ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಗೆ ಹೆಚ್ಚು ಒತ್ತು ಕೊಟ್ಟ ಶಿರಸಂಗಿ ಲಿಂಗರಾಜರು ತ್ಯಾಗಕ್ಕೆ ಇಡೀ ಜಗತ್ತೇ ಮೆಚ್ಚುವಂತಹ ಕಾರ್ಯ ಮಾಡಿದ್ದಾರೆ ಎಂದರು.

ಮುಂಡರಗಿ: ಕೆರೆ- ಕಟ್ಟೆಗಳನ್ನು ಕಟ್ಟಿಸಿ, ಶಿಕ್ಷಣ ಸಂಸ್ಥೆಗಳಿಗೆ ಭೂಮಿದಾನ ಮಾಡಿ, ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಸಮಾಜದ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂದು ಶ್ರಮಿಸಿದ ಷಶಿರಸಂಗಿ ಲಿಂಗರಾಜರ ತ್ಯಾಗ ಮತ್ತು ದೂರದೃಷ್ಟಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.ಪಟ್ಟಣದ ಸ್ವಾಮಿ ವಿವೇಕಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆ, ತಾಲೂಕು ಕಸಾಪ ಹಾಗೂ ತ್ಯಾಗವೀರ ಶಿರಸಂಗಿ ಲಿಂಗರಾಜ ಸೇವಾ ಸಂಸ್ಥೆಗಳು ಸ್ವಾಮಿ ವಿವೇಕಾನಂದ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿರಸಂಗಿ ಲಿಂಗರಾಜರ ಜೀವನ ಮತ್ತು ಕೊಡುಗೆ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಾನದಲ್ಲಿ ವೀರರೆನಿಸಿಕೊಂಡು, ಶಿಕ್ಷಣ ಮತ್ತು ಸಮಾಜಮುಖಿ ಕೆಲಸಗಳಿಗೆ ಆದ್ಯತೆ ನೀಡಿ, ಆರ್ಥಿಕವಾಗಿ ಸಬಲರಿಲ್ಲದ್ದಿದ್ದರೂ ಅವರು ಶಿಕ್ಷಣ ಮತ್ತು ಪ್ರತಿಭೆಗಳಿಗೆ ಪುರಸ್ಕಾರ ನೀಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದು, ಸಮಾಜದ ಅಭಿವೃದ್ಧಿಯೇ ಮುಖ್ಯಮಂತ್ರವನ್ನಾಗಿಸಿಕೊಂಡು ಬಾಳಿದ ಶಿರಸಂಗಿ ಲಿಂಗರಾಜರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದರು.ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಗೆ ಹೆಚ್ಚು ಒತ್ತು ಕೊಟ್ಟ ಶಿರಸಂಗಿ ಲಿಂಗರಾಜರು ತ್ಯಾಗಕ್ಕೆ ಇಡೀ ಜಗತ್ತೇ ಮೆಚ್ಚುವಂತಹ ಕಾರ್ಯ ಮಾಡಿದ್ದಾರೆ. ಅವರು ಮಾಡಿದ ತ್ಯಾಗ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಅವರು ಮಾಡಿದ ಕಾರ್ಯಗಳಿಂದಾಗಿ ಈ ಭೂಮಿ ಇರುವವರೆಗೂ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.ಕಸಾಪ ತಾಲೂಕು ಘಟಕದ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿರಸಂಗಿ ಲಿಂಗರಾಜರು ಬಾಲ್ಯವಿವಾಹದಂಥ ಆಚರಣೆಗಳನ್ನು ವಿರೋಧಿಸಿ, ಸಮಾಜವನ್ನು ಜಾಗೃತಗೊಳಿಸಿದರು. ಸಮಾಜದ ಪ್ರತಿಯೊಂದು ಮಗು ಶಿಕ್ಷಣವಂತನಾಗಬೇಕು ಎಂದು ಆಶಯದಿಂದ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಶಿಕ್ಷಣ ಸೇವೆಯನ್ನು ಮಾಡಿದರು. ಅನ್ನ- ಶಿಕ್ಷಣ- ಅರಿವು ನೀಡಿ ಮಕ್ಕಳನ್ನು ಉನ್ನತೀಕರಿಸಿದರು ಎಂದರು.ಕಾರ್ಯಕ್ರಮದಲ್ಲಿ ಸೇವಾ ಸಂಸ್ಥೆಯ ಅಧ್ಯಕ್ಷ ಬಿ.ಸಿ. ನಾಡಗೌಡ್ರ, ನಾಗೇಶ ಹುಬ್ಬಳ್ಳಿ, ಸಿ.ಎಸ್. ಅರಸನಾಳ, ಸಿಆರ್‌ಪಿ ಎಸ್.ಎಚ್. ಇಟಗಿ, ಶಾಲಾ ಮುಖ್ಯೋಪಾಧ್ಯಾಯ ಪರಮೇಶ ನಾಯಕ, ಅಶೋಕ ಅಣ್ಣಿಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ಜರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ದೇವರಡ್ಡಿ ಇಮ್ರಾಪೂರ ಸ್ವಾಗತಿಸಿದರು. ಕಸಾಪ ಗೌ. ಕಾರ್ಯ ಮುಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಡದೀರಪ್ಪ ಲಿಂಗಶೆಟ್ಟರ ನಿರೂಪಿಸಿದರು. ಕಸಾಪ ಗೌ.ಕಾ. ವೀಣಾ ಪಾಟೀಲ ವಂದಿಸಿದರು.