ಕೆಪಿಸಿಸಿ ವಕ್ತಾರ- - -
-29ಕೆಪಿಸೊರಬ03: ಸರ್ಕಾರಿ ನೌಕರರ ಸಮ್ಮೇಳನವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.