ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಸೇರಿ ಇಬ್ಬರು ವ್ಯಕ್ತಿಗಳು ಪೆನ್‌ಡ್ರೈವ್‌ ಸೇರಿ ಹಲವು ಡಿಜಿಟಲ್‌ ದಾಖಲೆಗಳನ್ನು ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಸಲ್ಲಿಸಿದ್ದಾರೆ.

-ಇಬ್ಬರಿಂದ ಪೆನ್‌ಡ್ರೈವ್‌ ಸೇರಿ ಡಿಜಿಟಲ್‌ ದಾಖಲೆ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಸೇರಿ ಇಬ್ಬರು ವ್ಯಕ್ತಿಗಳು ಪೆನ್‌ಡ್ರೈವ್‌ ಸೇರಿ ಹಲವು ಡಿಜಿಟಲ್‌ ದಾಖಲೆಗಳನ್ನು ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಸಲ್ಲಿಸಿದ್ದಾರೆ.

ಪ್ರಕರಣ ಸಂಬಂಧ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಪೆನ್‌ಡ್ರೈವ್‌ ಸೇರಿ ಒಟ್ಟು 18 ಆನ್‌ಲೈನ್‌ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮತ್ತೊಬ್ಬ ಖಾಸಗಿ ವ್ಯಕ್ತಿ ಸಹ 11 ದಾಖಲೆ ಸಲ್ಲಿಸಿದ್ದಾರೆ. ಈ ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಾಲಯ, ಈ ದಾಖಲೆಗಳನ್ನು ಸುರಕ್ಷಿತವಾಗಿಡಬೇಕು ಎಂದು ತನ್ನ ಕಚೇರಿಗೆ ನಿರ್ದೇಶಿಸಿದೆ.

ಇದೇ ವೇಳೆ ಪ್ರಕರಣ ಸಂಬಂಧ ತನಗೆ ಪೊಲೀಸ್‌ ರಕ್ಷಣೆ ಒದಗಿಸಬೇಕು ಎಂದು ಕೋರಿ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಆಕ್ಷೇಪಿಸಿರುವ ಸೈಬರ್‌ ಪೊಲೀಸರು, ಅರ್ಜಿದಾರರು ಸ್ಟಿಂಗ್‌ ಆಪರೇಷನ್‌ ಪ್ರಕರಣವನ್ನು ಸಕ್ರಿಯವಾಗಿ ತನಿಖೆ ನಡೆಸಿದ್ದಾರೆ. ಇದರಿಂದ ಅವರು ಸಾಕ್ಷಿ ರಕ್ಷಣೆಯ ವ್ಯಾಖ್ಯಾನದ ಅಡಿಗೆ ಅರ್ಜಿದಾರರು ಬರುವುದಿಲ್ಲ. ಈ ಅಂಶ ಪರಿಗಣಿಸಿ ಪೊಲೀಸ್‌ ರಕ್ಷಣೆಗೆ ಕೋರಿ ಅವರು ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.

ಈ ಆಕ್ಷೇಪಣೆ ದಾಖಲಿಸಿಕೊಂಡಿರುವ ನ್ಯಾಯಾಲಯ, ಪ್ರಕರಣದಲ್ಲಿ ಆರು ಮಂದಿ ಆರೋಪಿಗಳು ಸಲ್ಲಿಸಿರುವ ಮುಖ್ಯ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ.7ಕ್ಕೆ ಮುಂದೂಡಿದೆ.