ಮಾರುತಿ ಶಿಡ್ಲಾಪೂರ
ತಾಲೂಕಿನಲ್ಲಿ ಒಟ್ಟು ೨೮೭೪ ಮಂಜೂರಿ ಹುದ್ದೆಗಳಿದ್ದು, ೧೬೭೦ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ೧೨೦೪ ಹುದ್ದೆಗಳು ಖಾಲಿ ಇವೆ. ತಾಪಂನಲ್ಲಿ ಮಂಜೂರಾದ ೧೨೫ ಹುದ್ದೆಗಳ ಪೈಕಿ ೪೩ ಹುದ್ದೆಗಳು ಖಾಲಿ ಇವೆ. ೪೨ ಗ್ರಾಪಂಗಳಲ್ಲಿ ೨೧ ಪಿಡಿಒ ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬೊಬ್ಬ ಪಿಡಿಒ 2-3 ಪಂಚಾಯಿತಿಗಳ ಜವಾಬ್ದಾರಿ ಹೊತ್ತಿದ್ದಾರೆ.
ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ ೧೧೩೩ ಶಿಕ್ಷಕರ ಹುದ್ದೆಗಳ ಪೈಕಿ ೩೩೭ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ ೨೭೭ ಹುದ್ದೆಗಳಿದ್ದು, ೯೩ ಖಾಲಿ ಹುದ್ದೆಗಳಿವೆ. ಈ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನೆ ಅವಲಂಬಿಸಿದೆ. ಅಲ್ಲದೇ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಒಟ್ಟು ೨ ಸಾವಿರಕ್ಕೂ ಅಧಿಕ ಶಿಕ್ಷಕರ ಮಾಹಿತಿ, ಮಾರ್ಗದರ್ಶನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುವ ನೌಕರರು ೭ ಜನ ಮಾತ್ರ.ಆರೋಗ್ಯ ಇಲಾಖೆಯಲ್ಲಿ ೧೯೪ ಮಂಜೂರಿ ಹುದ್ದೆಗಳ ಪೈಕಿ 100 ಹುದ್ದೆಗಳು ಖಾಲಿ ಇವೆ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯರೂ ಇಲ್ಲದ ಸ್ಥಿತಿ ಇದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ೮೭ ಹುದ್ದೆಗಳಲ್ಲಿ ೩೧ ಹುದ್ದೆಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆಯ ೨೧ ಹುದ್ದೆಗಳ ಪೈಕಿ ೧೧ ಹುದ್ದೆ ಖಾಲಿ ಇವೆ. ಪಿಎಂಜಿಎಸ್‌ವೈ ಹಾಗೂ ಗ್ರಾಮೀಣ ಕುಡಿಯುವ ನೀರು ಯೋಜನೆ ಇಲಾಖೆಗಳಲ್ಲಿ ತಲಾ ೧೨ ಹುದ್ದೆಗಳಿದ್ದು, ತಲಾ ೧೦ ಹುದ್ದೆ ಖಾಲಿ ಇವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೬೧ ಹುದ್ದೆಗಳಲ್ಲಿ ೨೬ ಖಾಲಿ ಹುದ್ದೆಗಳಿವೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ೮೬ ಹುದ್ದೆಗಳಲ್ಲಿ ೭೫ ಹುದ್ದೆಗಳು ಖಾಲಿ ಇವೆ. ಪದವಿ ಪೂರ್ವ ಕಾಲೇಜುಗಳಲ್ಲಿ ೭೦ ಮಂಜೂರಿ ಹುದ್ದೆಗಳಲ್ಲಿ ೨೫ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ೮೭ ಹುದ್ದೆಗಳಲ್ಲಿ ೩೧ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಲೂಕಿನಲ್ಲಿ ಹಲವು ದಶಕಗಳ ಹಿಂದಿನ ವ್ಯವಸ್ಥೆಗೆ ಅನುಗುಣವಾಗಿ ಮಂಜೂರಿ ಹುದ್ದೆಗಳಿವೆ. ಈಗ ಕೆಲಸದ ವ್ಯಾಪ್ತಿ ಹೆಚ್ಚಿದೆ. ಸಿಬ್ಬಂದಿಯ ಕೊರತೆಯಿಂದ ತಾಲೂಕಿನ ಆಡಳಿತಾತ್ಮಕ ಕೆಲಸಕ್ಕೆ ಅನನುಕೂಲವಾಗಿದೆ. ಖಾಲಿ ಹುದ್ದೆ ಭರ್ತಿಯಾಗಬೇಕು ಎಂಬ ಬಹು ದೊಡ್ಡ ಬೇಡಿಕೆ ಇದೆ. ಸರ್ಕಾರ ಈಗ ಖಾಲಿ ಹುದ್ದೆಗಳನ್ನು ತುಂಬುವ ಯೋಚನೆಯಲ್ಲಿದ್ದು, ಈ ಸಂದರ್ಭದಲ್ಲಿ ನಮ್ಮ ತಾಲೂಕಿಗೆ ಬರಬಹುದಾದ ನೌಕರರಿಗಾಗಿ ಕಾಯಬೇಕಾಗಿದೆ.