ಕನ್ನಡಪ್ರಭ ವಾರ್ತೆ ಮಂಡ್ಯ
ರೈತರ ಸಮಸ್ಯೆಗಳ ಪರವಾಗಿ ಸದನದಲ್ಲಿ ಗಟ್ಟಿ ಧ್ವನಿಯಾಗಿದ್ದವರು ಪುಟ್ಟಣ್ಣಯ್ಯ. ಬೆಳೆಗಳಿಗೆ ನೀರು ಪೂರೈಕೆ, ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ನೀಡುವಂತೆ ಹೋರಾಟ ನಡೆಸುತ್ತಾ ರೈತರ ಧ್ವನಿಯಾಗಿದ್ದರು ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ಹೊಳಲು ಗ್ರಾಮದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜನ್ಮದಿನದ ಅಂಗವಾಗಿ ದರ್ಶನ್ ಪುಟ್ಟಣ್ಣಯ್ಯ ಅಭಿಮಾನಿಗಳ ವತಿಯಿಂದ ಕೆ.ಎಸ್.ಪುಟ್ಟಣ್ಣಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಪುಟ್ಟಣ್ಣಯ್ಯನವರ ಮಾತಿನಲ್ಲೇ ರೈತರ ಬಗ್ಗೆ ಇದ್ದ ಕಾಳಜಿ ವ್ಯಕ್ತವಾಗುತ್ತಿದ್ದವು. ಇಂತಹ ಧೀಮಂತ ನಾಯಕನ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕೂಡ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಮುಖ್ಯಮಂತ್ರಿಗಳು, ಸಚಿವರ ಸಹಕಾರದಿಂದ ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಕೆಲಸದಲ್ಲಿ ತೊಡಗಿದ್ದಾರೆ. ಮುಂದೆಯೂ ಸಹ ಇವರಿಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹಿರಿಯರ ಮಾರ್ಗದರ್ಶನ ಪಡೆದು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ದಿನನಿತ್ಯ ರೈತರು ಸಮಸ್ಯೆಗಳೊಂದಿಗೆ ಕಚೇರಿಗಳಿಗೆ ಅಲೆಯುತ್ತಿದ್ದರು. ಇದನ್ನು ಮನಗಂಡು ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ ರೂಪಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೇನೆ. ಮುಂದೆಯೂ ಸಹ ಈ ಯೋಜನೆ ಮುಂದುವರೆಸಿಕೊಂಡು ಹೋಗುತ್ತೇನೆ. ಇದರಿಂದ ರೈತರ ಅಲೆದಾಟ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ ಎಂಬ ಭಾವನೆ ವ್ಯಕ್ತಪಡಿಸಿದರು. ನನ್ನ ಹುಟ್ಟುಹಬ್ಬದಂದು ನಮ್ಮ ಕಾರ್ಯಕರ್ತರು ನಮ್ಮ ತಂದೆಯ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಸೇವೆಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್‌ಗೌಡ, ಮಾಜಿ ಶಾಸಕ ಎಚ್.ಪಿ.ರಾಮು, ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ತಹಸೀಲ್ದಾರಗಳಾದ ಶಿವಕುಮಾರ್ ಬಿರಾದಾರ್, ಸ್ಮಿತಾ ರಾಮು, ಮುಡಾ ಅಧ್ಯಕ್ಷ ನಹೀಂ, ಮುಖಂಡರಾದ ಸುನಿತಾ ಪುಟ್ಟಣ್ಣಯ್ಯ, ನಾಗರಾಜು ಭಾಗವಹಿಸಿದ್ದರು.------