ಕಾರ್ಯಕ್ರಮದಲ್ಲಿ ಪಿಎಂಜೆಜೆಬಿವೈ, ಪಿಎಂಎಸ್ಬಿವೈ ಯೋಜನೆಯಡಿ ಮಂಜೂರಾದ ವಿಮಾ ಮೊತ್ತವನ್ನು ಮೃತ ಫಲಾನುಭವಿಗಳ ನಾಮನಿರ್ದೇಶಿತರಿಗೆ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ, ತುಮಕೂರು
ರಾಜ್ಯದಲ್ಲಿ ಸುಮಾರು 1.66 ಕೋಟಿ ಉಳಿತಾಯ ಖಾತೆಗಳ ಮರು-ಕೆವೈಸಿ ಬಾಕಿ ಉಳಿದಿದ್ದು, ಈ ಪೈಕಿ 1.09 ಕೋಟಿ ಖಾತೆಗಳು 1 ವರ್ಷಕ್ಕೂ ಹೆಚ್ಚು ಅವಧಿಯಿಂದ ನಿಷ್ಕ್ರಿಯವಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕಿ ಕಯಾ ತ್ರಿಪಾಠಿ ಮಾಹಿತಿ ನೀಡಿದರು.
ತಾಲೂಕಿನ ಬೆಳ್ಳಾವಿ ಗ್ರಾಮ ಪಂಚಾಯತಿಯಲ್ಲಿಂದು ಆಯೋಜಿಸಿದ್ದ ಬೃಹತ್ ಆರ್ಥಿಕ ಸೇರ್ಪಡೆ ಸ್ಯಾಚುರೇಷನ್ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ಹಾಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನಗಳು ತಲುಪಬೇಕು. ಈ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್ಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಇದಕ್ಕಾಗಿ ದೇಶದಾದ್ಯಂತ ಡಿಸೆಂಬರ್ 31 ರವರೆಗೆ ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಈ ಆರ್ಥಿಕ ಸೇರ್ಪಡೆ ಸ್ಯಾಚುರೇಷನ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಜನ್ಧನ್ ಯೋಜನೆಯಡಿ ಬ್ಯಾಂಕ್ ಖಾತೆ ತೆರೆಯುವ, ಬ್ಯಾಂಕ್ ಖಾತೆಗಳ ಮರು ಕೆವೈಸಿ ಪೂರ್ಣಗೊಳಿಸುವ, ನಿಷ್ಕ್ರಿಯ ಖಾತೆಗಳನ್ನು ಪುನಃ ಸಕ್ರಿಯಗೊಳಿಸುವ ಹಾಗೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ನೋಂದಾಯಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಭಾರತೀಯ ಸ್ಟೇಟ್ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ದೀಪಕ್ ಕೌಶಿಕ್ ಹಾಗೂ ಪ್ರಧಾನ ವ್ಯವಸ್ಥಾಪಕಿ ಲೇಖಾ ಮೆನನ್ ಜಿ. ಅವರು ಮಾತನಾಡಿ, ಸಾರ್ವಜನಿಕರು ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದರು. ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಈಶ್ವರಪ್ಪ ಮಾತನಾಡಿ, ಪಿಎಂಜೆಜೆಬಿವೈ, ಪಿಎಂಎಫ್ಬಿವೈ, ಪಿಎಂಜೆಡಿವೈ, ಪಿಎಂಎಸ್ಬಿವೈ, ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು, ಮರು ಕೆವೈಸಿ, ನಾಮನಿರ್ದೇಶನ, ಕಿಸಾನ್ ಕ್ರೆಡಿಟ್ ಕಾರ್ಡ್ ಸೇರಿದಂತೆ ಬ್ಯಾಂಕಿನ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರಲ್ಲದೆ, ಅರ್ಹ ಗ್ರಾಹಕರನ್ನು ಬ್ಯಾಂಕಿನ ಯೋಜನೆಗಳ ವ್ಯಾಪ್ತಿಗೆ ತರಬೇಕೆಂದು ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಎಂಜೆಜೆಬಿವೈ, ಪಿಎಂಎಸ್ಬಿವೈ ಯೋಜನೆಯಡಿ ಮಂಜೂರಾದ ವಿಮಾ ಮೊತ್ತವನ್ನು ಮೃತ ಫಲಾನುಭವಿಗಳ ನಾಮನಿರ್ದೇಶಿತರಿಗೆ ವಿತರಿಸಲಾಯಿತು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ವ್ಯವಸ್ಥಾಪಕ ಚೈತನ್ಯ ಕಂಚಿಬೈಲ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಸಂಚಾಲಕರು ಹಾಗೂ ಕೆನರಾ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಪಿ. ಜಗನ್ನಾಥರಾವ್, ಭಾರತೀಯ ಸ್ಟೇಟ್ ಬ್ಯಾಂಕ್ನ ಉಪಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್ ಪಟ್ನಾಯಕ್, ಉಪ ಮಹಾಪ್ರಬಂಧಕರಾದ ಅಲೋಕ್ ಚಂದ್ರ ಹಾಗೂ ಹರೀಶ್ ಕುಮಾರ್ ಜೈನ್, ಪ್ರಾದೇಶಿಕ ವ್ಯವಸ್ಥಾಪಕ ಶ್ರೀರಾಮ್ ಪಿ., ದೊರೈರಾಜ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮೋಹನ್ ಸಾಯಿ ಗಣೇಶ್, ಕರ್ನಾಟಕ ಗ್ರಾಮೀಣ ಬ್ಯಾಂಕಿನ ರೂಪೇಶ್ ಕುಮಾರ್, ಭಾರತೀಯ ಸ್ಟೇಟ್ ಬ್ಯಾಂಕ್ನ ಬೆಳ್ಳಾವಿ ಶಾಖೆ ವ್ಯವಸ್ಥಾಪಕ ಹನುಮೇಶ್, ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು ಹಾಗೂ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.