ನೇಪಾಳ ಪ್ರವಾಸದಲ್ಲಿದ್ದ ರಟ್ಟೀಹಳ್ಳಿಯ 12 ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ವಾಪಸ್‌ ಊರಿಗೆ ಬರಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಟ್ಟೀಹಳ್ಳಿ: ನೇಪಾಳ ಪ್ರವಾಸದಲ್ಲಿದ್ದ ರಟ್ಟೀಹಳ್ಳಿಯ 12 ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ವಾಪಸ್‌ ಊರಿಗೆ ಬರಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಟ್ಟೀಹಳ್ಳಿ ಪಟ್ಟಣದ ಆರ್.ಎನ್. ಗಂಗೋಳ, ಅನಸೂಯಾ ರುದ್ರಗೌಡ, ಪುಟ್ಟಣ್ಣ ದ್ಯಾವಕ್ಕಳವರ, ಸುಮಾ ದ್ಯಾವಕ್ಕಳವರ, ಪೂರ್ಣಿಮಾ ಬಿ.ಎಚ್., ರೇಣುಕಾರಾಧ್ಯ ಆರ್., ಲಕ್ಷ್ಮಣ ಸುಣಗಾರ, ರೇಣುಕಾ ಲಕ್ಷ್ಮಣ, ಶಿವನಗೌಡ, ಪುಷ್ಪಾ ಚಿಲೂರ, ಶಂಭಣ್ಣ ಗೂಳಪ್ಪನವರ, ರೇಣುಕಾ ಗೂಳಪ್ಪನವರ ಹಾಗೂ ಬೆಂಗಳೂರಿನಿಂದ ಜಗದೀಶ, ಬಸವರಾಜ ಎಂಬ 14 ಪ್ರವಾಸಿಗರು ಸಿಲುಕಿದ್ದು, ಎಲ್ಲ ಪ್ರವಾಸಿಗರು ಸುರಕ್ಷಿತರಾಗಿದ್ದಾರೆ.

ಬೆಂಗಳೂರಿನಿಂದ ವಿಮಾನದ ಮೂಲಕ ಫೋಕ್ರಾಕ್ಕೆ ತೆರಳಿ, ಅಲ್ಲಿಂದ ಕಟ್ಮಂಡು ಸೇರಿದಂತೆ ಇನ್ನೂ ಅನೇಕ ಪ್ರೇಕ್ಷಣೀಯ ಸ್ಥಳಗಳು ಹಾಗೂ ದೇವಾಲಯ ವಿಕ್ಷಣೆಗೆಂದು ತೆರಳಿದ್ದ ಕುಟುಂಬಗಳು ಪ್ರವಾಹ ಉಂಟಾದ್ದರಿಂದ ಪ್ರವಾಸವನ್ನು ಮೊಟಕುಗೊಳಿಸಿ, ಸುರಕ್ಷಿತ ಪ್ರದೇಶದಲ್ಲಿರುವುದಾಗಿ ವಿಡಿಯೋ ಹಾಗೂ ದೂರವಾಣಿ ಮೂಲಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಕುಟುಂಬಸ್ಥರು ನಿರಾಂತಕವಾಗಿದ್ದಾರೆ.

ನೇಪಾಳದಲ್ಲಿ ರಣ ಭಯಂಕರ ಪ್ರವಾಹ ಉಂಟಾಗಿದೆ. ರಟ್ಟೀಹಳ್ಳಿ ಪಟ್ಟಣದ 6 ಕುಟುಂಬದ 12 ಸದಸ್ಯರು ದೇವಸ್ಥಾನ ವೀಕ್ಷಣೆಗೆ ತೆರಳಿದ್ದು, ಎಲ್ಲರೂ ಸುರಕ್ಷಿತ ಪ್ರದೇಶದಲ್ಲಿದ್ದಾರೆ. ರಾಜ್ಯ ಸರ್ಕಾರ, ಜಿಲ್ಲಾಡಳಿತ ಪಟ್ಟಣದ ಎಲ್ಲ ಪ್ರವಾಸಿಗರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಶಂಭಣ್ಣ ಗೂಳಪ್ಪನವರ ಮಗ ಶಿವರಾಜ ಗೂಳಪ್ಪನವರ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.