ಕುಕನೂರು: ಪಟ್ಟಣದಲ್ಲಿರುವ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅನ್ನದಾನೀಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಂದು ನಾಮಕರಣ ಮಾಡಲಾಗುತ್ತಿದ್ದು, ಇದರಿಂದ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.
ಕಳೆದ ಕೆಲವು ತಿಂಗಳು ಹಿಂದೆ ಎಪಿಎಂಸಿಯಲ್ಲಿ ನಿರ್ಮಾಣವಾದ ಕೋಲ್ಡ್ ಸ್ಟೋರೆಜ್ ಉದ್ಘಾಟನೆ ವೇಳೆ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಸ್ಥಳೀಯರು ಅನ್ನದಾನೀಶ್ವರ ಹೆಸರು ಇಡಲು ಪ್ರಸ್ತಾಪಿಸಿದ್ದರು. ಆ ಪ್ರಸ್ತಾವನೆ ಹಿನ್ನೆಲೆ ಸಚಿವ ಬಸವರಾಜ ರಾಯರಡ್ಡಿ ಸಹ ಎಪಿಎಂಸಿಗೆ ಶ್ರೀಗಳು ದಾನ ನೀಡಿದ ಭೂಮಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಪ್ರಸ್ತಾವನೆ ಸೂಕ್ತಾರ್ಹ ಎಂದು ಸಹ ಬಣ್ಣಿಸಿದ್ದರು. ಸದ್ಯ ಎಪಿಎಂಸಿಗೆ ಅನ್ನದಾನೀಶ್ವರ ಹೆಸರು ಇಡಲು ಮುಂದಾಗಿದ್ದು ಸ್ಥಳೀಯ ಜನರಲ್ಲಿ ಸಂತಸ ಮೂಡಿದೆ.
ಕುಕನೂರು ಪಟ್ಟಣದಲ್ಲಿ ಮುಂಡರಗಿ ಅನ್ನದಾನೀಶ್ವರ ಮಠದ ಶಾಖಾಮಠ ಸಹ ಇದ್ದು, ಮಠಕ್ಕೆ ಒಳಪಡುವ ಆಸ್ತಿ ಇದಾಗಿತ್ತು. ಆಗ ಮುಂಡರಗಿ ಶ್ರೀಗಳು ಮಠದ ಜಾಗ ಕೃಷಿಕರಿಗೆ ವ್ಯಾಪಾರ ವಹಿವಾಟಿಗೆ ಅನುಕೂಲ ಆಗಲಿ ಎಂದು ದಾನದ ರೂಪದಲ್ಲಿ ಎಪಿಎಂಸಿ ಸ್ಥಾಪನೆಗೆ ನೀಡಿದ್ದರು.30 ರಂದು ಉದ್ಘಾಟನೆ: ಎಪಿಎಂಸಿಗೆ ನೂತನ ನಾಮಕರಣ ಕಾರ್ಯಕ್ರಮವನ್ನು ಆ.30ರಂದು ಸಚಿವ ಬಸವರಾಜ ರಾಯರಡ್ಡಿ ಉದ್ಘಾಟಿಸಲಿದ್ದಾರೆ. ಈಗಾಗಲೇ ಎಪಿಎಂಸಿಯ ಗೇಟಿನಲ್ಲಿ ಹೆಸರು ಸಹ ಬದಲಾವಣೆ ಮಾಡಲಾಗಿದೆ. ಕಚೇರಿಯಲ್ಲೂ ಸಹ ಹೆಸರು ಬದಲಾವಣೆ ಮಾಡಲಾಗಿದೆ.
ಕುಕನೂರು ಪಟ್ಟಣದಲ್ಲಿರುವ ಎಪಿಎಂಸಿಯ ಜಾಗ ಅನ್ನದಾನೀಶ್ವರ ಮಠದ್ದು, ಆಗ ಮುಂಡರಗಿ ಶ್ರೀಗಳು ಎಪಿಎಂಸಿಗೆ ದಾನದ ರೂಪದಲ್ಲಿ 19 ಎಕರೆ ಜಾಗ ನೀಡಿದ್ದಾರೆ. ಎಪಿಎಂಸಿಗೆ ಅನ್ನದಾನೀಶ್ವರ ಹೆಸರು ಇಡುತ್ತಿರುವುದು ಶ್ರೀಮಠಕ್ಕೆ ಸಂದ ಗೌರವವಾಗಿದೆ ಎಂದು ಕುಕನೂರು ಅನ್ನದಾನೀಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ ತಿಳಿಸಿದ್ದಾರೆ.