ಕನ್ನಡಪ್ರಭ ವಾರ್ತೆ ಶಹಾಪುರ
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ಇದ್ದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮೊದಲಾದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ತಾಲೂಕಿನ ಹೊಸಕೇರಾ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಶುದ್ಧ ಕುಡಿಯುವ ನೀರು ಸಂಗ್ರಹದ ಟ್ಯಾಂಕ್ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಜಲಧಾರೆ ಯೋಜನೆ ಅಡಿಯಲ್ಲಿ ₹1600 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿ ಇದಾಗಿದೆ. ನಾರಾಯಣಪುರ ಜಲಾಶಯದ ಸಂಗ್ರಹದ ನೀರನ್ನು ಉಪಯೋಗಿಸಿಕೊಂಡು ಸುರಪುರ ತಾಲೂಕಿನ ಕೊಡೇಕಲ್ ಗ್ರಾಮದ ಹತ್ತಿರ ನಿರ್ಮಿಸುತ್ತಿರುವ ನೀರು ಶುದ್ಧೀಕರಿಸುವ ಘಟಕದ ಪೈಪ್‌ಲೈನ್ ಮೂಲಕ ಈಗ ನಿರ್ಮಾಣವಾಗುತ್ತಿರುವ (ಹೊಸಕೇರಾ ಗ್ರಾಮ) ಟ್ಯಾಂಕ್‌ಗೆ ಶುದ್ಧಿಕರಿಸಿದ ನೀರು ಸರಬರಾಜು ಮಾಡಲಾಗುತ್ತದೆ. ನಂತರ ಅಲ್ಲಿಂದ ವಿವಿಧ ಗ್ರಾಮದ ಟ್ಯಾಂಕ್‌ಗೆ ನೀರು ಸರಬರಾಜು ಮಾಡುವುದು ಇದರ ಉದ್ದೇಶವಾಗಿದೆ. ಈ ಯೋಜನೆಗೆ ನಾರಾಯಣಪುರ ಜಲಾಶಯದಿಂದ ವರ್ಷಕ್ಕೆ 1.5 ಟಿಎಂಸಿ ನೀರು ಬೇಕಾಗುತ್ತದೆ. ನಿಮ್ಮ ಗ್ರಾಮದ ಕಾಮಗಾರಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ತಿಳಿಸಿದರು.ಜಿಲ್ಲೆಯ ಹುಣಸಗಿ 163 ಗ್ರಾಮ, ಸುರಪುರ 123, ಶಹಾಪುರ 138, ವಡಗೇರಾ 69,ಯಾದಗಿರಿ 138, ಗುರುಮಠಕಲ್ 62 ಹಳ್ಳಿಗಳು ಸೇರಿ ಜಿಲ್ಲೆಯ 696 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯ ಲಭಿಸಲಿದೆ. ಅಲ್ಲದೆ ಜಿಲ್ಲೆಯ ಹುಣಸಗಿ, ಕೆಂಭಾವಿ, ಕಕ್ಕೇರಾ ಪಟ್ಟಣಕ್ಕೂ ಯೋಜನೆ ವಿಸ್ತರಿಸಿದೆ ಎಂದರು.
ಈ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 395 ನೀರು ಸಂಗ್ರಹದ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿ 2400 ಕಿ.ಮೀ. ವ್ಯಾಪ್ತಿಯನ್ನು ಒಳಗೊಂಡಿದೆ. ಈಗಾಗಲೇ ನಾಲ್ಕು ತಿಂಗಳ ಹಿಂದೆ ಖಾಸಗಿ ಕಂಪನಿ ಮೇಘಾ ಎಂಜಿನಿಯರಿಂಗ್ ಕನಸ್ಟ್ರಕ್ಷನ್ ಕಂಪನಿ ಕಾಮಗಾರಿ ಕೈಗೊಂಡಿದೆ. 2025 ಜೂನ್ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಳ್ಳುವ ಅಂದಾಜು ಇದೆ. ಮುಂದೆ ಐದು ವರ್ಷಗಳ ಕಾಲ ಇದರ ನಿರ್ವಹಣೆ ಕಂಪನಿ ವಹಿಸಲಿದೆ ಎಂದರು.ಈ ಸಂದರ್ಭದಲ್ಲಿ ಹಿರಿಯ ಎಂಜಿನಿಯರ್ ಆನಂದ, ಚೆನ್ನವೀರಯ್ಯ ಸ್ವಾಮಿ, ಭೀಮಶೆಟ್ಟಿ ಪಾಟೀಲ್, ಕಂಪನಿಯ ಎಂಡಿ ಸೇಲ್ವ ಮುರಗನ್ ಇದ್ದರು.